ದೇಶದ ಹಿರಿಯ ಪತ್ರಕರ್ತ ಕಾಮ್ರೇಡ್ಎಂ.ಲಿಂಗಪ್ಪ ವಿಧಿವಶ!

ಶಿವಮೊಗ್ಗ, ಮಾ. 24: ದೇಶದ ಹಿರಿಯ ಪತ್ರಕರ್ತ, ಅಪ್ರತಿಮ ಹೋರಾಟಗಾರ, ಮಾನವತಾವಾದಿ, ‘ಕ್ರಾಂತಿಭಗತ್’ ದಿನಪತ್ರಿಕೆ ಸಂಪಾದಕರಾದ ಕಾಮ್ರೇಡ್ ಎಂ.ಲಿಂಗಪ್ಪ ಅವರು ಶುಕ್ರವಾರ ಸಂಜೆ ವಿಧಿವಶರಾಗಿದ್ದಾರೆ. ಅವರಿಗೆ 98 ವರ್ಷ ವಯೋಮಾನವಾಗಿತ್ತು. ಪುತ್ರಿ, ಮೊಮ್ಮಗ ಸೇರಿದಂತೆ ಅಪಾರ ಬಂಧುಬಳಗ,ಅಭಿಮಾನಿಗಳನ್ನು ಅಗಲಿದ್ದಾರೆ.

‘ಕಳೆದ ನಾಲ್ಕು ದಿನಗಳ ಹಿಂದೆ ಮನೆಯಲ್ಲಿ ತಲೆ ಸುತ್ತಿನಿಂದ ಬಿದ್ದಿದ್ದ ಅವರನ್ನು, ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಣ್ಣ ಪ್ರಮಾಣದ ಸ್ಟ್ರೋಕ್ ಆಗಿದ್ದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಶುಕ್ರವಾರ ದಿಢೀರ್ ಆಗಿ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದು ನಮ್ಮನ್ನೆಲ್ಲ ಅಗಲಿದ್ದಾರೆ.

ಗೋಪಾಳದ ಪ್ರೆಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಶನಿವಾರ ಮಧ್ಯಾಹ್ನ 12 ಗಂಟೆ ನಂತರ ಅಂತ್ಯ ಸಂಸ್ಕಾರ ನಡೆಯಲಿದೆ’ ಎಂದು ಮೊಮ್ಮಗ ಅಶೋಕ್ ಮಾಹಿತಿ ನೀಡಿದ್ದಾರೆ.

ಹೋರಾಟದ ಜೀವನ: ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಎಂ.ಎನ್.ಕೋಟೆ ಗ್ರಾಮದಲ್ಲಿ 1926 ರಂದು ಕಾಮ್ರೇಡ್ ಎಂ. ಲಿಂಗಪ್ಪ ಅವರು ಜನಿಸಿದ್ದರು. ಅವರ ತಂದೆ ಊರಿಗೆ ಪಟೇಲರಾಗಿದ್ದರು. ಆದರೆ ಚಿಕ್ಕ ವಯಸ್ಸಿನಲ್ಲಿಯೇ ತಂದೆತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದರು.

ನಂತರ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಆಗಮಿಸಿದ್ದ ಅವರಿಗೆ ಅಲ್ಲಿ ಆಶ್ರಯ ದೊರಕಿರಲಿಲ್ಲ. ಬೆಂಗಳೂರಿನಲ್ಲಿ ಹೋಟೆಲ್ ಮತ್ತೀತರೆಡೆ ಕೂಲಿಕೆಲಸ ಮಾಡುತ್ತಿದ್ದರು. ಅಲ್ಲಿಂದ ಬಾಂಬೆಗೆ ತೆರಳಿದ ಅವರು ಹೋಟೆಲ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ತದನಂತರ ಬಾಂಬೆಯಲ್ಲಿ ಬಟ್ಟೆ ಹೊಲೆಯುವ ಕೆಲಸಕ್ಕೆ ಸೇರ್ಪಡೆಯಾಗಿದ್ದರು. ಮಹಾರಾಜರುಗಳಿಗೆ ಸೂಟ್ ಹೊಲೆಯುವ ಕಾರ್ಯ ನಡೆಸುತ್ತಿದ್ದರು. ಸೂಟ್ ಹೊಲೆಯುವಲ್ಲಿ ನಿಷ್ಣಾತರಾಗಿದ್ದರು.

ಹೋಟೆಲ್ ಕ್ಲೀನರ್, ಟೈಲರ್ ವೃತ್ತಿ ಮಾಡುವ ವೇಳೆ ಕಾರ್ಮಿಕ ಸಂಘಗಳನ್ನು ಕಟ್ಟಿಕೊಂಡು ಹಲವು ಹೋರಾಟ ನಡೆಸಿದ್ದರು. ಈ ವೇಳೆ ಕಮ್ಯೂನಿಸ್ಟ್ ಹೋರಾಟಗಾರರ ಸಂಪರ್ಕ ದೊರಕಿತ್ತು. ನಾಯಕರಾದ ಜಾರ್ಜ್ ಫರ್ನಾಂಡಿಸ್, ನಂಬೋದರಿ ಪಾಡ್, ಡಾಂಗೆ ಸೇರಿದಂತೆ ಹಲವು ನಾಯಕರ ಜೊತೆಗೂಡಿ ಕ್ರಾಂತಿಕಾರಿ ಹೋರಾಟಗಳಲ್ಲಿ ಭಾಗಿಯಾಗಿದ್ದರು. ಪೊಲೀಸರಿಂದ ಬಂಧನಕ್ಕೊಳಗಾಗಿ ಸಾಕಷ್ಟು ಬಾರಿ ಜೈಲು ಸೇರಿದ್ದರು.

ಕಾರ್ಮಿಕರ ಪರವಾದ ಕ್ರಾಂತಿಕಾರಿ ಹೋರಾಟಗಳ ಮೂಲಕ  ಬಾಂಬೆಯಲ್ಲಿ ಸಾಕಷ್ಟು ಹೆಸರು ಸಂಪಾದಿಸಿದ್ದ ಕಾಮ್ರೇಡ್, ಬಾಂಬೆ ಪೊಲೀಸರ ಮೋಸ್ಟ್ ವಾಂಟೆಂಡ್ ಪಟ್ಟಿಯಲ್ಲಿದ್ದರು. ಭೂಗತರಾಗಿದ್ದುಕೊಂಡೇ ಹಲವು ಹೋರಾಟ ನಡೆಸಿದ್ದ ಸಾಕಷ್ಟು ಊದಾಹರಣೆಗಳು ಅವರದ್ದಾಗಿದೆ. ಬಾಂಬೆಯಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಹೆಸರು ಸಂಪಾದಿಸಿದ್ದರು.

ಅವರ ಅಕ್ಕ ಶಿವಮೊಗ್ಗದಲ್ಲಿ ನೆಲೆಸಿದ್ದರು. ಅಕ್ಕನಿಗೆ ನೆರವಾಗುವ ಉದ್ದೇಶದಿಂದ ಶಿವಮೊಗ್ಗಕ್ಕೆ ಆಗಮಿಸಿದ್ದರು. ನಂತರ ದುರ್ಗಿಗುಡಿಯಲ್ಲಿ ಬಾಂಬೆ ಟೈಲರ್ ಅಂಗಡಿ ತೆಗೆದು ಸೂಟ್ ಹೊಲೆಯುವ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಹೋರಾಟದ ಜೀವನ ಮುಂದುವರಿಸಿದ್ದರು. 50 ವರ್ಷಗಳ ಹಿಂದೆ ದಿವಗಂತ ನಾಗೇಂದ್ರರಾವ್, ಮಲ್ಲಾರಾಧ್ಯ ಮತ್ತೀತರ ಸಹವರ್ತಿಗಳ ಮಾರ್ಗದರ್ಶನದಲ್ಲಿ ‘ಕ್ರಾಂತಿಭಗತ್’ ಪತ್ರಿಕೆ ಆರಂಭಿಸಿದ್ದರು.

ಕರ್ನಾಟಕ ಏಕೀಕರಣ ಸೇರಿದಂತೆ ಹಲವು ಹೋರಾಟಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು. ಜನಸಾಮಾನ್ಯರು, ನೊಂದವರ ಧ್ವನಿಯಾಗಿದ್ದರು. ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದರು. ಲೋಕಸಭೆ, ವಿಧಾನಸಭೆ ಚುನಾವಣೆಗೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಹಠವಾದಿಯಾಗಿದ್ದರು. ತನಗೆ ಸರಿಕಂಡಿದ್ದನ್ನು ಮಾಡುತ್ತಿದ್ದರು.

ಜನಪರ ಹೋರಾಟಗಳಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸುತ್ತಿದ್ದರು. ಯಾವುದೇ ಮುಲಾಜಿಗೆ ಒಳಗಾಗದೇ ಟೀಕಿಸುತ್ತಿದ್ದರು. 98 ರ ವಯೋಮಾನದಲ್ಲಿಯೂ ಪತ್ರಿಕೆ ಮುದ್ರಣ ಮಾಡಿ ವಿತರಿಸುತ್ತಿದ್ದರು. ಸರ್ಕಾರಿ ಕಚೇರಿ, ಸಭೆಸಮಾರಂಭಗಳಿಗೆ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ಹಲವು ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಮುಖ್ಯಮಂತ್ರಿಯಾಗಿದ್ದ ಹಲವು ನಾಯಕರು ಇವರ ಆಪ್ತರಾಗಿದ್ದರು. ಆದರೆ ಕೊನೆಯವರೆಗೂ ಯಾವುದೇ ಪ್ರಶಸ್ತಿ, ಬಿರುದು-ಸಮ್ಮಾನಗಳಿಗೆ ಲಾಬಿ ನಡೆಸಲಿಲ್ಲ. ಪ್ರಶಸ್ತಿ ಕೊಡುತ್ತೆನೆಂದು ಬಂದ ಸಂಘಸಂಸ್ಥೆಗಳ ಮುಖಂಡರಿಗೆ ಬೇಡವೆಂದು ವಾಪಾಸ್ ಕಳುಹಿಸುತ್ತಿದ್ದರು. ತಾವು ನಂಬಿದ ತತ್ವ, ಸಿದ್ಧಾಂತಗಳಿಗೆ ಬದ್ದರಾಗಿಯೇ ಮುನ್ನಡೆದರು.

ಅವರ ನಿಧನದಿಂದ ಪತ್ರಿಕೋದ್ಯಮ ಮಾತ್ರವಲ್ಲದೆ, ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅವರ ಕಮ್ಯೂನಿಸ್ಟ್, ಸಮಾಜವಾದಿ ಒಡನಾಡಿಗಳು ಶೋಕ ವ್ಯಕ್ತಪಡಿಸುತ್ತಾರೆ.

ಕಳಚಿದ ಹೋರಾಟದ ಕೊಂಡಿ…!

*** ಅಪ್ರತಿಮ ಹೋರಾಟಗಾರ, ಪ್ರಖರ ಸಮಾಜವಾದಿ, ಛಲಗಾರ, ಕ್ರಿಯಾಶೀಲ ವ್ಯಕ್ತಿತ್ವದ ಕಾಮ್ರೇಡ್ ಎಂ.ಲಿಂಗಪ್ಪ ಅವರು ತಾವು ನಂಬಿದ್ದ ಸಿದ್ಧಾಂತಕ್ಕೆ ಕೊನೆಯವರೆಗೂ ಬದ್ಧರಾಗಿದ್ದರು. ಸಾಮಾನ್ಯರಂತೆ ಬದುಕಿ ಬಾಳಿದರು. ತಮ್ಮ ಜೀವನದ ಬಹುಪಾಲನ್ನು ಹೋರಾಟಕ್ಕೆ ಮೀಸಲಾಗಿಟ್ಟಿದ್ದರು. ಅವರ ನಿಧನದಿಂದ ಮಲೆನಾಡು ಭಾಗದ ಪ್ರಖರ ಹೋರಾಟದ ಕೊಂಡಿಯೊಂದು ಕಳಚಿದಂತಾಗಿದೆ.

ವರ್ಣರಂಜಿತ ವ್ಯಕ್ತಿತ್ವದವರು : ಮುಖಂಡ ಪುಟ್ಟಯ್ಯ

*** ಕಾಮ್ರೇಡ್ ಎಂ. ಲಿಂಗಪ್ಪ ಅವರು ವರ್ಣರಂಜಿತ ವ್ಯಕ್ತಿತ್ವದವರು. ಜನಪರವಾದ ಯಾವುದೇ ಪ್ರತಿಭಟನೆಯಿರಲಿ ಅಲ್ಲಿ ಅವರು ಭಾಗವಹಿಸುತ್ತಿದ್ದರು. ನಿಷ್ಠುರ, ನೇರವಾದಿಯಾಗಿದ್ದರು. ತಮಗೆ ತೋಚಿದ್ದು ಮಾಡುತ್ತಿದ್ದರು. ಅವರು ಯಾರೇ ಆಗಿದ್ದರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಏಕಾಂಗಿಯಾಗಿಯೇ ಹೋರಾಟ ಮಾಡಿ ಬೆಳೆದುಕೊಂಡು ಬಂದವರು. ಮಿಂಚು ಶ್ರೀನಿವಾಸ್,  ರೈತ ಸಂಘದ ಪುಟ್ಟಪ್ಪ, ಕಾಮ್ರೇಡ್ ಎಂ. ಲಿಂಗಪ್ಪ ಅವರು ತಮಗೆ ದಿನನಿತ್ಯದ ಜಂಗಮರಂತಿದ್ದರು. ಪ್ರತಿನಿತ್ಯ ತಮ್ಮ ಪ್ರಿಂಟಿಂಗ್ ಪ್ರೆಸ್ ಗೆ ಆಗಮಿಸುತ್ತಿದ್ದರು. ಅವರ ಪತ್ರಿಕೆ ಕ್ರಾಂತಿ ಭಗತ್ ಮುದ್ರಿಸಿಕೊಡುತ್ತಿದ್ದೆ. ಕರ್ನಾಟಕ ಏಕೀಕರಣ ಚಳುವಳಿಯಿಂದ ಅವರನ್ನು ಗಮನಿಸಿಕೊಂಡು ಬರುತ್ತಿದ್ದೆನೆ. ಇತ್ತೀಚೆಗೆ ಭೇಟಿಯಾಗಿದ್ದ ಅವರನ್ನು ನೂರು ವರ್ಷ ಪೂರೈಸುತ್ತೀರಿ ಎಂದು ಹೇಳಿದ್ದೆ. ಅದೇ ಅವರ ಕೊನೆಯ ಭೇಟಿಯಾಗಿತ್ತು’ ಎಂದು ಹಿರಿಯ ಹೋರಾಟಗಾರ ಹಾಗೂ ಒಡನಾಡಿ ಪುಟ್ಟಯ್ಯ ಅವರು ತಿಳಿಸಿದ್ದಾರೆ.

‘ನೇರ-ನಿಷ್ಠುರವಾದಿ ವ್ಯಕ್ತಿತ್ವದವರು’ : ನಟರಾಜ್

*** ‘ಕಾಮ್ರೇಡ್ ಎಂ. ಲಿಂಗಪ್ಪ ಅವರು ನೇರ-ನಿಷ್ಠುರವಾದಿ ವ್ಯಕ್ತಿತ್ವದವರು. ಅದೆಷ್ಟೊ ಅಕ್ರಮ, ಅವ್ಯವಹಾರ, ಭ್ರಷ್ಟಾಚಾರಗಳನ್ನು ಬಯಲಿಗೆಳೆದು ಏಕಾಂಗಿಯಾಗಿ ಹೋರಾಟ ನಡೆಸಿದ್ದಾರೆ. ಬಡವರು, ಶೋಷಿತರು, ನೊಂದವರ ಸಂಕಷ್ಟಕ್ಕೆ ಧ್ವನಿಯಾಗಿದ್ದಾರೆ. ನೆರವು ಕೇಳಿಕೊಂಡು ಬಂದವರಿಗೆ ಸಹಾಯ ಮಾಡಿದ್ದಾರೆ. ಅವರೊಂದಿಗಿನ ಒಡನಾಟ ಮರೆಯಲು ಸಾಧ್ಯವಿಲ್ಲ. 98 ರ ಇಳಿ ವಯಸ್ಸಿನಲ್ಲಿಯೂ ಅವರ ಹೋರಾಟದ ಕಿಚ್ಚು ಕಡಿಮೆಯಾಗಿರಲಿಲ್ಲ. ಅವರ ಲವಲವಿಕೆ, ಆತ್ಮವಿಶ್ವಾಸದ ಜೀವನ ಅನನ್ಯವಾದುದು’ ಎಂದು ಕಾಮ್ರೇಡ್ ಎಂ.ಲಿಂಗಪ್ಪರ ಒಡನಾಡಿ ನಟರಾಜ್ ಅವರು ಮಾಹಿತಿ ನೀಡುತ್ತಾರೆ.

Previous post ಮಾ. 25 ರಂದು ಸರ್ಕಾರಿ ಬಸ್‍ಗಳ ಸಂಚಾರದಲ್ಲಿ ವ್ಯತ್ಯಯ!
Next post ಕಾಂಗ್ರೆಸ್ ಪಕ್ಷದ ಮೊದಲ ಲೀಸ್ಟ್ ಪ್ರಕಟ!