
ಕಾಂಗ್ರೆಸ್ ಪಕ್ಷದ ಮೊದಲ ಲೀಸ್ಟ್ ಪ್ರಕಟ!
- ಸೊರಬ – ಮಧು ಬಂಗಾರಪ್ಪ
- ಭದ್ರಾವತಿ – ಬಿ.ಕೆ.ಸಂಗಮೇಶ್
- ಸಾಗರ – ಬೇಳೂರು ಗೋಪಾಲಕೃಷ್ಣ
*******************************************************************************************************
ಶಿವಮೊಗ್ಗ, ಮಾ. 25: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ, ಕಾಂಗ್ರೆಸ್ ಪಕ್ಷ 124 ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮೊದಲ ಹಂತದ ಪಟ್ಟಿ ಪ್ರಕಟಿಸಿದೆ. ಇದರಲ್ಲಿ ಶಿವಮೊಗ್ಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ.
ಸೊರಬ ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕ ಮಧು ಬಂಗಾರಪ್ಪ, ಭದ್ರಾವತಿ ಕ್ಷೇತ್ರದಿಂದ ಹಾಲಿ ಶಾಸಕ ಬಿ.ಕೆ.ಸಂಗಮೇಶ್ವರ್ ಹಾಗೂ ಸಾಗರ ಕ್ಷೇತ್ರದಿಂದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ನೀಡಲಾಗಿದೆ.
ಸೊರಬ ಹಾಗೂ ಭದ್ರಾವತಿ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ನಿರೀಕ್ಷಿತವಾಗಿತ್ತು. ಆದರೆ ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಗೆ ಬೇಳೂರು ಗೋಪಾಲಕೃಷ್ಣ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪುತ್ರಿಯ ನಡುವೆ ಸಾಕಷ್ಟು ಪೈಪೋಟಿ ಕಂಡುಬಂದಿತ್ತು.
ಇತ್ತೀಚೆಗೆ ಕಾಗೋಡು ತಿಮ್ಮಪ್ಪ ಅವರು ತಮ್ಮ ಬೆಂಬಲಿಗರೊಂದಿಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು. ಪುತ್ರಿಗೆ ಟಿಕೆಟ್ ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡಿದ್ದರು ಎಂದು ಹೇಳಲಾಗಿತ್ತು.
ಇದು ಸಾಗರ ಕೈ ಪಾಳೇಯದಲ್ಲಿ ಬಿರುಸಿನ ಬೆಳವಣಿಗೆಗೆ ಕಾರಣವಾಗಿತ್ತು. ಬೇಳೂರು ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆಕ್ರೋಶ ಹೊರಹಾಕಿದ್ದರು. ಕೊನೆಗೂ ಬೇಳೂರು ಅವರಿಗೆ ವರಿಷ್ಠರು ಮಣೆ ಹಾಕಿದ್ದಾರೆ. ಇದರಿಂದ ಸಾಗರ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಅಖಾಡಕ್ಕೆ ವೇದಿಕೆ ಸಿದ್ದವಾಗುವುದು ಬಹುತೇಕ ಖಚಿತವಾಗಿದೆ.
ಎರಡನೇ ಹಂತದಲ್ಲಿ ಉಳಿದ 4 ಕ್ಷೇತ್ರಗಳಿಗೆ ಪ್ರಕಟ

*** ಪ್ರಸ್ತುತ ಶಿವಮೊಗ್ಗ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ, 3 ಕಡೆ ಕಾಂಗ್ರೆಸ್ ಪಕ್ಷ ಹುರಿಯಾಳುಗಳನ್ನು ಅಖಾಡಕ್ಕಿಳಿಸಿದೆ. ಉಳಿದಂತೆ ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ತೀರ್ಥಹಳ್ಳಿ ಹಾಗೂ ಶಿಕಾರಿಪುರ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಅಭ್ಯರ್ಥಿಗಳ ಹೆಸರು ಪ್ರಕಟಿಸುವ ಸಾಧ್ಯತೆಯಿದೆ. ಶಿಕಾರಿಪುರ ಹೊರತುಪಡಿಸಿ, ಉಳಿದ ಮೂರು ಕ್ಷೇತ್ರಗಳಲ್ಲಿ ಟಿಕೆಟ್ ಗೆ ಸಾಕಷ್ಟು ಲಾಬಿಯಿದೆ. ಯಾರಿಗೆ ಟಿಕೆಟ್ ಸಿಗಲಿದೆ ಎಂಬ ಕುತೂಹಲ ಮನೆ ಮಾಡಿದೆ.