ಕೆ.ಎಸ್.ಈಶ್ವರಪ್ಪ ವಿರುದ್ದ ಆಯನೂರು ಮಂಜುನಾಥ್ ಗುಡುಗು!

ಶಿವಮೊಗ್ಗ, ಮಾ. 22: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ, ಶಿವಮೊಗ್ಗ ನಗರ ಕ್ಷೇತ್ರದ ಕಮಲ ಪಾಳೇಯದಲ್ಲಿ ಭಿನ್ನಮತ ಕಾವೇರಲಾರಂಭಿಸಿದೆ. ಕ್ಷೇತ್ರದ ಶಾಸಕ ಕೆ.ಎಸ್.ಈಶ್ವರಪ್ಪ ವಿರುದ್ದ ಸ್ವಪಕ್ಷೀಯ ಮುಖಂಡ, ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ಕಿಡಿಕಾರಿದ್ಧಾರೆ!

ಶಿವಮೊಗ್ಗ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆಯನೂರು ಮಂಜುನಾಥ್, ‘ಕಳೆದ 32 ವರ್ಷಗಳಿಂದ ಅವರಿಗೆ (ಕೆ.ಎಸ್.ಈಶ್ವರಪ್ಪ) ಪಕ್ಷ ಟಿಕೆಟ್ ನೀಡಿದೆ. ಅನೇಕ ಹಿರಿಯರು ಸಮರ್ಥರು ಪಕ್ಷದಲ್ಲಿದ್ದಾರೆ. ಪಕ್ಷ ಬೆಳೆಯದಿದ್ದಾಗ ಹೆಗಲು ಕೊಟ್ಟು ಕೆಲಸ ಮಾಡಿದವರನ್ನು ಬಿಟ್ಟ ತಮಗೆ ಹಾಗೂ ತಮ್ಮ ಮನೆಯವರಿಗೆ ಟಿಕೆಟ್  ಕೇಳುತ್ತೆನೆ ಎಂದರೇ ಸಾರ್ವಜನಿಕ – ಸಂಘಟನಾತ್ಮಕ ಸಂಕೋಚ ಬೇಡವೇ?

ಸಂಘಟನೆಯ ಕಾರ್ಯಕರ್ತರ ಮನಸ್ಸಿಗೆ ಎಷ್ಟು ನಿರಾಶೆ, ನೋವಾಗುತ್ತದೆ ಎಂಬ ಪ್ರಜ್ಞೆ ಬೇಡವೇ? ‘ಎಂದು ಕೆ.ಎಸ್.ಈಶ್ವರಪ್ಪ ಅವರ ಹೆಸರೇಳದೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

‘ಅವರನ್ನ ಬೇಕಾದರೆ ವಿಧಾನ ಪರಿಷತ್ ಗೆ ಆಯ್ಕೆ ಮಾಡಿ ಮಂತ್ರಿ ಮಾಡಲಿ, ತಮ್ಮ ಅಭ್ಯಂತರವಿಲ್ಲ. ಆದರೆ ಅವರಿಗೆ ಟಿಕೆಟ್ ನೀಡುವುದು ಸರಿಯಲ್ಲ’ ಎಂದು ಕೆ.ಎಸ್.ಈಶ್ವರಪ್ಪ ವಿರುದ್ದ ಹರಿಹಾಯ್ದಿದ್ದಾರೆ.

ಶಿವಮೊಗ್ಗದಲ್ಲಿ ಶಾಂತಿ ತರಲು ಬಯಸುತ್ತಿದ್ದೆನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶ ಕಟ್ಟುವ ದೃಷ್ಟಿಯಿಂದ ಅಲ್ಪಸಂಖ್ಯಾತರೊಂದಿಗೆ ಅನ್ಯೋನ್ಯತೆ ಬೆಳೆಸಿಕೊಳ್ಳಿ ಎಂದು ಕರೆ ಕೊಟ್ಟಿದ್ದಾರೆ. ಆದರೆ ಮೋದಿ ಹೆಸರೇಳಿ ಲಾಭ ತೆಗೆದುಕೊಳ್ಳುತ್ತಾರೆ.

ಆದರೆ ಅವರ ಅನಿಸಿಕೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಇಂತವರು ಮೋದಿ ಹಾಗೂ ಪಕ್ಷ ವಿರೋಧಿಗಳಾಗುತ್ತಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ತಾವು ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೆನೆ. ಪಕ್ಷ ತಮಗೆ ಟಿಕೆಟ್ ನೀಡುವ ವಿಶ್ವಾಸವಿದೆ. ಸಿಕ್ಕೇ ಸಿಗುವ ಆತ್ಮವಿಶ್ವಾಸ ತಮ್ಮದಾಗಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಆಯನೂರು ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.

Previous post <strong>ಪುತ್ರಿಯ ಪರ ಕಾಗೋಡು ತಿಮ್ಮಪ್ಪ ತಂತ್ರ : ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರತಿತಂತ್ರ?!</strong>
Next post ‘ನೂರಾರು ಕಾಮೆಂಟ್ ಬರ್ತವೆ, ಲೆಕ್ಕಕ್ಕೆ ಇಟ್ಕೊಳ್ಳಲ್ಲ… ಅವನದ್ದೇಕೆ ಕೇಳೋಕೆ ಹೋಗ್ತಿಯಾ..!’