
ಶಿವಮೊಗ್ಗ – ಭದ್ರಾವತಿ ರಾಷ್ಟ್ರೀಯ ಹೆದ್ಧಾರಿಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ದಿಢೀರ್ ಪ್ರತಿಭಟನೆ!
ಶಿವಮೊಗ್ಗ, ಮಾ. 30: ಒಳ ಮೀಸಲಾತಿ ವಿರುದ್ಧದ ದಿಢೀರ್ ಹೋರಾಟಗಳು ಮುಂದುವರಿದಿದೆ. ಗುರುವಾರ ಬೆಳಿಗ್ಗೆ ಶಿವಮೊಗ್ಗ ನಗರದ ಹೊರವಲಯ ಮಲವಗೊಪ್ಪದಲ್ಲಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಬಣಜಾರ ಹಾಗೂ ಭೋವಿ ಸಮಾಜದವರು ಪ್ರತಿಭಟನೆ ನಡೆಸಿದರು.
ಟೈರ್ ಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತತ್’ಕ್ಷಣವೇ ಒಳ ಮೀಸಲಾತಿ ಕಲ್ಪಿಸುವ ಆದೇಶ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಹೆದ್ದಾರಿಯ ಮತ್ತೊಂದು ಬದಿಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗಲಿಲ್ಲ. ಸ್ಥಳದಲ್ಲಿ ಬಿಗಿ ಪೊಲೀಸ್ ಪಹರೆ ಮಾಡಲಾಗಿತ್ತು. ಪೊಲೀಸರ ಮನವೊಲಿಕೆಯ ನಂತರ, ಪ್ರತಿಭಟನಾಕಾರರು ಪ್ರತಿಭಟನೆ ಸ್ಥಗಿತಗೊಳಿಸಿದರು.
ಪ್ರತಿಭಟನೆಯಲ್ಲಿ ಭೋವಿ ಸಮಾಜದ ಮುಖಂಡರಾದ ಎಸ್.ಗಿರೀಶ್, ಬಣಜಾರ ಸಮುದಾಯದ ಮುಖಂಡರಾದ ರಾಮಾನಾಯ್ಕ್, ಮಂಜುನಾಥ ನಾಯ್ಕ್, ಅಭಿಷೇಕ್ ಎಲ್, ಜಗದೀಶ್ ನಾಯ್ಕ್, ನಾನ್ಯಾನಾಯ್ಕ್, ಸುರೇಶ್ ನಾಯ್ಕ್, ಅಣ್ಣಪ್ಪನಾಯ್ಕ್, ವಸಂತನಾಯ್ಕ್, ರಾಜನಾಯ್ಕ್, ಭೋಜ್ಯನಾಯ್ಕ್, ಧರ್ಮನಾಯ್ಕ್, ಮಂಜನಾಯ್ಕ್, ಆನಂದನಾಯ್ಕ್ ಮೊದಲಾದವರಿದ್ದರು.
ಮುಂದುವರಿದ ಪ್ರತಿಭಟನೆ: ಕಳೆದ ಮೂರು ದಿನಗಳಿಂದ ಒಳ ಮೀಸಲಾತಿ ಆದೇಶದ ವಿರುದ್ದ, ಬಣಜಾರ ಸಮುದಾಯವು ಶಿವಮೊಗ್ಗ ತಾಲೂಕಿನ ವಿವಿಧೆಡೆ ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿದೆ.