
ಪುತ್ರಿಯ ಪರ ಕಾಗೋಡು ತಿಮ್ಮಪ್ಪ ತಂತ್ರ : ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರತಿತಂತ್ರ?!
ಸಾಗರ, ಮಾ. 22: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ, ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಸ್ಥಳೀಯ ರಾಜಕೀಯ ವಲಯದಲ್ಲಿ ಮನೆಮಾಡಿದ್ದು, ‘ಕೈ’ ಟಿಕೆಟ್ ಪಾಲಿಟಿಕ್ಸ್ ದಿನಕ್ಕೊಂದು ತಿರುವು ಪಡೆದುಕೊಳ್ಳಲಾರಂಭಿಸಿದೆ!
ಇಷ್ಟು ದಿನ ಪುತ್ರಿ ಡಾ.ರಾಜನಂದಿನಿ ಪರವಾಗಿ ತೆರೆಮರೆಯಲ್ಲಿ ಟಿಕೆಟ್ ಲಾಬಿ ನಡೆಸುತ್ತಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಇದೀಗ ಪುತ್ರಿಯ ಪರವಾಗಿ ನೇರ ಅಖಾಡಕ್ಕಿಳಿದಿದ್ದಾರೆ!
ಕಾಗೋಡು ತಿಮ್ಮಪ್ಪರವರು ತಮ್ಮ ಬೆಂಬಲಿಗರ ಜೊತೆ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಮೊದಲಾದ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಸದರಿ ನಾಯಕರ ಭೇಟಿಯ ವೇಳೆ, ಸಾಗರ ಕ್ಷೇತ್ರದಿಂದ ಪುತ್ರಿ ಡಾ.ರಾಜನಂದಿನಿಗೆ ಟಿಕೆಟ್ ನೀಡುವಂತೆ ಕಾಗೋಡು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ಅವರೊಂದಿಗಿದ್ದ ಕೆಲ ನಾಯಕರು ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ನೀಡದಂತೆ ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
ಇದು ಸಾಗರ ಕೈ ಪಾಳೇಯದಲ್ಲಿ ಸಂಚಲನ ಮೂಡಿಸಿದೆ. ವಿಶೇಷವಾಗಿ, ಬೇಳೂರು ಗೋಪಾಲಕೃಷ್ಣ ಬೆಂಬಲಿಗರ ವಲಯದಲ್ಲಿ ಅಸಮಾಧಾನಕ್ಕೆಡೆ ಮಾಡಿಕೊಟ್ಟಿದೆ. ಟಿಕೆಟ್ ಸಿಕ್ಕೇ ಸಿಗುವ ವಿಶ್ವಾಸದಲ್ಲಿದ್ದ ಬೇಳೂರು ಬೆಂಬಲಿಗರು, ಕಾಗೋಡು ಅವರ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ಹೊರಹಾಕಲಾರಂಭಿಸಿದ್ದಾರೆ!
‘ಯಾರೂ ಏನೇ ಪ್ರಯತ್ನ ಮಾಡಿದರೂ ಬೇಳೂರು ಅವರಿಗೆ ಟಿಕೆಟ್ ತಪ್ಪಿಸಲು ಸಾಧ್ಯವಿಲ್ಲ. ಅವರು ಈ ಬಾರಿಯ ಚುನಾವಣಾ ಕಣಕ್ಕಿಳಿಯುವುದು ನಿಶ್ಚಿತ. ಇಷ್ಟರಲ್ಲಿಯೇ ಎಲ್ಲವೂ ಗೊತ್ತಾಗಲಿದೆ’ ಎಂದು ಬೇಳೂರು ಅವರ ಆಪ್ತರೋರ್ವರು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ.
ಒಟ್ಟಾರೆ ಸಾಗರ ‘ಕೈ’ ಪಾಳೇಯದಲ್ಲಿನ ಟಿಕೆಟ್ ರಾಜಕಾರಣ ಕಾವೇರಿದೆ. ದಿನಕ್ಕೊಂದು ತಿರುವು ಪಡೆದುಕೊಳ್ಳಲಾರಂಭಿಸಿದೆ. ಪಕ್ಷದ ವರಿಷ್ಠರು ಯಾರ ‘ಕೈ’ ಹಿಡಿಯಲಿದ್ದಾರೆ ಎಂಬುವುದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಪರಿಣಮಿಸಿದೆ.
ಬಿಜೆಪಿಗೆ ವರವಾಗಲಿದೆಯೇ ‘ಕೈ’ ಕಲಹ?!

*** ಸಾಗರ ವಿಧಾನಸಭಾ ಕ್ಷೇತ್ರದಲ್ಲಿ, ಬಿಜೆಪಿ ಪಕ್ಷದಲ್ಲಿಯೂ ಆಂತರಿಕ ಬೇಗುದಿ ಹೆಚ್ಚಿದೆ. ಶಾಸಕ ಹರತಾಳು ಹಾಲಪ್ಪ ವಿರುದ್ದ ಕೆಲವರು ಬಹಿರಂಗವಾಗಿ ಸೆಡ್ಡು ಹೊಡೆದಿದ್ದಾರೆ. ಟಿಕೆಟ್ ನೀಡದಂತೆ ಪಕ್ಷದ ವರಿಷ್ಠರಿಗೆ ಆಗ್ರಹಿಸಿದ್ದಾರೆ. ಇದೆಲ್ಲದರ ನಡುವೆಯೂ ಹರತಾಳು ಹಾಲಪ್ಪ ಅವರಿಗೆ ಬಿಜೆಪಿ ಟಿಕೆಟ್ ದೊರಕುವುದು ಖಚಿತ ಎಂದು ಹೇಳಲಾಗುತ್ತಿದೆ. ಈ ನಡುವೆ ಕಾಂಗ್ರೆಸ್ ಪಕ್ಷದಲ್ಲಿ, ಕಾಗೋಡು ತಿಮ್ಮಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ ಪಾಳೇಯದ ನಡುವೆ ಟಿಕೆಟ್ ವಿಚಾರದಲ್ಲಿ ನಡೆಯುತ್ತಿರುವ ಶೀತಲ ಸಮರದ ಲಾಭದ ಲೆಕ್ಕಾಚಾರ ಕಮಲ ಪಾಳೇಯದ್ದಾಗಿದೆ.