
shimoga dcc bank | ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥಗೌಡ ಅರೆಸ್ಟ್!
ಶಿವಮೊಗ್ಗ (shivamogga), ಏ. 9: ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಗರ ಶಾಖೆಯಲ್ಲಿ ನಡೆದಿದ್ದ ನಕಲಿ ಗೋಲ್ಡ್ ಲೋನ್ ಹಗರಣಕ್ಕೆ ಸಂಬಂಧಿಸಿದಂತೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ವು ಬೆಂಗಳೂರಿನಲ್ಲಿ ಏ. 9 ರಂದು ಬಂಧಿಸಿದೆ.
ಏ. 8 ರಂದು ನಕಲಿ ಗೋಲ್ಡ್ ಲೋನ್ ಹಗರಣಕ್ಕೆ ಸಂಬಂಧಿಸಿದಂತೆ, ಇ.ಡಿ ತಂಡವು ಶಿವಮೊಗ್ಗ ಹಾಗೂ ಬೆಂಗಳೂರಿನ ಹಲವೆಡೆ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿತ್ತು.
ಬೆಂಗಳೂರಿನ ಅಪೆಕ್ಸ್ ಬ್ಯಾಂಕ್ ಗೆಸ್ಟ್ ಹೌಸ್ ನಲ್ಲಿ ತಂಗಿದ್ದ ಆರ್ ಎಂ ಮಂಜುನಾಥಗೌಡ ಅವರನ್ನು ವಶಕ್ಕೆ ಪಡೆದುಕೊಂಡಿದ್ದ ಇ.ಡಿ ಅಧಿಕಾರಿಗಳು, ಸುದೀರ್ಘ ವಿಚಾರಣೆಗೊಳಪಡಿಸಿದ್ದರು. ಬುಧವಾರ ಕೂಡ ಅವರನ್ನು ವಿಚಾರಣೆ ನಡೆಸಿದ್ದು, ಅಧಿಕೃತವಾಗಿ ಬಂಧನಕ್ಕೊಳಪಡಿಸಿದೆ.
ಮಂಜುನಾಥಗೌಡ ಅವರನ್ನು 1ನೇ ಸಿಸಿಹೆಚ್ ಕೋರ್ಟ್‌ಗೆ ಇ.ಡಿ ಅಧಿಕಾರಿಗಳು ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಅವರನ್ನು 14 ದಿನಗಳ ಕಾಲ ಇ.ಡಿ ವಶಕ್ಕೊಪ್ಪಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಂದುವರಿದ ದಾಳಿ : ಮತ್ತೊಂದೆಡೆ, ಇ.ಡಿ ತಂಡವು ಸತತ ಎರಡನೇ ದಿನವಾದ ಬುಧವಾರ ಕೂಡ ದಿಢೀರ್ ದಾಳಿ ಮುಂದುವರಿಸಿದೆ. ಮಂಜುನಾಥಗೌಡ ಅವರ ಆಪ್ತರಾಗಿರುವ ಶಿವಮೊಗ್ಗ ಹಾಗೂ ತೀರ್ಥಹಳ್ಳಿಯ ಇಬ್ಬರ ನಿವಾಸಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಏನೀದು ಪ್ರಕರಣ? : 2014 ರಲ್ಲಿ ಡಿಸಿಸಿ ಬ್ಯಾಂಕ್ ಶಿವಮೊಗ್ಗ ನಗರ ಶಾಖೆಯಲ್ಲಿ ನಕಲಿ ಗೋಲ್ಡ್ ಲೋನ್ ಹಗರಣ ಬೆಳಕಿಗೆ ಬಂದಿತ್ತು. ನಕಲಿ ಬಂಗಾರಗಳನ್ನು ಅಡಮಾನವಿಟ್ಟು ಕೋಟ್ಯಾಂತರ ರೂ. ದುರ್ಬಳಕೆ ಮಾಡಿಕೊಳ್ಳಲಾಗಿತ್ತು. ಈ ಕುರಿತಂತೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.
ಅಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಆರ್ ಎಂ ಮಂಜುನಾಥ ಗೌಡ, ಬ್ಯಾಂಕ್ ಶಾಖೆಯ ಮ್ಯಾನೇಜರ್ ಶೋಭಾ ಸೇರಿದಂತೆ ಸುಮಾರು 18 ಜನರನ್ನು ಪೊಲೀಸರು ಬಂಧಿಸಿದ್ದರು. ನಂತರ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೊಪ್ಪಿಸಿತ್ತು. ಮಂಜುನಾಥಗೌಡರನ್ನು ಆರೋಪಮುಕ್ತಗೊಳಿಸಲಾಗಿತ್ತು.
ಇದೆಲ್ಲದರ ನಡುವೆ ಇ.ಡಿ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು. 2023 ರಲ್ಲಿ ಆರ್ ಎಂ ಮಂಜುನಾಥಗೌಡ ಅವರ ಶಿವಮೊಗ್ಗ ಹಾಗೂ ತೀರ್ಥಹಳ್ಳಿಯಲ್ಲಿರುವ ನಿವಾಸಗಳು ಸೇರಿದಂತೆ ವಿವಿಧೆಡೆ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿತ್ತು.
ಇ.ಡಿ ತನಿಖೆ ವಿರುದ್ದ ಮಂಜುನಾಥಗೌಡ ಅವರು ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು. ಇ.ಡಿ ಕಾನೂನು ಹೋರಾಟದ ಬಳಿಕ ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿತ್ತು.
Shivamogga, Apr. 9: The Enforcement Directorate (ED) has arrested DCC Bank Chairman R M Manjunatha Gowda in connection with the fake gold loan scam that took place at the Shivamogga DCC Bank city branch.