ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ!

ನವದೆಹಲಿ, ಮಾ. 24: ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ, ಗುಜರಾತ್ ರಾಜ್ಯದ ಸೂರತ್ ಜಿಲ್ಲಾ ನ್ಯಾಯಾಲಯ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ ಬೆನ್ನಲ್ಲೇ, ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.

ಈ ಸಂಬಂಧ ಲೋಕಸಭೆ ಸೆಕ್ರೆಟರಿಯೇಟ್ ಅವರು ಆದೇಶ ಹೊರಡಿಸಿದ್ದಾರೆ. ರಾಹುಲ್ ಗಾಂಧಿ ಅವರು ಕೇರಳ ರಾಜ್ಯದ ವಯನಾಡು ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು.

ಜನಪ್ರತಿನಿಧಿಗಳ ಕಾಯ್ದೆ ಅನ್ವಯ, ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸೆರೆವಾಸದ ಶಿಕ್ಷೆಗೆ ಒಳಗಾದ ಸಂಸದರು ಅಥವಾ ಶಾಸಕರ ಚುನಾಯಿತ ಸದಸ್ಯತ್ವ ರದ್ದುಗೊಳ್ಳುತ್ತದೆ. ಜೊತೆಗೆ ಆರು ವರ್ಷಗಳ ಕಾಲ ಅವರು ಯಾವುದೇ ಚುನಾವಣೆಗೆ ಸ್ಪರ್ಧಿಸುವುದರ ಮೇಲೆಯೂ ನಿರ್ಬಂಧಿಸಲು ಕಾಯ್ದೆಯಲ್ಲಿ ಅವಕಾಶವಿದೆ.

ರಾಹುಲ್ ನೀಡಿದ್ದ ಹೇಳಿಕೆಯೇನು?: ಏಪ್ರಿಲ್ 13, 2019 ರಲ್ಲಿ ಕರ್ನಾಟಕ ರಾಜ್ಯದ ಕೋಲಾರದಲ್ಲಿ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಪರ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ ಅವರು, ‘ಎಲ್ಲ ಕಳ್ಳರೂ ಮೋದಿ ಎಂಬ ಸರ್‌ನೇಮ್  ಹೊಂದಿರುತ್ತಾರೆ’ ಎಂಬ ವಿವಾದಾತ್ಮಕ  ಹೇಳಿಕೆ ನೀಡಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದರು. ನೀರವ್ ಮೋದಿ, ಲಲಿತ್ ಮೋದಿ ಪ್ರಕರಣಗಳನ್ನು ಉಲ್ಲೇಖಿಸಿ ಟೀಕಿಸಿದ್ದರು.

ದೂರು ದಾಖಲು: ಈ ಕುರಿತಂತೆ ಗುಜರಾತ್ ರಾಜ್ಯದ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ದ ದೂರು ದಾಖಲಿಸಿದ್ದರು. ರಾಹುಲ್ ಗಾಂಧಿ ಅವರು ಮೋದಿ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದರು. ರಾಹುಲ್ ಗಾಂಧಿ ವಿರುದ್ದ ಐಪಿಸಿ ಕಲಂ 499 ಹಾಗೂ 500 ರ ಅಡಿ ಪ್ರಕರಣ ದಾಖಲಿಸಲಾಗಿತ್ತು.

Previous post <strong>ಓಸಿ – ಮಟ್ಕಾ ದಂಧೆ ನಡೆಸುತ್ತಿದ್ದ ಇಬ್ಬರು ರೌಡಿ ಶೀಟರ್ ಗಳು ಗಡಿಪಾರು!</strong>
Next post <strong>ನಂದಿತಾ ಸಾವಿನ ಪ್ರಕರಣ : ಸಿಬಿಐ ತನಿಖೆಗೆ ಆಗ್ರಹಿಸಿ ಪ್ರಧಾನಿಗೆ ಎನ್.ಎಸ್.ಯು.ಐ. ಮನವಿ</strong>