ಬಿಜೆಪಿ ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ , ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ. ಈಗಾಗಲೇ ಕಾಂಗ್ರೆಸ್ ವರಿಷ್ಠರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಅಂತೆಕಂತೆ ವದಂತಿಗಳು ‘ಕೈ’ ಪಾಳೇಯದಲ್ಲಿ ಮನೆ ಮಾಡಿದೆ. ಇದು ಬಿರುಸಿನ ಚರ್ಚೆಗೆ ಎಡೆ ಮಾಡಿಕೊಟ್ಟಿದೆ!

ಶಿವಮೊಗ್ಗ ನಗರ ಕ್ಷೇತ್ರ : ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ನಿದ್ದೆಗೆಡಿಸಿದ  ಬಿಜೆಪಿ ಶಾಸಕ ಆಯನೂರು ಮಂಜುನಾಥ್..!

ವರದಿ : ಬಿ.ರೇಣುಕೇಶ್

ಶಿವಮೊಗ್ಗ, ಮಾ. 29: ಬಿಜೆಪಿ ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ , ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ. ಈಗಾಗಲೇ ಕಾಂಗ್ರೆಸ್ ವರಿಷ್ಠರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಅಂತೆಕಂತೆ ವದಂತಿಗಳು ‘ಕೈ’ ಪಾಳೇಯದಲ್ಲಿ ಮನೆ ಮಾಡಿದೆ. ಇದು ಬಿರುಸಿನ ಚರ್ಚೆಗೆ ಎಡೆ ಮಾಡಿಕೊಟ್ಟಿದೆ!

ಈ ವದಂತಿಗಳು, ಕಾಂಗ್ರೆಸ್ ಪಕ್ಷದ ಕೆಲ ಟಿಕೆಟ್ ಆಕಾಂಕ್ಷಿಗಳಲ್ಲಿ ಭಾರೀ ತಳಮಳ ಸೃಷ್ಟಿಸಿದೆ. ಎಲ್ಲಿ  ಟಿಕೆಟ್ ಕೈ ತಪ್ಪಲಿದೆಯೋ ಎಂಬ ಆತಂಕಕ್ಕೊಳಗಾಗುವಂತೆ ಮಾಡಿಸಿದೆ.  

ಈ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ವಾರ್ಡ್ ಅಧ್ಯಕ್ಷರುಗಳ ಮೂಲಕ, ಆಯನೂರು ಮಂಜುನಾಥ್ ಪಕ್ಷ ಸೇರ್ಪಡೆ ವಿರುದ್ದ ಲಾಬಿ ನಡೆಸುತ್ತಿದ್ದಾರೆ. ಹೈಕಮಾಂಡ್ ಮೇಲೆ ಒತ್ತಡ ಹಾಕಿಸುವ ತಂತ್ರ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರತಿಜ್ಞೆ!: 32 ವಾರ್ಡ್ ಗಳ ಕಾಂಗ್ರೆಸ್ ಅಧ್ಯಕ್ಷರು ಸೋಮವಾರ ದಿಢೀರ್ ಆಗಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಭೆ ಸೇರಿ ಪ್ರತಿಜ್ಞೆ ಮಾಡಿರುವುದು ಇದರ ಮುನ್ಸೂಚನೆ ಎಂದೇ ಹೇಳಲಾಗುತ್ತಿದೆ.

‘ಶಿವಮೊಗ್ಗ ನಗರ ಕ್ಷೇತ್ರದಿಂದ ಕಣಕ್ಕಿಳಿಯುವ ಆಕಾಂಕ್ಷೆ ವ್ಯಕ್ತಪಡಿಸಿ 11 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಕೆಲಸ ಮಾಡುತ್ತೆವೆ. ಒಂದು ವೇಳೆ ಇದನ್ನು ಹೊರತುಪಡಿಸಿ, ಬೇರೆಯವರಿಗೆ ಟಿಕೆಟ್ ನೀಡಿದರೆ ನಮ್ಮಗಳ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತವೆ. ಚುನಾವಣೆಯಲ್ಲಿ ಕಾರ್ಯನಿರ್ವಹಣೆ ಮಾಡುವುದಿಲ್ಲ. ತಟಸ್ಥರಾಗಿ ಉಳಿಯುತ್ತೆವೆ’ ಎಂದು ಪ್ರತಿಜ್ಞೆ ಮಾಡಿದ್ದಾರೆ.

ಬಂಡಾಯ: ಇತ್ತೀಚೆಗೆ ಆಯನೂರು ಮಂಜುನಾಥ್ ಅವರು ಶಿವಮೊಗ್ಗ ನಗರ ಕ್ಷೇತ್ರದಿಂದ ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂದು ಬಂಡಾಯದ ಕಹಳೆ ಮೊಳಗಿಸಿದ್ದಾರೆ. ತಾವು ಕೂಡ ಬಿಜೆಪಿ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ತಮಗೆ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದರು. 

ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಆಯನೂರು ಮಂಜುನಾಥ್ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ. ಅವರಿಗೆ ಟಿಕೆಟ್ ಸಿಗಲಿದೆ ಎಂಬ ವದಂತಿಗಳು ‘ಕೈ’ ಪಾಳೇಯದಲ್ಲಿ ಹಬ್ಬಿದೆ. ಒಟ್ಟಾರೆ ‘ಅವರ್ ಬಿಟ್ ಇವರ್ ಬಿಟ್ ಅವರ್ಯಾರು…’ ಎಂಬ ಮಾತಿನಂತೆ, ಟಿಕೆಟ್ ಗೆ ಅರ್ಜಿ ಸಲ್ಲಿಸಿದವರಿಗೆ ಅವಕಾಶ ದೊರಕಲಿದೆಯೇ? ಇಲ್ಲವೇ, ಕೊನೆ ಕ್ಷಣದಲ್ಲಿ ‘ಕೈ’ ಹಿಡಿಯುವವರಿಗೆ ವರಿಷ್ಠರು ಮಣೆ ಹಾಕಲಿದ್ದಾರೆಯೇ? ಎಂಬುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಪರಿಣಮಿಸಿದೆ!

‘ಕೈ’ ಟಿಕೆಟ್ ರೇಸ್ ನಲ್ಲಿ 11 ಮುಖಂಡರು : ಅಖಾಡಕ್ಕಿಳಿಯೋದು ಯಾರು?

*** ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ, ಸದ್ಯ ಕಾಂಗ್ರೆಸ್ ಪಕ್ಷದಿಂದ 11 ಜನ ಸ್ಪರ್ಧಾಕಾಂಕ್ಷಿಗಳು ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಪಾಲಿಕೆ ಕಾರ್ಪೋರೇಟರ್ ಹೆಚ್.ಸಿ.ಯೋಗೇಶ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ ಎಂದು ಆ ಪಕ್ಷದ ಮೂಲಗಳು ಹೇಳುತ್ತವೆ. ಮೂವರಲ್ಲಿ ಓರ್ವರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿತ್ತು. ಇದೀಗ ದಿಢೀರ್ ಆಗಿ ಕೈ ಟಿಕೆಟ್ ರೇಸ್ ನಲ್ಲಿ ಆಯನೂರು ಮಂಜುನಾಥ್ ಹೆಸರು ಕೇಳಿಬರಲಾರಂಭಿಸಿರುವುದು ಲೆಕ್ಕಾಚಾರಗಳು ತಲೆಕೆಳಗಾಗುವಂತೆ ಮಾಡಿದೆ.

ಕರ್ನಾಟಕ ವಿಧಾನಸಭೆ 16 ನೇ ಸಾರ್ವತ್ರಿಕ ಚುನಾವಣೆ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10 ರಂದು, ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 13 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. Previous post ಕರ್ನಾಟಕ ವಿಧಾನಸಭೆ ಚುನಾವಣೆ ಅಖಾಡಕ್ಕೆ ಮೂಹೂರ್ತ ಫಿಕ್ಸ್!
ಒಳ ಮೀಸಲಾತಿ ವಿರುದ್ಧದ ದಿಢೀರ್ ಹೋರಾಟಗಳು ಮುಂದುವರಿದಿದೆ. ಗುರುವಾರ ಬೆಳಿಗ್ಗೆ ಶಿವಮೊಗ್ಗ ನಗರದ ಹೊರವಲಯ ಮಲವಗೊಪ್ಪದಲ್ಲಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಬಣಜಾರ ಹಾಗೂ ಭೋವಿ ಸಮಾಜದವರು ಪ್ರತಿಭಟನೆ ನಡೆಸಿದರು. Next post ಶಿವಮೊಗ್ಗ – ಭದ್ರಾವತಿ ರಾಷ್ಟ್ರೀಯ ಹೆದ್ಧಾರಿಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ದಿಢೀರ್ ಪ್ರತಿಭಟನೆ!