ಓರ್ವನನ್ನೇ ಮೂರು ಬಾರಿ ದರೋಡೆ ಮಾಡಿದ್ದ ಆರೋಪಿಗಳು ಅರೆಸ್ಟ್!

ಶಿವಮೊಗ್ಗ, ಮಾ. 21: ಓರ್ವ ವ್ಯಕ್ತಿಯನ್ನೇ ಮೂರು ಬಾರಿ ದರೋಡೆ ಮಾಡಿದ್ದ ಆರೋಪಿಗಳನ್ನು, ಶಿವಮೊಗ್ಗ ವಿನೋಬನಗರ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ ಘಟನೆ ನಡೆದಿದೆ.

ಶಿವಮೊಗ್ಗದ ಕಾಶೀಪುರ ಬಡಾವಣೆ ನಿವಾಸಿ ರಾಜು ಡಿ ಯಾನೆ ಚೊಟ್ಟ (29), ಹೊಸಮನೆಯ ಈಶ್ವರ್ (28), ರಾಜು ಯಾನೆ ಗುನ್ನಾ (20), ಶರಾವತಿನಗರದ ಮಣಿಕಂಠ (29), ಬೊಮ್ಮನಕಟ್ಟೆಯ ವಿಜಯ್ (25), ಹೊಸಮನೆಯ ರಘು (21) ಸೇರಿದಂತೆ ಕಾನೂನು ಸಂಘರ್ಷಕ್ಕೊಳಗಾದ ( ಅಪ್ರಾಪ್ತ ವಯಸ್ಸಿನ) ಮೂವರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ವಿನೋಬನಗರ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ನಡೆದಿದ್ದ 1 ದರೋಡೆ ಹಾಗೂ 1 ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ 2 ಎಟಿಎಂ ಕಾರ್ಡ್, ಒಂದು ಮೊಬೈಲ್ ಫೋನ್, 9200 ರೂ. ನಗದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಘಟನೆ ಹಿನ್ನೆಲೆ: ಮಾ.17 ರಂದು ಸಂಜೆ ಜೈಲ್ ರಸ್ತೆಯ ಮಲ್ಲಾಪುರ ಗ್ರಾಮದ ನಿವಾಸಿ ಚಂದ್ರಶೇಖರ್ (38) ಎಂಬುವರ ಬಳಿ ಆಗಮಿಸಿದ ಐವರು ಆರೋಪಿಗಳು, ಅವರ ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದರು.

ನಂತರ ಐವರು ಆಗಮಿಸಿ ಮೊಬೈಲ್ ಫೋನ್ ವಾಪಾಸ್ ಕೊಡಿಸುವುದಾಗಿ ಹೇಳಿ, ಹೊಸಮನೆಗೆ ಕರೆದುಕೊಂಡು ಹೋಗಿ ಹಣ ಕಿತ್ತುಕೊಂಡಿದ್ದರು. ತದನಂತರ ಮತ್ತೆ ಐವರ ತಂಡ ಮೊಬೈಲ್ ಕೊಡಿಸುವುದಾಗಿ ನಂಬಿಸಿ ಆಟೋವೊಂದರಲ್ಲಿ ಸೋಮಿನಕೊಪ್ಪದ ನಿರ್ಜನ ಪ್ರದೇಶಕ್ಕೆ ಕರೆ ತಂದಿತ್ತು.

ಅವರ ಮೇಲೆ ಹಲ್ಲೆ ನಡೆಸಿ ಎಟಿಎಂ ಕಾರ್ಡ್ ಕಿತ್ತುಕೊಂಡು ಪರಾರಿಯಾಗಿತ್ತು. ಈ ಸಂಬಂಧ ಮಾ. 18 ರಂದು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗಾಗಿ ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ,

ಡಿವೈಎಸ್ಪಿ ಎಂ.ಸುರೇಶ್ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಸಂಜೀವ್ ಕುಮಾರ್ ಜೆ.ಮಹಾಜನ್, ಸಬ್ ಇನ್ಸ್’ಪೆಕ್ಟರ್ ಗಳಾದ ಸುನೀಲ್ ಬಿ.ಸಿ., ಟಿ.ಡಿ.ಸಾಗರಕರ್ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಈ ತಂಡವು ಘಟನೆ ನಡೆದ 24 ಗಂಟೆಗಳ ಅವಧಿಯಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಸಫಲವಾಗಿದೆ.

Previous post ಅಸೆಂಬ್ಲಿ ಎಲೆಕ್ಷನ್ : ಎಎಪಿ ಪಕ್ಷದ ಮೊದಲ ಹಂತದ ಪಟ್ಟಿ ಪ್ರಕಟ
Next post <strong>ಖಾಸಗಿ ಆಸ್ಪತ್ರೆ ಸ್ಕ್ಯಾನಿಂಗ್ ಯಂತ್ರ ಸೀಜ್ ಮಾಡಿದ್ದೇಕೆ?</strong>