ದೇಶದ ಹಿರಿಯ ಪತ್ರಕರ್ತ ಕಾಮ್ರೇಡ್ ಎಂ.ಲಿಂಗಪ್ಪರಿಗೆ ನಾಗರೀಕರಿಂದ ಅದ್ಧೂರಿ ಸನ್ಮಾನ!

ಶಿವಮೊಗ್ಗ, ಡಿ. 31: ದೇಶದ ಹಿರಿಯ ಪತ್ರಕರ್ತ, ‘ಕ್ರಾಂತಿ ಭಗತ್’ ಪತ್ರಿಕೆ
ಸಂಪಾದಕರಾದ 98 ವರ್ಷ ವಯೋಮಾನದ ಕಾಮ್ರೇಡ್ ಎಂ. ಲಿಂಗಪ್ಪಅವರಿಗೆ ಶಿವಮೊಗ್ಗ ನಾಗರೀಕರು
ಅದ್ದೂರಿಯಾಗಿ ಸನ್ಮಾನಿಸಿ, ಅಭಿನಂದಿಸಿದರು.
ಶಿವಮೊಗ್ಗ ನಗರದ ಹೋಟೆಲ್ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಶನಿವಾರ ಶಾಂತವೇರಿ
ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಆಯೋಜಿಸಿದ್ದ ಸನ್ಮಾನ ಸಮಾರಂಭವೂ
ನಾಗರೀಕ ಅಭಿವಂದನಾ ಸಮಾರಂಭವಾಗಿ ಪರಿವರ್ತಿತವಾಗಿತ್ತು.
ವಿವಿಧ ಸಂಘಸಂಸ್ಥೆ, ರಾಜಕೀಯ ಪಕ್ಷಗಳ ಮುಖಂಡರು, ಸಾರ್ವಜನಿಕರು ಕಾಮ್ರೇಡ್
ಲಿಂಗಪ್ಪರಿಗೆ ಶಾಲು ಹೊದಿಸಿ ಹಾಗೂ ಪುಷ್ಪಗುಚ್ಛ ನೀಡಿ ಸನ್ಮಾನಿಸಿದರು. ಇಡೀ ಸಭಾಂಗಣ
ಲಿಂಗಪ್ಪ ಅವರ ನೂರಾರು ಅಭಿಮಾನಿಗಳಿಂದ ತುಂಬಿ ತುಳುಕುತ್ತಿತ್ತು.
ಹೋರಾಟಗಾರ : ಸಮಾಜವಾದಿ ವೇದಿಕೆಯ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಅವರು
ಪ್ರಾಸ್ತಾವಿಕವಾಗಿ ಮಾತನಾಡಿ, ಕಾಮ್ರೇಡ್ ಅವರು ಪತ್ರಕರ್ತರಾಗಿ ಹಾಗೂ ಸಮಾಜ ಸೇವಕರಾಗಿ
ಹಲವು ಜನರಿಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. 98 ರ ವಯೋಮಾನದಲ್ಲಿಯೂ ಸಕ್ರಿಯ
ಪತ್ರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅವರ ಅವಿರತ ಸಮಾಜ ಸೇವೆ ಅಭಿನಂದನೀಯ. ಇವರಿಗೆ ಕುವೆಂಪು ವಿಶ್ವ ವಿದ್ಯಾಲಯವು ಗೌರವ
ಡಾಕ್ಟರೇಟ್ ನೀಡಿ ಗೌರವಿಸಬೇಕು. ಈ ಸಂಬಂಧ ವೇದಿಕೆಯಿಂದ ವಿವಿ ಆಡಳಿತಕ್ಕೆ ಮನವಿ
ಮಾಡಲಾಗುವುದು ಎಂದು ಹೇಳಿದರು.
ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಅವರು ಮಾತನಾಡಿ, ಕಾಮ್ರೇಡ್ ಲಿಂಗಪ್ಪ ಅವರದು
ನೇರ – ನಿರ್ಭೀಡ ವ್ಯಕ್ತಿತ್ವವಾಗಿದೆ. ತಾವು ಚಿಕ್ಕವರಾಗಿದ್ದನಿಂದಲೂ ಅವರನ್ನು ಬಹಳ
ಹತ್ತಿರದಿಂದ ಗಮನಿಸಿದ್ದೆನೆ. ಇಳಿ ವಯಸ್ಸಿನಲ್ಲಿಯೂ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿ
ತೊಡಗಿಸಿಕೊಂಡಿರುವುದು ನಿಜಕ್ಕೂ ಅಭಿನಂದನೀಯ. ಅವರಿಗೆ ಗೌರವ ಡಾಕ್ಟರೇಟ್ ನೀಡಬೇಕೆಂಬ
ಬೇಡಿಕೆಗೆ ತಮ್ಮ ಬೆಂಬಲವೂ ಇದೆ ಎಂದು ತಿಳಿಸಿದರು.
ಮಾಜಿ ವಿಪ ಶಾಸಕ ಆರ್.ಪ್ರಸನ್ನಕುಮಾರ್ ಅವರು ಮಾತನಾಡಿ, ನೊಂದವರಿಗೆ ನ್ಯಾಯ
ಕಲ್ಪಿಸಿಕೊಡುವ ಕಾರ್ಯ ಮಾಡಿದ್ದಾರೆ. ಹಲವು ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ದ
ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು. ಅವರದು ಧೀಮಂತ ವ್ಯಕ್ತಿತ್ವವಾಗಿದೆ
ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್ . ಹೊನ್ನಳ್ಳಿ ಅವರು ಮಾತನಾಡಿ, ಕಾಮ್ರೇಡ್
ಎಂ. ಲಿಂಗಪ್ಪ ಅವರು ಸಾಮಾಜಿಕ ಹಿತಾಸಕ್ತಿಯ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಅನೇಕ
ಬಾರಿ ತಮ್ಮ ಕಚೇರಿಗೆ ಬಂದಿದ್ದಾರೆ. ಅನ್ಯಾಯ, ಅಕ್ರಮದ ವಿರುದ್ದ ಧ್ವನಿ
ಎತ್ತಿದ್ದಾರೆ. 98 ರ ವಯೋಮಾನದಲ್ಲಿಯೂ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರಿಗೆ ಗೌರವ ಡಾಕ್ಟರೇಟ್ ನೀಡಬೇಕೆಂಬ ಅಭಿಪ್ರಾಯ ಸಮಂಜಸವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಆರ್.ಕೆ.ಸಿದ್ದರಾಮಣ್ಣ
ವಹಿಸಿದ್ದರು. ಹಿರಿಯ ಸಮಾಜವಾದಿ ಹೋರಾಟಗಾರ ಪಿ.ಪುಟ್ಟಯ್ಯ, ಜಿಲ್ಲಾ ಪರಿಷತ್ ನ ಮಾಜಿ
ಉಪಾಧ್ಯಕ್ಷರಾದ ಪಾಣಿ ರಾಜಪ್ಪ, ಎಂಎಡಿಬಿ ಮಾಜಿ ಅಧ್ಯಕ್ಷರಾದ ಪದ್ಮನಾಭ ಭಟ್,
ಪ್ರಮುಖರಾದ ರಾಜಮ್ಮ, ವಿ.ರಾಜು, ಅಶ್ವತ್ಥ ನಾರಾಯಣಶೆಟ್ಟಿ ಸೇರಿದಂತೆ
ಮೊದಲಾದವರಿದ್ದರು.
ಸನ್ಮಾನ: ಇದೇ ವೇಳೆ ಕೊರೊನಾ ಸಂದರ್ಭದಲ್ಲಿ ರೋಗಿಗಳಿಗೆ ಸೇವೆ ಮಾಡಿದ ಆಯುರ್ವೇದ ತಜ್ಞ
ಪ್ರೇಮ್ ಕುಮಾರ್ ಅವರನ್ನು ಕೂಡ ಟ್ರಸ್ಟ್ ನಿಂದ ಅಭಿನಂದಿಸಲಾಯಿತು.

ಊರುಗೋಲು ನೀಡಿ ಅಭಿನಂದಿಸಿದ ಎಡಿಸಿ!

ಹಿರಿಯ ಪತ್ರಕರ್ತ ಕಾಮ್ರೇಡ್ ಎಂ.ಲಿಂಗಪ್ಪರಿಗೆ ಆಯೋಜಿಸಿದ್ದ ಅಭಿನಂದನಾ
ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್. ಹೊನ್ನಳ್ಳಿ ಅವರು ಊರುಗೋಲು
ನೀಡಿ ಲಿಂಗಪ್ಪ ಅವರನ್ನು ಅಭಿನಂದಿಸಿದ್ದು ವಿಶೇಷವಾಗಿತ್ತು. ಇದೇ ವೇಳೆ ಶಾಸಕ
ಡಿ.ಎಸ್.ಅರುಣ್ ಅವರು ತಮ್ಮ ಭಾಷಣದಲ್ಲಿ, ಅಪರ ಜಿಲ್ಲಾಧಿಕಾರಿಗಳ ಜನಪರ
ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಅಭಿನಂದಿಸಿದರು.

Previous post ದೇಶದ ಹಿರಿಯ ಪತ್ರಕರ್ತ ಕಾಮ್ರೇಡ್ ಎಂ.ಲಿಂಗಪ್ಪರಿಗೆ ಡಿ.31 ರಂದು ಸನ್ಮಾನ
Next post ಜ.6 ರಿಂದ 3000 ಹಳ್ಳಿ ಮಕ್ಕಳಿಗೆ ನೋಟ್ ಬುಕ್ ವಿತರಣೆ!