
ಅಸೆಂಬ್ಲಿ ಎಲೆಕ್ಷನ್ : ಚೆಕ್ ಪೋಸ್ಟ್ ಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸೀಜ್..!
ಶಿವಮೊಗ್ಗ, ಮಾ. 24: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ವಿಶೇಷ ಚೆಕ್ ಪೋಸ್ಟ್ ಗಳನ್ನು ಪೊಲೀಸ್ ಇಲಾಖೆ ತೆರೆದಿದೆ. ಈ ವೇಳೆ ಸೂಕ್ತ ದಾಖಲೆಯಿಲ್ಲದೆ ಸಾಗಾಣೆ ಮಾಡುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ವಿವಿಧ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತಂತೆ ಶುಕ್ರವಾರ ಜಿಲ್ಲಾ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ‘ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಜಿಲ್ಲೆಯ ವಿವಿಧೆಡೆ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಸೂಕ್ತ ದಾಖಲೆಗಳಿಲ್ಲದೆ ಸಾಗಾಣೆ ಮಾಡುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿದೆ.
ವಶಕ್ಕೆ ಪಡೆದ ವಸ್ತುಗಳ ವಿವರ: ತೀರ್ಥಹಳ್ಳಿ ತಾಲೂಕು ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಲಾರಿಯಲ್ಲಿ ಸಾಗಿಸುತ್ತಿದ್ದ 29.70 ಲಕ್ಷ ರೂ. ಮೌಲ್ಯದ1100 ನಾನ್ ಸ್ಟಿಕ್ ದೋಸೆ ತವಾಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಲಾರಿಯಲ್ಲಿ ಸಾಗಿಸುತ್ತಿದ್ದ 8 ಲಕ್ಷ ರೂ. ಮೌಲ್ಯದ 30 ಟನ್ ತೂಕದ ಬೇಳೆ, ರವೆ, ಗೋಧಿ ಮತ್ತು ಇತರೆ ಆಹಾರ ಸಾಮಗ್ರಿಗಳಿದ್ದ 1000 ಬ್ಯಾಗ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಶಿವಮೊಗ್ಗ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ 7 ಲಕ್ಷ ರೂ. ಮೌಲ್ಯದ 10 ಟನ್ ತೂಕದ 404 ಅಕ್ಕಿ ಚೀಲಗಳನ್ನುಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೆ ಸಂಗ್ರಹಿಸಿಡಲಾಗಿದ್ದ 10 ಲಕ್ಷ ರೂ. ಮೌಲ್ಯದ ಬಟ್ಟೆ, ಸೀರೆ, ಕುಕ್ಕರ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹಾಗೆಯೇ ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಅಡ್ಡೆಗಳ ಮೇಲೆ ದಾಳಿ ನಡೆಸಿ, 8 ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸುಮಾರು 25 ಲೀಟರ್ ಮದ್ಯ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.