shimoga | Shivamogga city drinking water supply: Are the people's representatives the ones who show concern for the people? shimoga | ಶಿವಮೊಗ್ಗ ನಗರ ಕುಡಿಯುವ ನೀರು ಪೂರೈಕೆ : ಜನಪರ ಕಾಳಜಿ ಪ್ರದರ್ಶಿಸುವವರೇ ಜನಪ್ರತಿನಿಧಿಗಳು?

shimoga | ಶಿವಮೊಗ್ಗ ನಗರ ಕುಡಿಯುವ ನೀರು ಪೂರೈಕೆ : ಜನಪರ ಕಾಳಜಿ ಪ್ರದರ್ಶಿಸುವವರೇ ಜನಪ್ರತಿನಿಧಿಗಳು?

ಶಿವಮೊಗ್ಗ (shivamogga), ಏ. 4: ನಾಗರೀಕರ ಮೂಲ ಅವಶ್ಯಕತೆಗಳಲ್ಲೊಂದಾದ ಶುದ್ಧ ಕುಡಿಯುವ ನೀರು ಪೂರೈಕೆ ಆಡಳಿತಗಾರರ ಮುಖ್ಯ ಜವಾಬ್ದಾರಿಯಾಗಿದೆ. ಆದರೆ ಜನಸಂಖ್ಯೆ, ಬೇಡಿಕೆಗೆ ಅನುಗುಣವಾಗಿ ನೀರು ಪೂರೈಕೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವಲ್ಲಿ ಆಡಳಿತದ ನಿರಾಸಕ್ತಿಯಿಂದ ಶುದ್ಧ ಕುಡಿಯುವ ನೀರಿಗೂ ನಾಗರೀಕರು ಪರದಾಡುವಂತಹ ದುಃಸ್ಥಿತಿ ನಿರ್ಮಾಣವಾಗುತ್ತಿದೆ. ಇದಕ್ಕೆ ಶಿವಮೊಗ್ಗ ನಗರ ತಾಜಾ ನಿದರ್ಶನವಾಗಿದೆ..!

ಹೌದು. ರಾಷ್ಟ್ರ – ರಾಜ್ಯದಲ್ಲಿ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಎರಡನೇ ಹಂತದ ನಗರಗಳಲ್ಲಿ, ಶಿವಮೊಗ್ಗವೂ ಒಂದಾಗಿದೆ. ಆದರೆ ಆಡಳಿತಗಾರರ ಕಾಳಜಿಯ ಕೊರತೆಯಿಂದ ನಗರದ ಬೆಳವಣಿಗೆ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯ ವ್ಯವಸ್ಥೆಗಳು ಅಭಿವೃದ್ದಿಯಾಗಿಲ್ಲ. ನಗರದ ಸುತ್ತಮುತ್ತಲಿನ ಅದೆಷ್ಟೊ ಬಡಾವಣೆಗಳಿಗೆ ಇಂದಿಗೂ ತುಂಗಾ ನದಿಯಿಂದ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ!!

ಪ್ರಮುಖ ನಗರ – ಪಟ್ಟಣಗಳಿಗೆ ಅಪಾರ ಪ್ರಮಾಣದ ಹಣ ವ್ಯಯಿಸಿ, ನೂರಾರು ಕಿ.ಮೀ. ದೂರದಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ‘ದೀಪದ ಬುಡದಲ್ಲಿ ಕತ್ತಲೆ’ ಎಂಬ ಮಾತಿನಂತೆ, ತುಂಗಾ ನದಿ ನಗರದ ಪಕ್ಕದಲ್ಲಿಯೇ ಹಾದು ಹೋಗಿದೆ. ಕೆಲವೇ ಕಿ.ಮೀ. ಅಂತರದಲ್ಲಿ ತುಂಗಾ ಜಲಾಶಯವಿದೆ. ಇಷ್ಟೆಲ್ಲದರ ಹೊರತಾಗಿಯೂ, ಶಿವಮೊಗ್ಗ ನಾಗರೀಕರಿಗೆ ಕುಡಿಯುವ ನೀರಿನ ಹಾಹಾಕಾರ ಮಾತ್ರ ತಪ್ಪಿಲ್ಲ. ನಗರದ ಹೊರವಲಯದ ಅದೆಷ್ಟೊ ಬಡಾವಣೆಗಳಿಗೆ ಇಲ್ಲಿಯವರೆಗೂ ಕುಡಿಯುವ ನೀರಿನ ಸಂಪರ್ಕ ದೊರಕಿಲ್ಲ.

ಪ್ರಸ್ತುತ ನಗರದ ಹೊರವಲಯದಲ್ಲಿ ನಾಯಿ ಕೊಡೆಗಳ ರೀತಿಯಲ್ಲಿ ಹೊಸ ಹೊಸ ವಸತಿ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಸದರಿ ಪ್ರದೇಶಗಳಲ್ಲಿ ಮನೆ ಕಟ್ಟುವವರು ಬೋರ್’ವೆಲ್ ಕೊರೆಯಿಸುವುದು ಅನಿವಾರ್ಯವೆಂಬ ದುಃಸ್ಥಿತಿ ನಿರ್ಮಾಣವಾಗಿದೆ. ಮನೆಗಳಿಗಾಗಿಯೇ ನಗರದ ಸುತ್ತಮುತ್ತಲು ಸಾವಿರಾರು ಬೊರ್’ವೆಲ್ ಕೊರೆಯಿಸಲಾಗುತ್ತಿದೆ. ಇದರಿಂದ ಪ್ರಾಕೃತಿಕ ವ್ಯವಸ್ಥೆಯ ಮೇಲೆಯೂ ಪರಿಣಾಮ ಬೀರುವಂತಾಗಿದೆ. ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ.

ಕಳೆದ ಒಂದೂವರೆ ದಶಕಗಳ ಅವಧಿಯಲ್ಲಿ, ಶಿವಮೊಗ್ಗ ನಗರ ಸರ್ವ ದಿಕ್ಕುಗಳಲ್ಲಿಯೂ, ಭಾರೀ ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ. ಹೊರವಲಯದ ಪ್ರದೇಶಗಳಲ್ಲಿ ಸಾವಿರಾರು ಜನರು ವಾಸಿಸುತ್ತಿದ್ದಾರೆ. ನಾನಾ ಕಾರಣಗಳ ನಿಮಿತ್ತ ನೆರೆಹೊರೆ ಜಿಲ್ಲೆಗಳಿಂದ ಶಿವಮೊಗ್ಗಕ್ಕೆ ಆಗಮಿಸಿ ನೆಲೆಸುವವರ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ.

ಆದರೆ ಇದಕ್ಕೆ ಅನುಗುಣವಾಗಿ ಕುಡಿಯುವ ನೀರು ಸೌಕರ್ಯದ ವ್ಯವಸ್ಥೆ ಬೆಳವಣಿಗೆಯಾಗಿಲ್ಲ. ಕಳೆದ ಹಲವು ವರ್ಷಗಳಿಂದ 24*7 ಕುಡಿಯುವ ನೀರಿನ ವ್ಯವಸ್ಥೆ ಅನುಷ್ಠಾನ ಮಾಡಲಾಗುತ್ತಿದೆ. ಈ ವ್ಯವಸ್ಥೆ ಸಂಪೂರ್ಣವಾಗಿ ಕಾರ್ಯಗತಗೊಂಡರೂ ನಗರದ ನೀರಿನ ಹಾಹಾಕಾರ ಸಮಸ್ಯೆ ಪರಿಹಾರವಾಗುವುದಿಲ್ಲವಾಗಿದೆ.

ಜನಪ್ರತಿನಿಧಿಗಳೇ ಗಮನಿಸಿ! : ನಗರದ ಭವಿಷ್ಯದ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಕುಡಿಯುವ ನೀರಿನ ವ್ಯವಸ್ಥೆ ಅನುಷ್ಠಾನವಾಗಬೇಕಾಗಿದೆ. ಹೊಸದಾಗಿ ಅತ್ಯಾಧುನಿಕ ನೀರು ಶುದ್ಧೀಕರಣ ಘಟಕ ನಿರ್ಮಾಣ ತುರ್ತು ಅಗತ್ಯವಾಗಿದೆ. ನಗರದಂಚಿನಲ್ಲಿರುವ ಜನವಸತಿ ಪ್ರದೇಶಗಳಿಗೆ, ಗ್ರಾಮಗಳಿಗೆ ತುಂಗಾ ಜಲಾಶಯದ ನೀರು ಪೂರೈಕೆಯಾಗುವ ವ್ಯವಸ್ಥೆ ಮಾಡಬೇಕಾಗಿದೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಮೂಲಸೌಕರ್ಯ, ಸೌಂದರ್ಯಕ್ಕೆಂದೇ ಬರೋಬ್ಬರಿ ಸಾವಿರ ಕೋಟಿ ರೂ.ಗಳನ್ನು ವ್ಯಯಿಸಲಾಗಿತ್ತು. ಸದ್ಯ ಹಲವೆಡೆ ಹೇಳ ಹೆಸರಿಲ್ಲದಂತೆ ಸ್ಮಾರ್ಟ್ ಸಿಟಿ ಕಾಮಗಾರಿಗಳು ಹಾಳಾಗುತ್ತಿವೆ. ಆದರೆ ನಾಗರೀಕರಿಗೆ ಅತ್ಯಂತ ಅವಶ್ಯಕವಾದ ಕುಡಿಯುವ ನೀರು ಪೂರೈಕೆಗೆ ನಯಾಪೈಸೆ ಖರ್ಚು ಮಾಡಲಿಲ್ಲ.

ಬೇಕಾಬಿಟ್ಟಿಯಾಗಿ ವ್ಯಯಿಸಿದ ಹಣದಲ್ಲಿ, ಕೆಲ ಕೋಟಿ ರೂ. ವ್ಯಯಿಸಿದ್ದರೂ ನಗರದ ಲಕ್ಷಾಂತರ ನಾಗರೀಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಲಭ್ಯವಾಗುತ್ತಿತ್ತು. ನಾಗರೀಕರು ಕೂಡ ನೆಮ್ಮದಿಯ ನಿಟ್ಟುಸಿರುವ ಬಿಡುತ್ತಿದ್ದರು. ಹಲವೆಡೆ ಪ್ಲೋರೈಡ್ ಯುಕ್ತ ಬೋರ್’ವೆಲ್ ನೀರು ಕುಡಿಯುತ್ತಿರುವ ನಾಗರೀಕರಿಗೂ ಅನುಕೂಲವಾಗುತ್ತಿತ್ತು.

ಶಿವಮೊಗ್ಗದ ಜನಪ್ರತಿನಿಧಿಗಳು ಇತ್ತ ಪ್ರಾಮಾಣಿಕ ಚಿತ್ತ ಹರಿಸಬೇಕಾಗಿದೆ. ಸರ್ವಪಕ್ಷಗಳ ಜನಸೇವಕರು ನೀರಿನ ವಿಷಯದಲ್ಲಿ ರಾಜಕೀಯ ಬದಿಗೊತ್ತಿ, ಒಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆ. ಮುಖ್ಯಮಂತ್ರಿಗಳ ಬಳಿ ಸರ್ವಪಕ್ಷಗಳ ನಿಯೋಗ ಕೊಂಡೊಯ್ದು, ಶಿವಮೊಗ್ಗದಲ್ಲಿ ಹೊಸ ನೀರು ಶುದ್ದೀಕರಣ ಘಟಕ ಸ್ಥಾಪನೆಗೆ ಅನುದಾನ ಮಂಜೂರು ಮಾಡಿಸಬೇಕಾಗಿದೆ. ಭವಿಷ್ಯದ 50 ವರ್ಷಗಳ ನಗರ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ನೀರು ಪೂರೈಕೆಯ ವ್ಯವಸ್ಥೆ ಮಾಡಬೇಕಾಗಿದೆ.

shimoga, april 4: Due to the administration’s apathy in formulating and implementing a water supply plan according to population and demand, a dire situation is being created where citizens are struggling even for clean drinking water. Shivamogga city is a fresh example of this..!

Shimoga | Shivamogga: Municipal administration deadline for pig farm owners! shimoga | ಶಿವಮೊಗ್ಗ : ಹಂದಿ ಸಾಕಾಣಿಕೆ ಮಾಲೀಕರಿಗೆ ಪಾಲಿಕೆ ಆಡಳಿತದ ಡೆಡ್’ಲೈನ್! Previous post shimoga | ಶಿವಮೊಗ್ಗ : ಹಂದಿ ಸಾಕಾಣಿಕೆ ಮಾಲೀಕರಿಗೆ ಪಾಲಿಕೆ ಆಡಳಿತದ ಡೆಡ್’ಲೈನ್!
shimoga | Shivamogga: Two-day meat sale ban – when what is the reason? shimoga | ಶಿವಮೊಗ್ಗ : ಎರಡು ದಿನ ಮಾಂಸ ಮಾರಾಟ ನಿಷೇಧ – ಯಾವಾಗ ಕಾರಣವೇನು? Next post shimoga | ಶಿವಮೊಗ್ಗ : ಎರಡು ದಿನ ಮಾಂಸ ಮಾರಾಟ ನಿಷೇಧ – ಯಾವಾಗ, ಕಾರಣವೇನು?