
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ : ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳ ಕುತೂಹಲ!
ಶಿವಮೊಗ್ಗ, ಮಾ. 29: ಅಸೆಂಬ್ಲಿ ಚುನಾವಣೆ ಘೋಷಣೆಯಾಗಿದೆ. ಆದರೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಯಾರು ಅಭ್ಯರ್ಥಿಗಳಾಗಲಿದ್ದಾರೆ ಎಂಬುವುದು ಇಲ್ಲಿಯವರೆಗೂ ಸ್ಪಷ್ಟವಾಗಿಲ್ಲ. ಸಂಪೂರ್ಣ ನಿಗೂಢವಾಗಿ ಪರಿಣಮಿಸಿದೆ!
ಈ ಹಿಂದಿನ ಚುನಾವಣೆಯಲ್ಲಿ ಮೂರು ಪಕ್ಷಗಳಿಂದ ಕಣಕ್ಕಿಳಿಯುವ ಅಭ್ಯರ್ಥಿಗಳು ಯಾರೆಂಬುವುದು, ಚುನಾವಣೆ ಘೋಷಣೆಗೂ ಮುನ್ನವೇ ಖಚಿತವಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ, ಮೂರು ಪಕ್ಷಗಳ ಹುರಿಯಾಳುಗಳು ಯಾರೆಂಬುವುದು ಇನ್ನೂ ಸ್ಪಷ್ಟವಾಗಿಲ್ಲ.
ಕಮಲ ಕುತೂಹಲ: ಬಿಜೆಪಿಯಿಂದ ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆದರೆ ಸ್ಪಷ್ಟವಾಗುತ್ತಿಲ್ಲ.‘ಪಕ್ಷ ಕಣಕ್ಕಿಳಿಯುವಂತೆ ಸೂಚಿಸಿದರೆ ಸ್ಪರ್ಧೆಗೆ ಸಿದ್ದನಿದ್ದೆನೆ’ ಎಂದು ಈಗಾಗಲೇ ಕೆ.ಎಸ್.ಇ. ಸ್ಪಷ್ಟಪಡಿಸಿದ್ದಾರೆ.
ಉಳಿದಂತೆ ಹಲವು ನಾಯಕರು ಟಿಕೆಟ್ ಗೆ ಭಾರೀ ಪೈಪೋಟಿ ನಡೆಸುತ್ತಿದ್ದಾರೆ. ಕೆ.ಎಸ್.ಈಶ್ವರಪ್ಪರಿಗೆ ಟಿಕೆಟ್ ತಪ್ಪಿಸುವ ತೆರೆಮರೆ ಕಸರತ್ತುಗಳು ನಡೆಯುತ್ತಿರುವ ಮಾಹಿತಿಗಳಿವೆ. ಇದರಿಂದ ಯಾರಿಗೆ ಬಿಜೆಪಿ ವರಿಷ್ಠರು ಮಣೆ ಹಾಕಲಿದ್ದಾರೆ ಎಂಬ ಕುತೂಹಲವಿದೆ.
‘ಕೈ’ಪೈಪೋಟಿ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ, ಸದ್ಯ ಕಾಂಗ್ರೆಸ್ ಪಕ್ಷದಿಂದ 11 ಜನ ಸ್ಪರ್ಧಾಕಾಂಕ್ಷಿಗಳು ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಇದರಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಪಾಲಿಕೆ ಕಾರ್ಪೋರೇಟರ್ ಹೆಚ್.ಸಿ.ಯೋಗೇಶ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ ಎಂದು ಪಕ್ಷದ ಮೂಲಗಳು ಹೇಳುತ್ತವೆ.
ಈ ನಡುವೆ ಬಿಜೆಪಿ ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಯಾಗಲಿದ್ದು, ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿರುವುದು ‘ಕೈ’ ಪಾಳೇಯದ ಟಿಕೆಟ್ ಲೆಕ್ಕಾಚಾರಗಳು ಉಲ್ಟಾಪಲ್ಟಾ ಆಗುವಂತಾಗಿದೆ!
ಯಾರಿಗೆ ಹೊರೆ?: ಮತ್ತೊಂದೆಡೆ, ಜೆಡಿಎಸ್ ನಿಂದ ಎಂ.ಶ್ರೀಕಾಂತ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತುಗಳಿವೆ. ಆದರೆ ಅವರ ಸ್ಪರ್ಧೆಯೂ ಖಚಿತವಾಗಿಲ್ಲ. ಜೆಡಿಎಸ್ ವರಿಷ್ಠರ ಚಿತ್ತ ಯಾರತ್ತ ಎಂಬುವುದು ಇನ್ನಷ್ಟೆ ಖಚಿತವಾಗಬೇಕಾಗಿದೆ.
ಎಎಪಿ ರೆಡಿ: ಮೂರು ಪಕ್ಷಗಳಿಗೆ ಹೋಲಿಸಿದರೆ ಆಮ್ ಆದ್ಮಿ ಪಕ್ಷ ಈಗಾಗಲೇ ತನ್ನ ಅಭ್ಯರ್ಥಿ ಘೋಷಣೆ ಮಾಡಿದೆ. ಆ ಪಕ್ಷದ ನಾಯಕಿ ಟಿ.ನೇತ್ರಾವತಿ ಅವರು ಕಣಕ್ಕಿಳಿಯುವುದು ಈಗಾಗಲೇ ಖಚಿತವಾಗಿದೆ.