
ದೇಶದ ಹಿರಿಯ ಪತ್ರಕರ್ತ ಕಾಮ್ರೇಡ್ ಎಂ.ಲಿಂಗಪ್ಪ ಅಂತ್ಯಕ್ರಿಯೆ : ಸಂತಾಪಗಳ ಮಹಾಪೂರ
ಶಿವಮೊಗ್ಗ, ಮಾ. 25: ಅನಾರೋಗ್ಯದಿಂದ ಶುಕ್ರವಾರ ವಿಧಿವಶರಾದ ದೇಶದ ಹಿರಿಯ ಪತ್ರಕರ್ತ ಕಾಮ್ರೇಡ್ ಎಂ.ಲಿಂಗಪ್ಪ ಅವರ ಅಂತ್ಯಕ್ರಿಯೆ, ಶಿವಮೊಗ್ಗ ನಗರದ ನ್ಯೂ ಮಂಡ್ಲಿಯಲ್ಲಿರುವ ರುದ್ರಭೂಮಿಯಲ್ಲಿ ಶನಿವಾರ ಮಧ್ಯಾಹ್ನ ನಡೆಯಿತು.

ಕಾಮ್ರೇಡ್ ಅವರ ಮೊಮ್ಮಗ ಅಶೋಕ್ ಅವರು ಅಂತಿಮ ವಿಧಿವಿಧಾನಗಳ ಪ್ರಕ್ರಿಯೆ ನೆರವೇರಿಸಿದರು. ಈ ವೇಳೆ ಕುಟುಂಬಸ್ಥರು, ಬಂಧುಬಳಗ, ಒಡನಾಡಿಗಳು ಉಪಸ್ಥಿತರಿದ್ದರು. ಅಗಲಿದ ಹಿರಿಯ ಚೇತನಕ್ಕೆ ಅಂತಿಮ ವಿದಾಯ ಹೇಳಿದರು.
ಇದಕ್ಕೂ ಮುನ್ನ ಶುಕ್ರವಾರ ಸಂಜೆಯಿಂದ ಗೋಪಾಳದ ಪ್ರೆಸ್ ಕಾಲೋನಿಯಲ್ಲಿರುವ ನಿವಾಸದ ಆವರಣದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೀಡಲಾಗಿತ್ತು. ರಾತ್ರಿಯಿಂದಲೇ ವಿವಿಧ ಸಂಘಸಂಸ್ಥೆ, ರಾಜಕೀಯ ಪಕ್ಷ ಸೇರಿದಂತೆ ನಾಗರೀಕರು ಕಾಮ್ರೇಡ್ ಅವರ ಅಂತಿಮ ದರ್ಶನ ಪಡೆದರು.

ಸಂತಾಪಗಳ ಮಹಾಪೂರ: ಕಾಮ್ರೇಡ್ ಅವರ ನಿಧನಕ್ಕೆ ಸಂತಾಪಗಳ ಮಹಾಪೂರವೇ ಹರಿದು ಬರುತ್ತಿದೆ. ಹಲವು ಗಣ್ಯರು, ಮುಖಂಡರು ಶೋಕ ವ್ಯಕ್ತಪಡಿಸಿದ್ದಾರೆ. ಹಿರಿಯ ಚೇತನಕ್ಕೆ ಅಶೃತರ್ಪಣ ಅರ್ಪಿಸಿದ್ದಾರೆ.

ವಿಧಿವಶ: ಕಳೆದ ಐದು ದಿನಗಳ ಹಿಂದೆ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದ ಕಾಮ್ರೇಡ್ ಅವರನ್ನು, ಸಾಗರ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಂಜೆ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದರು.
ಹಾಲಿ-ಮಾಜಿ ಶಾಸಕರು, ಡಿಸಿ-ಎಸ್ಪಿ, ಮುಖಂಡರಿಂದ ಗೌರವಾರ್ಪಣೆ
*** ಶನಿವಾರ ಬೆಳಿಗ್ಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಶಾಸಕ ಎಸ್.ರುದ್ರೇಗೌಡ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಮಾಜಿ ಶಾಸಕರುಗಳಾದ ಆರ್.ಕೆ.ಸಿದ್ದರಾಮಣ್ಣ, ಹೆಚ್.ಎಂ.ಚಂದ್ರಶೇಖರಪ್ಪ, ಜಿಲ್ಲಾ ವಾರ್ತಾಧಿಕಾರಿ ಶಫಿ ಸಾದುದ್ಧೀನ್,

ಪ್ರಗತಿಪರ ಹೋರಾಟಗಾರ ಕೆ.ಪಿ.ಶ್ರೀಪಾಲ್, ಡಿಎಸ್ಎಸ್ ಮುಖಂಡ ಗುರುಮೂರ್ತಿ, ರೈತ ಮುಖಂಡ ಕೆ.ಟಿ,ಗಂಗಾಧರ್, ಹಿರಿಯ ಸಮಾಜವಾದಿ ಧುರೀಣ ಪುಟ್ಟಯ್ಯ, ಮಲೆನಾಡು ರೈತ ಹೋರಾಟ ಸಮಿತಿ ಮುಖಂಡ ತೀ.ನಾ.ಶ್ರೀನಿವಾಸ್, ಎಎಪಿ ಪಕ್ಷದ ನಾಯಕಿ ಟಿ.ನೇತ್ರಾವತಿ, ಯುವ ಮುಖಂಡರಾದ ಐಡಿಯಲ್ ಗೋಪಿ, ಕೆ.ರಂಗನಾಥ್, ನಾಗರಾಜ್ ಕಂಕಾರಿ, ಧೀರರಾಜ್ ಹೊನ್ನವಿಲೆ, ಸಂಘಟನೆಗಳ ಮುಖಂಡರಾದ

ಕೆ.ವಿ.ವಸಂತಕುಮಾರ್, ಪರಿಸರ ರಮೇಶ್, ಜನಮೇಜಿರಾವ್ ಸೇರಿದಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು,

ಪತ್ರಿಕಾ ಸಹೋದ್ಯೋಗಿಗಳು ವಿವಿಧ ಸಂಘಸಂಸ್ಥೆಗಳ ಪ್ರಮುಖರು-ಗಣ್ಯರು ಸೇರಿದಂತೆ ನೂರಾರು ಜನರು ಕಾಮ್ರೇಡ್ ಎಂ.ಲಿಂಗಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.