
4.50 ಕೋಟಿ ರೂ. ಮೌಲ್ಯದ ಸೀರೆಗಳ ದಾಸ್ತಾನು ಪತ್ತೆ..!
ಶಿವಮೊಗ್ಗ, ಏ. 1: ವಿಧಾನಸಭೆ ಚುನಾವಣೆ ಘೋಷಣೆ ಬೆನ್ನಲ್ಲೆ, ಜಿಲ್ಲೆಯಾದ್ಯಂತ ಮಾದರಿ ನೀತಿ-ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕ್ರಮಕೈಗೊಂಡಿದೆ.
ಈ ನಡುವೆ, ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಕೋಟ್ಯಾಂತರ ರೂ. ಮೌಲ್ಯದ ಸೀರೆಗಳ ದಾಸ್ತಾನು ಪತ್ತೆಯಾದ ಘಟನೆ ಶುಕ್ರವಾರ ನಡೆದಿದೆ.
ಚುನಾವಣೆ ಘೋಷಣೆಯಾದ ನಂತರ, ಇಡೀ ರಾಜ್ಯದಲ್ಲಿಯೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಸೀರೆಗಳ ದಾಸ್ತಾನು ಪತ್ತೆಯಾಗಿರುವುದು ಸಹಜವಾಗಿಯೇ ಎಲ್ಲರ ಹುಬ್ಬೇರುವಂತೆ ಮಾಡಿದೆ!
‘ವಶಕ್ಕೆ ಪಡೆದ ಸೀರೆಗಳ ಮೊತ್ತ 4.50 ಕೋಟಿ ರೂ.ಗಳಾಗಿದೆ’ ಎಂದು ಜಿಲ್ಲಾ ಪೊಲೀಸ್ ಇಲಾಖೆ ಶನಿವಾರ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಈ ಕುರಿತಂತೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.
ಯಾರಿಗೆ ಸೇರಿದ್ದು?: ಲಭ್ಯ ಮಾಹಿತಿಗಳ ಪ್ರಕಾರ, 30 ಸಾವಿರಕ್ಕೂ ಅಧಿಕ ಸೀರೆಗಳು ಪತ್ತೆಯಾಗಿದೆ. ಗೋಡೌನ್ ವೊಂದರಲ್ಲಿ ಇವುಗಳನ್ನು ದಾಸ್ತಾನು ಮಾಡಲಾಗಿತ್ತು ಎನ್ನಲಾಗಿದೆ. ಈ ಸೀರೆಗಳು ಯಾವ ವ್ಯಾಪಾರಿಗೆ ಸೇರಿದ್ದಾಗಿದೆ? ಚುನಾವಣಾ ಉದ್ದೇಶವಿದೆಯೇ? ಅಥವಾ ವ್ಯಾಪಾರಕ್ಕೆ ತರಿಸಲಾಗಿತ್ತೆ? ಎಂಬಿತ್ಯಾದಿ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.