ಆಜಾನ್ ಕೂಗಿದ ಸ್ಥಳದಲ್ಲಿ ಗೋಮೂತ್ರ ಸಿಂಪಡಣೆ : ಪೊಲೀಸರೊಂದಿಗೆ ವಾಕ್ಸಮರ!

ಶಿವಮೊಗ್ಗ, ಮಾ. 20: ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇತ್ತೀಚೆಗೆ ಆಜಾನ್ ಕೂಗಿದ್ದ ಸ್ಥಳವನ್ನು, ಹಿಂದೂ ಸಂಘಟನೆ ಕಾರ್ಯಕರ್ತರು ಗೋಮೂತ್ರ ಸಿಂಪಡಿಸಿ ಶುದ್ದೀಕರಣಕ್ಕೆ ಯತ್ನಿಸಿದ ಘಟನೆ ಸೋಮವಾರ ನಡೆಯಿತು.

ಸ್ಥಳದಲ್ಲಿದ್ದ ಪೊಲೀಸರು, ಗೋಮೂತ್ರ ಸಿಂಪಡಣೆ ಮಾಡದಂತೆ ಕಾರ್ಯಕರ್ತರಿಗೆ ತಡೆಯೊಡ್ಡಿದರು. ಕಾರ್ಯಕರ್ತರ ಬಳಿಯಿದ್ದ ಗೋಮೂತ್ರದ ಬಾಟಲಿ ವಶಕ್ಕೆ ಪಡೆದುಕೊಳ್ಳಲು ಯತ್ನಿಸಿದರು.

ಪೊಲೀಸರ ಸೂಚನೆ ನಡುವೆಯೇ ಕಾರ್ಯಕರ್ತರು ಬಾಟಲಿಯಲ್ಲಿ ತಂದಿದ್ದ ಗೋಮೂತ್ರವನ್ನು ಮೆಟ್ಟಿಲುಗಳ ಮೇಲ್ಭಾಗದಲ್ಲಿ ಸಿಂಪಡಿಸಿ ಘೋಷಣೆ ಕೂಗಿದರು.

ಇದಕ್ಕೂ ಮುನ್ನ ಪ್ರತಿಭಟನಾನಿರತ ಕಾರ್ಯಕರ್ತರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಆಜಾನ್ ಕೂಗಲು ಅವಕಾಶ ನೀಡಿದ್ದೇಕೆ? ಎಂದು ಪ್ರಶ್ನಿಸಿದರು. ಇದರಿಂದ ಸ್ಥಳದಲ್ಲಿ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಡಿಸಿ ಕಚೇರಿ ಆವರಣದಲ್ಲಿ ಬಿಗಿ ಪೊಲೀಸ್ ಪಹರೆ ಹಾಕಲಾಗಿತ್ತು.

ಪ್ರತಿಭಟನೆ: ಡಿಸಿ ಕಚೇರಿ ಆವರಣದಲ್ಲಿ ಆಜಾನ್ ಕೂಗಿದವರ ವಿರುದ್ದ ಕ್ರಮಕೈಗೊಳ್ಳುವಂತೆ ಆಗ್ರಹಿಸಿ, ವಿಶ್ವ ಹಿಂದೂ ಪರಿಷತ್ – ಬಜರಂಗದಳ ಕಾರ್ಯಕರ್ತರು ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಪತ್ರ ಅರ್ಪಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಾಜೇಶ್ ಗೌಡ, ರಮೇಶ್ ಬಾಬು. ದೀನ ದಯಾಳ್, ನಾಗೇಶ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಘಟನೆ ಹಿನ್ನೆಲೆ: ಆಜಾನ್ ಕುರಿತಂತೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ನೀಡಿದ್ದ ಹೇಳಿಕೆ ವಿರೋಧಿಸಿ, ಮಾ.17 ರಂದು ಡಿಸಿ ಕಚೇರಿ ಆವರಣದಲ್ಲಿ ಮುಸ್ಲಿಂ ಸಮುದಾಯದ ಕೆಲವರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಯುವಕನೋರ್ವ ಪ್ರತಿಭಟನೆ ನಡೆಸಿದ ಸ್ಥಳದ ಬಳಿಯೇ ಆಜಾನ್ ಕೂಗಿದ್ದ.

ಇದಕ್ಕೆ ಸಂಬಂಧಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ನಡುವೆ ಪೊಲೀಸ್ ಇಲಾಖೆಯು ಆಜಾನ್ ಕೂಗಿದ ವ್ಯಕ್ತಿಯ ವಿರುದ್ದ ಮುಂಜಾಗ್ರತ ಪ್ರಕರಣ ದಾಖಲಿಸಿಕೊಂಡಿತ್ತು.

Previous post <strong>ಇಬ್ಬರು ಮಕ್ಕಳೊಂದಿಗೆ ಪತ್ನಿ ಆತ್ಮಹತ್ಯೆ ಪ್ರಕರಣ : ಪತಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ!</strong>
Next post ಅಸೆಂಬ್ಲಿ ಎಲೆಕ್ಷನ್ : ಎಎಪಿ ಪಕ್ಷದ ಮೊದಲ ಹಂತದ ಪಟ್ಟಿ ಪ್ರಕಟ