ನಂದಿತಾ ಸಾವಿನ ಪ್ರಕರಣ : ಸಿಬಿಐ ತನಿಖೆಗೆ ಆಗ್ರಹಿಸಿ ಪ್ರಧಾನಿಗೆ ಎನ್.ಎಸ್.ಯು.ಐ. ಮನವಿ

ಶಿವಮೊಗ್ಗ, ಮಾ. 24; ಕಳೆದ 9 ವರ್ಷಗಳ ಹಿಂದೆ ನಡೆದ, ತೀರ್ಥಹಳ್ಳಿ ಬಾಲಕಿ ನಂದಿತಾ ನಿಗೂಢ ಸಾವಿನ ಪ್ರಕರಣದ ಕುರಿತಂತೆ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿ, ಶುಕ್ರವಾರ ಎನ್ಎಸ್.ಯು.ಐ ಸಂಘಟನೆಯು ಶಿವಮೊಗ್ಗ ನಗರದ ಡಿಸಿ ಕಚೇರಿಯಲ್ಲಿ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗೆ ಮನವಿ ಪತ್ರ ಅರ್ಪಿಸಿತು.

2014  ರಲ್ಲಿ ನಡೆದಿದ್ದ ಬಾಲಕಿ ನಂದಿತಾಳ ಅಸಹಜ ಸಾವಿನ ಕುರಿತಂತೆ, ಅಂದಿನ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಸಿಐಡಿ ತನಿಖೆಗೊಪ್ಪಿಸಿತ್ತು. ಅಂದು ಸಿಐಡಿ ತನಿಖೆ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಸಿಬಿಐ ತನಿಖೆಗೊಪ್ಪಿಸುವಂತೆ ಒತ್ತಾಯಿಸಿದ್ದರು.

ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿದ್ದ ಅಮಿತ ಶಾ ಅವರು ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ, ಬಾಲಕಿ ನಂದಿತಾಳ ಮನೆಗೆ ಭೇಟಿ ನೀಡಿ ಅಸಹಜ ಸಾವಿನ ಕುರಿತಂತೆ ಸಿಬಿಐ ತನಿಖೆ ನಡೆಸಿ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಕೇಂದ್ರ-ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದ್ದರೂ ಸಿಬಿಐ ತನಿಖೆ ನಡೆಸಲು ಆದೇಶಿಸಿಲ್ಲ.

ತಕ್ಷಣವೇ ಪ್ರಧಾನಮಂತ್ರಿಗಳು ಪ್ರಕರಣದ ತನಿಖೆಯನ್ನು ಸಿಬಿಐ ತನಿಖೆಗೊಪ್ಪಿಸಬೇಕು. ಬಾಲಕಿಯ ಸಾವಿಗೆ ಕಾರಣವಾದ ಸತ್ಯಾಂಶವನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಎನ್.ಎಸ್.ಯು.ಐ ಸಂಘಟನೆ ಒತ್ತಾಯಿಸಿದೆ.

ಮನವಿ ಅರ್ಪಿಸುವ ಸಂದರ್ಭದಲ್ಲಿ ಸಂಘಟನೆ ಮುಖಂಡರಾದ ರವಿ ಕಾಟಿಕೆರೆ, ಚರಣ್, ಹರ್ಷಿತ್, ವಿಜಯಕುಮಾರ್, ರವಿಕುಮಾರ್, ಚಂದ್ರೋಜಿರಾವ್, ಆಕಾಶ್, ಬಸವರಾಜ್ ಮೊದಲಾದವರಿದ್ದರು.

Previous post <strong>ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ!</strong>
Next post ಕಾಂಗ್ರೆಸ್ ಮುಖಂಡ ಪಿ.ವಿ.ವಿಶ್ವನಾಥ್ (ಕಾಶಿ) ನೇಮಕ