
hosanagara | ಸಿಗಂದೂರು ಸೇತುವೆ ಉದ್ಘಾಟನೆ ಯಾವಾಗ? ಬಿ ವೈ ರಾಘವೇಂದ್ರ ಹೇಳಿದ್ದೇನು?
ಶಿವಮೊಗ್ಗ (shivamogga), ಏ. 10: ‘ಸಿಗಂದೂರು ಸೇತುವೆ ಕಾಮಗಾರಿ ಶೇ. 90 ರಷ್ಟು ಪೂರ್ಣಗೊಂಡಿದ್ದು, ಅಂತಿಮ ಹಂತದಲ್ಲಿದೆ. ಮಳೆಗಾಲಕ್ಕೂ ಮುನ್ನವೇ ಸೇತುವೆ ಲೋಕಾರ್ಪಣೆಗೆ ನಿರ್ಧರಿಸಲಾಗಿದೆ. ಮೇ ತಿಂಗಳಾಂತ್ಯಕ್ಕೆ ಸೇತುವೆ ಸಾರ್ವಜನಿಕ ಬಳಕೆಗೆ ಮುಕ್ತಗೊಳ್ಳಲಿದೆ’ ಎಂದು ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.
ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಪುರ ಮಠದಲ್ಲಿ ಆಯೋಜಿತವಾಗಿರುವ ರಾಮೋತ್ಸವ ಕಾರ್ಯಕ್ರಮದಲ್ಲಿ ಮಂಗಳವಾರ ಭಾಗವಹಿಸಿದ್ದ ವೇಳೆ, ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಈಗಾಗಲೇ ಸೇತುವೆ ಉದ್ಘಾಟನೆ ಕುರಿತಂತೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಲಾಗಿದೆ. ಹಾಗೆಯೇ, ಪ್ರಸ್ತುತ ವರ್ಷದ ಆಗಸ್ಟ್ ಅಂತ್ಯದವರೆಗೆ ಗುತ್ತಿಗೆದಾರರಿಗೆ ಕಾಮಗಾರಿ ನಿರ್ವಹಣೆಗೆ ಅವಕಾಶವಿದೆ. ಮೇ ತಿಂಗಳ ವೇಳೆಗೆ ಸೇತುವೆ ಉದ್ಘಾಟನೆಗೆ ಅನುವು ಮಾಡಿಕೊಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ರಾಜಕೀಯ ವಿರೋಧಿಗಳು ಬಿ.ಎಸ್.ವೈ ಕುಟುಂಬದ ವಿರುದ್ದ ಸುಳ್ಳು ಆರೋಪಗಳಲ್ಲಿ ನಿರತರಾಗಿದ್ದಾರೆ. ಇವುಗಳಿಂದ ಮುಕ್ತಿ ಹೊಂದಲು ತಮ್ಮ ಕುಟುಂಬ ವರ್ಗಕ್ಕೆ ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದೆನೆ. ನಮ್ಮ ಕುಟುಂಬಕ್ಕೆ ಸಮಾಜಮುಖಿ ಸೇವೆ ಮಾಡುವಂತ ಅವಕಾಶ ದೇವರು ಕಲ್ಪಿಸಿದ್ದು, ಮುಂದೆಯೂ ಸೇವೆ ನಿರಂತರ ನೀಡುವ ರಾಜಕೀಯ ಇಚ್ಛಾಶಕ್ತಿಯನ್ನು ಹೆಚ್ಚೆಚ್ಚು ಕಲ್ಪಿಸಲಿ ಎಂಬುದಾಗಿ ದೇವರಲ್ಲಿ ಸಂಕಲ್ಪಿಸಲಾಯಿತು ಎಂದರು.
ಬಿ ಎಸ್ ಯಡಿಯೂರಪ್ಪ ಹಾಗೂ ಬಿ ವೈ ವಿಜಯೇಂದ್ರರವರ ಕುರಿತಂತೆ ರಾಜ್ಯದ ಜನತೆಗೆ ಸ್ಪಷ್ಟ ನಿಲುವಿದೆ. ಅವರ ಸಂಘಟನಾ ಶಕ್ತಿ ಬಗ್ಗೆ ಪ್ರತಿಯೊಬ್ಬರಿಗೂ ಅರಿವಿದೆ. ಯಾರೋ ಓರ್ವರು ನಮ್ಮ ಕುಟುಂಬದ ವಿರುದ್ದ ಮಾತನಾಡಿದ ಮಾತ್ರಕ್ಕೆ ನಾವೇನು ಎಂದು ಯಾರಿಗೂ ತೋರ್ಪಡಿಸುವ ಅವಶ್ಯಕತೆ ಇಲ್ಲ. ನಮ್ಮ ರಾಜಕೀಯ ಸೇವೆ ಪರಿಗಣಿಸಿಯೇ ಕೇಂದ್ರದ ಬಿಜೆಪಿ ನಾಯಕರು ಕುಟುಂಬದ ಪ್ರತಿಯೊಬ್ಬರಿಗೂ ಒಂದೊಂದು ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಿಕ್ಕೆ ಬಂದ ಮೇಲೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿರಂತರವಾಗಿದೆ. ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಿದೆ. ಈ ಕಾರಣಕ್ಕೆ ಸರ್ಕಾರಿ ನೌಕರರ ಸರಣಿ ಆತ್ಮಹತ್ಯೆ ನಡೆದಿದೆ. ವಿಶೇಷವಾಗಿ ಬಿಜೆಪಿ ಕಾರ್ಯಕರ್ತರ ಮೇಲಿನ ದಬ್ಬಾಳಿಕೆ, ಬೆಲೆ ಏರಿಕೆಯೂ ರಾಜ್ಯದ ಜನತೆಗೆ ಭ್ರಮನಿರಸನ ಉಂಟು ಮಾಡಿದೆ ಎಂದರು.
ಹೊಸನಗರ ಪಟ್ಟಣದಲ್ಲಿ ಹಾದು ಹೋಗುವ ರಾಣೆಬೆನ್ನೂರು – ಬೈಂದೂರು ರಾಷ್ಟೀಯ ಹೆದ್ದಾರಿ-766 ಸಿ, ನಿರ್ಮಾಣ ಕಾಮಗಾರಿ ಈಗಾಗಲೇ ಶೇ.50 ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಸಹ ಭರದಿಂದ ಸಾಗಿದೆ. ಅಗತ್ಯ ಭೂಮಿ ವಶಪಡಿಸಿಕೊಳ್ಳುವ ಕಾರ್ಯ ನಡೆದಿದೆ.
ಶೇ.90 ರಷ್ಟು ಭೂಮಿ ವಶಕ್ಕೆ ಪಡೆದು, ಫಲಾನುಭವಿಗಳಿಗೆ ಸೂಕ್ತ ಪರಿಹಾರ ನೀಡಿದ ನಂತರವೇ ಕಾಮಗಾರಿ ಆರಂಭಿಸುವಂತೆ ಸುಪ್ರಿಂಕೋರ್ಟ್ ನಿರ್ದೇಶನವಿರುವ ಕಾರಣ, ಹೆದ್ದಾರಿ ನಿರ್ಮಾಣ ಕಾರ್ಯ ಕೊಂಚ ವಿಳಂಬ ಗತಿಯಲ್ಲಿ ಸಾಗಿದೆ. ಆದರೂ ಸಂಬಂಧಪಟ್ಟ ಇಲಾಖೆಗಳಿಗೆ ಕಾಮಗಾರಿ ಶೀಘ್ರ ಪೂರೈಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಶಿಕಾರಿಪುರ – ರಾಣೆಬೆನ್ನೂರು ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಆಗಿದ್ದು, ಕಾಮಗಾರಿ ಚಾಲ್ತಿಯಲ್ಲಿದೆ. ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ, ರೈಲು ಸಂಚಾರಕ್ಕೆ ಕ್ರಮಕೈಗೊಳ್ಳಲಾಗುವುದು. ಇದೊಂದು ಸರ್ವಕಾಲಿಕ ದಾಖಲೆ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವಿಶೇಷ ಪೂಜೆ : ರಾಮೋತ್ಸವ ಕಾರ್ಯಕ್ರಮದಲ್ಲಿ ಸಂಸದ ಬಿ ವೈ ರಾಘವೇಂದ್ರ ಅವರು ಪತ್ನಿ ತೇಜಸ್ವಿನಿ ಅವರೊಂದಿಗೆ ವಿಶೇಷ ಪೂಜೆ ಸಲ್ಲಿಸಿ, ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾದರು.
ಈ ವೇಳೆ ಮಾಜಿ ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಅಂಬೇಡ್ಕರ್ ನಿಗಮದ ಮಾಜಿ ನಿರ್ದೇಶಕ ಎನ್ ಆರ್ ದೇವಾನಂದ್, ಜಿಪಂ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಪಪಂ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಮ್ಯಾಮ್ಕೋಸ್ ನಿರ್ದೇಶಕರಾದ ಕೆ ವಿ ಕೃಷ್ಣಮೂರ್ತಿ, ಮಾಜಿ ಗಣಪತಿ ಬಿಳಗೋಡು, ಬಿ ಯುವರಾಜ್,
ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಎನ್. ಸುಧಾಕರ್, ತಾಲೂಕು ರೈತ ಮೋರ್ಚಾ ಅಧ್ಯಕ್ಷ ಶಿವಾನಂದ ಹಿರೇಮಣತಿ, ಮಾಜಿ ಎಂಸಿಎ ನಿರ್ದೇಶಕ ಹೆಚ್ ಆರ್ ತೀರ್ಥೇಶ್, ಪ್ರಮುಖರಾದ ಮೋಹನ್ ಮಂಡಾನಿ, ರಾಮಕಾಂತ್, ಬಸವರಾಜ್, ಮಂಡಾನಿ ಮೋಹನ್ ಸೇರಿದಂತೆ ಮೊದಲಾದವರಿದ್ದರು.
Shivamogga, Apr. 10: ‘The Sigandur Bridge work is 90 percent complete and is in the final stage. It has been decided to dedicate the bridge to the public before the rainy season. The bridge will be open for public use by the end of May,’ said Lok Sabha member BY Raghavendra.
He spoke to reporters who met him on Tuesday while participating in the Ramotsava program organized at the Ramachandrapura Mutt in the district’s Hosanagara taluk.
#sigandurbridge, #sigandur_bridge, #ಸಿಗಂದೂರುಸೇತುವೆ, #ಸಿಗಂದೂರು_ಸೇತುವೆ #ಸಿಗಂದೂರು, #sigandurbridge, ##sigandur,