
ಕರ್ನಾಟಕ – ಆಂಧ್ರ ಪ್ರದೇಶ ಗ್ರಾಮಗಳ ನಡುವೆ ವಿವಾದ ಸೃಷ್ಟಿಸಿದ ದೇವರಿಗೆ ಬಿಟ್ಟ‘ಕೋಣ’ದ ಮಾಲೀಕತ್ವ!
ಬಳ್ಳಾರಿ, ಜ. 1: ಕೋಣವೊಂದರ ಮಾಲೀಕತ್ವ ವಿವಾದವೀಗ, ಕರ್ನಾಟಕ ಹಾಗೂ ಆಂಧ್ರಪ್ರದೇಶದ ಎರಡು ಗ್ರಾಮಗಳ ನಡುವೆ ವಿವಾದ ಸೃಷ್ಟಿಸಿದೆ. ಸದರಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ!
ಬಳ್ಳಾರಿ ಜಿಲ್ಲೆಯ ಬೊಮ್ಮನಹಾಳ್ ಹಾಗೂ ಆಂಧ್ರಪ್ರದೇಶದ ಮೆದೆಹಾಳ್ ಗ್ರಾಮಗಳ ನಡುವೆ ವಿವಾದ ಭುಗಿಲೆದ್ದಿದೆ. ಕೋಣದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಎರಡೂ ಗ್ರಾಮಸ್ಥರ ನಡುವೆ ಘರ್ಷಣೆ ಕೂಡ ನಡೆದಿದೆ.
ಎರಡೂ ಊರಿನ ಗ್ರಾಮಸ್ಥರು ಕೋಣ ತಮ್ಮ ಊರಿಗೆ ಸೇರಿದ್ದು ಎಂದು ಹೇಳುತ್ತಿದ್ದಾರೆ. ಕೋಣದ ತಾಯಿ ಎಮ್ಮೆ ತಮ್ಮ ಊರಿನಲ್ಲಿಯೇ ಇದೇ ಎಂದು ವಾದಿಸುತ್ತಿದ್ದಾರೆ. ಜೊತೆಗೆ ಡಿಎನ್ಎ ಪರೀಕ್ಷೆ ಮೂಲಕ ಮಾಲೀಕತ್ವ ಪತ್ತೆ ಮಾಡುಬೇಕು ಎಂದು ಆಗ್ರಹಿಸಿದ್ದಾರೆ.
ಏನೀದು ವಿವಾದ?: ಜನವರಿಯಲ್ಲಿ ಬೊಮ್ಮನಹಾಳ್ ಗ್ರಾಮದಲ್ಲಿ ಸಂಕಲಮ್ಮನ ಜಾತ್ರೆ ನಡೆಯಲಿದೆ. ಜಾತ್ರೆಗೆಂದೆ, 5 ವರ್ಷದ ಕೋಣವನ್ನು ಬೊಮ್ಮನಹಾಳ್ ನಲ್ಲಿ ಬಿಡಲಾಗಿತ್ತು.
ಆದರೆ ಕಳೆದ ಕೆಲ ದಿನಗಳಿಂದ ಬೊಮ್ಮನಹಾಳ್ ನಿಂದ ನಾಪತ್ತೆಯಾಗಿದ್ದ ಕೋಣ, ಸುಮಾರು 20 ಕಿ.ಮೀ. ದೂರದ ಮೆದೆಹಾಳ್ ನಲ್ಲಿ ಪತ್ತೆಯಾಗಿತ್ತು ಎಂದು ಬೊಮ್ಮನಹಾಳ್ ಗ್ರಾಮಸ್ಥರ ಆರೋಪವಾಗಿದೆ.
ಬೊಮ್ಮನಹಾಳ್ ನ ಕೆಲ ಗ್ರಾಮಸ್ಥರು ಮೆದೆಹಾಳ್ ಗೆ ತೆರಳಿ ಕೋಣ ತರಲು ತೆರಳಿದಾಗ, ಎರಡೂ ಗ್ರಾಮಸ್ಥರ ನಡುವೆ ಘರ್ಷಣೆ ನಡೆದಿತ್ತು. ಮೆದೆಹಾಳ್ ಗ್ರಾಮಸ್ಥರು ಕೋಣ ಬಿಟ್ಟಿಕೊಟ್ಟಿರಲಿಲ್ಲ.
ಮತ್ತೊಂದೆಡೆ, ಮೆದೆಹಾಳ್ ಗ್ರಾಮಸ್ಥರು ಸದರಿ ಕೋಣ ತಮ್ಮ ಊರಿನದ್ದಾಗಿದೆ ಎಂದು ವಾದಿಸುತ್ತಿದ್ದಾರೆ. ದ್ಯಾವಮ್ಮ ದೇವರ ಜಾತ್ರೆಗೆಂದು ಬಿಟ್ಟ ಕೋಣವಾಗಿದೆ. ಇದರ ತಾಯಿ ಎಮ್ಮೆ ನಮ್ಮ ಊರಿನಲ್ಲಿದೆ ಎಂದು ಹೇಳುತ್ತಿದ್ದಾರೆ.
ಇದೀಗ ಎರಡೂ ಗ್ರಾಮಸ್ಥರು ಕೋಣದ ಡಿಎನ್ಎ ಪರೀಕ್ಷೆ ನಡೆಸಬೇಕು. ಈ ಮೂಲಕ ಇದರ ನಿಜವಾದ ತಾಯಿ ಎಮ್ಮೆ ಯಾವ ಊರಿನಲ್ಲಿದೆ ಎಂಬುವುದು ಗೊತ್ತಾಗುತ್ತದೆ ಎಂದು ಹೇಳುತ್ತಿದ್ದಾರೆ.
ಸದ್ಯ ದೇವರ ಹರಕೆಗೆ ಬಿಟ್ಟ ಕೋಣದ ಮಾಲೀಕತ್ವ ವಿವಾದವು ಸಾಕಷ್ಟು ಕುತೂಹಲ ಕೆರಳಿಸಿದೆ. ಮುಂದೆನಾಗಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.