ಶಿಕಾರಿಪುರದಲ್ಲಿ ನಡೆದಿದ್ದಾರೂ ಏನು?

ಶಿಕಾರಿಪುರ, ಮಾ. 27: ಭಾರೀ ಪ್ರತಿಭಟನೆ… ರಸ್ತೆ ತಡೆ… ಟೈರ್, ಫ್ಲೆಕ್ಸ್ ಗಳಿಗೆ ಬೆಂಕಿ… ಮಾಜಿ ಮುಖ್ಯಮಂತ್ರಿ ಮನೆ ಮೇಲೆ ಕಲ್ಲು, ಚಪ್ಪಲಿ ತೂರಾಟ… ಲಾಠಿ ಪ್ರಹಾರ… ಮುಗಿಲುಮುಟ್ಟಿದ ಘೋಷಣೆಗಳು…!

ಇದು ಮಾ. 27 ರಂದು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಪಟ್ಟಣದಲ್ಲಿ ಕಂಡುಬಂದ ಹಿಂಸಾಚಾರ – ಗದ್ದಲದ ಹೈಲೈಟ್ಸ್ ಗಳು…

ಹೌದು. ಶಿಕಾರಿಪುರ ಪಟ್ಟಣದ ರಾಜಕೀಯ ಇತಿಹಾಸದಲ್ಲಿ ಹಿಂದೆಂದೂ ಕಂಡುಕೇಳರಿಯದ ಅಹಿತಕರ ಘಟನೆಗಳು ನಡೆದು ಹೋದವು. ಇದಕ್ಕೆಲ್ಲ ಕಾರಣವಾಗಿದ್ದು, ಒಳ ಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ನಿರ್ಧಾರ.

ಸರ್ಕಾರದ ನಿರ್ಧಾರ ವಿರೋಧಿಸಿ ಭಾರೀ ಸಂಖ್ಯೆಯ ಬಣಜಾರ ಸಮುದಾಯದವರು ಶಿಕಾರಿಪುರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ಹಲವೆಡೆ ಟೈರ್ ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಏಕಾಏಕಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸವಿರುವ ರಸ್ತೆಯ ಬಳಿ ನುಗ್ಗಿ, ಪೊಲೀಸರ ಬ್ಯಾರಿಕೇಡ್ ಕಿತ್ತು ಹಾಕಿದರು. ನಂತರ ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ಹಾಗೂ ಚಪ್ಪಲಿ ತೂರಿದರು.

ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಹರಸಾಹಸ ನಡೆಸಿದರು. ಕಲ್ಲು ತೂರಾಟ, ಲಾಠಿ ಪ್ರಹಾರ, ನೂಕುನುಗ್ಗಲಿನಲ್ಲಿ ಪೊಲೀಸರು ಸೇರಿದಂತೆ ಹಲವು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ.

ಒಟ್ಟಾರೆ ವಿಧಾನಸಭೆ ಚುನಾವಣೆ ಸಮೀಪದಲ್ಲಿಯೇ ಶಿಕಾರಿಪುರದಲ್ಲಿ ಭುಗಿಲೆದ್ದ ದಿಢೀರ್ ಹಿಂಸಾಚಾರ ರಾಜಕೀಯವಾಗಿ ಹಲವು ರೀತಿಯ ಚರ್ಚೆ ಹುಟ್ಟು ಹಾಕುವಂತಾಗಿದ್ದು, ಮುಂದಿನ ದಿನಗಳಲ್ಲಿ ಯಾವ್ಯಾವ ತಿರುವು ಪಡೆದುಕೊಳ್ಳಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.

Previous post <strong>ಚನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅರೆಸ್ಟ್!</strong>
Next post ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಯತ್ನ – ಎನ್.ಎಸ್.ಯು.ಐ ಕಾರ್ಯಕರ್ತರು ಪೊಲೀಸ್ ವಶಕ್ಕೆ!