ಖಾಸಗಿ ಆಸ್ಪತ್ರೆ ಸ್ಕ್ಯಾನಿಂಗ್ ಯಂತ್ರ ಸೀಜ್ ಮಾಡಿದ್ದೇಕೆ?

ಶಿವಮೊಗ್ಗ, ಮಾ. 21: ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ, ಖಾಸಗಿ ಆಸ್ಪತ್ರೆಯೊಂದರ ಸ್ಕ್ಯಾನಿಂಗ್ ಯಂತ್ರವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಶಕ್ಕೆ ಪಡೆದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದಲ್ಲಿ ನಡೆದಿದೆ.

ಈ ಕುರಿತಂತೆ ಮಂಗಳವಾರ ಆರೋಗ್ಯ ಇಲಾಖೆ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ಇಲಾಖೆಯ ಡಿಐಎಂಸಿ ತಂಡವು, ಸಾಗರ ಪಟ್ಟಣದ ಸದರಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದೆ. ಪಿ.ಸಿ ಅಂಡ್ ಪಿ.ಎನ್.ಡಿ.ಟಿ. ಕಾಯ್ದೆ (ಗರ್ಭಧಾರಣೆ ಪೂರ್ವ ಮತ್ತು ಪ್ರಸವಪೂರ್ವ ವರ್ಗೀಕರಣ ತಂತ್ರಗಳ ಅಧಿನಿಯಮ 1994) ಅನ್ವಯ ಸ್ಕ್ಯಾನಿಂಗ್’ಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ. ಸ್ಕ್ಯಾನಿಂಗ್ ಯಂತ್ರ ಸೀಜ್ ಮಾಡಿ, ಸೀಲ್ ಮಾಡಲಾಗಿದೆ.

ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಸಲಹಾ ಸಮಿತಿಯಲ್ಲಿ ಸದರಿ ವಿಚಾರ ಮಂಡಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಸಿ ಸೂಚನೆ: ಸಾಗರ ತಾಲೂಕಿನ ಸೈದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ, ಮಾ. 18 ರಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸಿದ್ದರು.

ಈ ವೇಳೆ ಗ್ರಾಪಂ ವ್ಯಾಪ್ತಿಯ ತಡಗಳಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಆಸ್ಪತ್ರೆಗೆ ಆಗಮಿಸಿದ್ದ ಗರ್ಭೀಣಿಯೋರ್ವರ ಆರೋಗ್ಯವನ್ನು ಜಿಲ್ಲಾಧಿಕಾರಿಗಳು ವಿಚಾರಿಸಿದ್ದರು.

ಮಹಿಳೆ ಮಾತನಾಡಿ, ಸಾಗರದ ಸಂಜೀವಿನಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದು, ತನಗೆ ಗಂಡು ಮಗು ಆಗುವುದಾಗಿ ಆಸ್ಪತ್ರೆಯವರು ಹೇಳಿದ್ಧಾರೆ ಎಂಬ ವಿಷಯವನ್ನು ಜಿಲ್ಲಾಧಿಕಾರಿಗೆ ತಿಳಿಸಿದ್ದರು.

ಈ ಕುರಿತಂತೆ ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆ ಹಾಗೂ ಪಿಸಿ ಮತ್ತು ಪಿ.ಎನ್.ಡಿ.ಟಿ. ಸಕ್ಷಮ ಪ್ರಾಧಿಕಾರಕ್ಕೆ ಸೂಚನೆ ನೀಡಿ, ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಅದರಂತೆ ಸದರಿ ತಂಡವು ಖಾಸಗಿ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿ ಕಾನೂನು ರೀತ್ಯ ಕ್ರಮ ಜರುಗಿಸಲು ಮುಂದಾಗಿದೆ.

ಜಿಲ್ಲಾಧಿಕಾರಿ ಸಮ್ಮುಖದಲ್ಲಿಯೇ ಮಹಿಳೆ ಹೇಳಿದ್ದ ಸತ್ಯ..!

*** ಸಾಗರ ತಾಲೂಕಿನ ಸೈದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಾ. 18 ರಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸಿದ್ದರು. ಈ ವೇಳೆ ಗ್ರಾಪಂ ವ್ಯಾಪ್ತಿಯ ತಡಗಳಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಆಸ್ಪತ್ರೆಗೆ ಆಗಮಿಸಿದ್ದ ಗರ್ಭೀಣಿಯೋರ್ವರ ಆರೋಗ್ಯವನ್ನು ಜಿಲ್ಲಾಧಿಕಾರಿಗಳು ವಿಚಾರಿಸಿದ್ದರು. ಮಹಿಳೆ ಮಾತನಾಡಿ, ಸಾಗರದ ಸಂಜೀವಿನಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದು, ತನಗೆ ಗಂಡು ಮಗು ಆಗುವುದಾಗಿ ಆಸ್ಪತ್ರೆಯವರು ಹೇಳಿದ್ಧಾರೆ ಎಂಬ ವಿಷಯವನ್ನು ಜಿಲ್ಲಾಧಿಕಾರಿಗೆ ತಿಳಿಸಿದ್ದರು.

ಹೆಣ್ಣು ಭ್ರೂಣ ಹತ್ಯೆಗೆ ಬೀಳಬೇಕಿದೆ ಕಡಿವಾಣ

*** ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು, ‘ಗರ್ಭಧಾರಣೆ ಪೂರ್ವ ಮತ್ತು ಪ್ರಸವಪೂರ್ವ ವರ್ಗೀಕರಣ ತಂತ್ರಗಳ (ಪಿಸಿ&ಪಿಎನ್ ಡಿಟಿ) ಅಧಿನಿಯಮ 1994’ಜಾರಿಗೊಳಿಸಲಾಗಿದೆ. ಪ್ರಸವಪೂರ್ವ ಲಿಂಗ ಪತ್ತೆ ಹಚ್ಚುವುದು ಕಾನೂನುಬಾಹಿರವಾಗಿದೆ. ಶಿಕ್ಷಾರ್ಹ ಅಪರಾಧವಾಗಿದೆ.

ಇದರ ಹೊರತಾಗಿಯೂ ಕೆಲ ‘ಧನದಾಹಿ’ ಖಾಸಗಿ ಆಸ್ಪತ್ರೆ ಹಾಗೂ ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಅತ್ಯಂತ ಗುಪ್ತವಾಗಿ ಪ್ರಸವಪೂರ್ವ ಲಿಂಗ ಪತ್ತೆ ಹಚ್ಚುವ ಕಾರ್ಯ ನಡೆಸಿಕೊಂಡು ಬರುತ್ತಿವೆ. ಇಂತಹ ಕಾನೂನುಬಾಹಿರ ಕೃತ್ಯಗಳನ್ನು ಪತ್ತೆ ಹಚ್ಚಿ, ಕಡಿವಾಣ ಹಾಕಲು ಆರೋಗ್ಯ ಇಲಾಖೆ ಕಠಿಣ ಕ್ರಮಕೈಗೊಳ್ಳಬೇಕಾಗಿದೆ. ಈ ಮೂಲಕ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಕ್ರಮಕೈಗೊಳ್ಳಬೇಕಾಗಿದೆ ಎಂದು ಪ್ರಜ್ಞಾವಂತ ನಾಗರೀಕರು ಆಗ್ರಹಿಸುತ್ತಾರೆ.

Previous post <strong>ಓರ್ವನನ್ನೇ ಮೂರು ಬಾರಿ ದರೋಡೆ ಮಾಡಿದ್ದ ಆರೋಪಿಗಳು ಅರೆಸ್ಟ್!</strong>
Next post ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದತ್ತ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಚಿತ್ತ..?!