
ಕರ್ನಾಟಕ ವಿಧಾನಸಭೆ ಚುನಾವಣೆ ಅಖಾಡಕ್ಕೆ ಮೂಹೂರ್ತ ಫಿಕ್ಸ್!
- ಮತದಾನ ನಡೆಯುವ ದಿನಾಂಕ : ಮೇ 10
- ಮತ ಎಣಿಕೆ ನಡೆಯುವ ದಿನಾಂಕ : ಮೇ 13
***********************************************************************************************
ನವದೆಹಲಿ, ಮಾ. 29: ಕರ್ನಾಟಕ ವಿಧಾನಸಭೆ 16 ನೇ ಸಾರ್ವತ್ರಿಕ ಚುನಾವಣೆ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10 ರಂದು, ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 13 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಏಪ್ರಿಲ್ 20 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 10 ರಂದು ಮತದಾನ ನಡೆಯಲಿದೆ. ಮೇ 13 ರಂದು ಮತ ಎಣಿಕೆ ನಡೆಯಲಿದೆ.
ಬುಧವಾರ ಬೆಳಿಗ್ಗೆ ನವದೆಹಲಿಯ ವಿಜ್ಞಾನ ಭವನದಲ್ಲಿ, ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ವೇಳಾಪಟ್ಟಿಯ ವಿವರ ಪ್ರಕಟಿಸಿದರು. ಕರ್ನಾಟಕದಲ್ಲಿ ಸುಗಮ, ಶಾಂತಿಯುತ, ನಿಷ್ಪಕ್ಷಪಾತ, ನ್ಯಾಯಬದ್ದ ಚುನಾವಣೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯುಕ್ತರು ತಿಳಿಸಿದರು.
ಇಂದಿನಿಂದಲೇ ಸಂಹಿತೆ ಜಾರಿ: ಚುನಾವಣಾ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ, ತತ್’ಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಕೂಡ ಜಾರಿಗೊಂಡಿದೆ. ಕಟ್ಟುನಿಟ್ಟಾಗಿ ಮಾದರಿ ನೀತಿಸಂಹಿತೆ ಜಾರಿಗೊಳಿಸಲು ಚುನಾವಣಾ ಆಯೋಗ ಕ್ರಮಕೈಗೊಂಡಿದೆ.
ಸಮರೋತ್ಸಾಹ: ಚುನಾವಣಾ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ, ರಾಜಕೀಯ ಪಕ್ಷಗಳಲ್ಲಿ ಸಮರೋತ್ಸಾಹ ಕಂಡುಬಂದಿದೆ. ರಣಬಿಸಿಲಿನ ನಡುವೆ ಅಬ್ಬರದ ಪ್ರಚಾರಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾರಂಭಿಸಿವೆ. ಪ್ರಮುಖವಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಎಪಿ ಪಕ್ಷಗಳು ಅಖಾಡಕ್ಕೆ ಭಾರೀ ತಯಾರಿ ನಡೆಸಿವೆ.
ಯಾವಾಗ ನಡೆದಿತ್ತು ಚುನಾವಣೆ?: 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಕಳೆದ ಬಾರಿ ಮೇ 12, 2018 ರಂದು ಚುನಾವಣೆ ನಡೆದಿತ್ತು. ಪ್ರಸ್ತುತ ವಿಧಾನಸಭೆಯ ಅವಧಿಯು ಮೇ 24, 2023 ರಂದು ಮುಕ್ತಾಯಗೊಳ್ಳುತ್ತದೆ. ಪ್ರಸ್ತುತ ನಡೆಯುತ್ತಿರುವುದು 16 ನೇ ಸಾರ್ವತ್ರಿಕ ಚುನಾವಣೆಯಾಗಿದೆ.