
ಬಿಜೆಪಿಯಲ್ಲಿ ಇರ್ತಾರಾ? ಕಾಂಗ್ರೆಸ್’ಗೆ ಹೋಗ್ತಾರಾ?
- ನಾಳೆ ಬಹಿರಂಗವಾಗಲಿದೆಯಾ ಆಯನೂರು ಮಂಜುನಾಥ್ ರಾಜಕೀಯ ನಡೆ?
********************************************************************************************
ವರದಿ : ಬಿ.ರೇಣುಕೇಶ್
ಶಿವಮೊಗ್ಗ, ಏ. 2: ಬಿಜೆಪಿ ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ಏ. 3 ರಂದು ಶಿವಮೊಗ್ಗ ನಗರದಲ್ಲಿ ಸುದ್ದಿಗೋಷ್ಠಿ ಕರೆದಿದ್ದು, ಮಹತ್ವದ ರಾಜಕೀಯ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ!
ಬಂಡಾಯ : ಆಯನೂರು ಮಂಜುನಾಥ್ ಅವರು ಸ್ವಪಕ್ಷೀಯ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ವಿರುದ್ಧ ಈಗಾಗಲೇ ಬಂಡಾಯದ ಕಹಳೆ ಮೊಳಗಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಕೆ.ಎಸ್.ಈಶ್ವರಪ್ಪಗೆ ಟಿಕೆಟ್ ನೀಡಬಾರದು ಎಂದು ಬಹಿರಂಗವಾಗಿಯೇ ಒತ್ತಾಯಿಸಿದ್ದಾರೆ.
ತಾವು ಕೂಡ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ತಮಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಆಯನೂರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದಿಂದ ಕೈ ಅಭ್ಯರ್ಥಿಯಾಗಲಿದ್ದಾರೆ ಎಂಬ ವದಂತಿ ಹಬ್ಬಿತ್ತು.
ಇದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ನಿದ್ದೆಗೆಡಿಸಿತ್ತು. ಕಾಂಗ್ರೆಸ್ ಪಕ್ಷದ ವಾರ್ಡ್ ಅಧ್ಯಕ್ಷರು ದಿಢೀರ್ ಸಭೆ ಸೇರಿ, ‘ಬೇರೆ ಪಕ್ಷದಿಂದ ಆಗಮಿಸುವವರಿಗೆ ಟಿಕೆಟ್ ನೀಡಿದರೆ ಅಧ್ಯಕ್ಷ ಸ್ಥಾನಗಳಿಗೆ ರಾಜೀನಾಮೆ ನೀಡುತ್ತೆವೆ. ಪಕ್ಷದ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿರುವವರಿಗೆ ಅವಕಾಶ ನೀಡಬೇಕು’ ಎಂದ ಪಕ್ಷದ ವರಿಷ್ಠರಿಗೆ ಆಗ್ರಹಿಸಿದ್ದರು.
ಮತ್ತೊಂದೆಡೆ, ಕೈ ಟಿಕೆಟ್ ಆಕಾಂಕ್ಷಿಗಳು ಇತ್ತೀಚೆಗೆ ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಪ್ರಮುಖರನ್ನು ಭೇಟಿಯಾಗಿ ಚರ್ಚಿಸಿದ್ದರು. ಟಿಕೆಟ್ ಗೆ ಅರ್ಜಿ ಸಲ್ಲಿಸಿರುವವರಲ್ಲಿ, ಯಾರಿಗಾದರೂ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಪರೋಕ್ಷವಾಗಿ ಆಯನೂರಿಗೆ ಟಿಕೆಟ್ ನೀಡುವ ಕುರಿತಂತೆ ಅಸಮಾಧಾನ ಹೊರಹಾಕಿದ್ದರು.
ಬಿಜೆಪಿ ಪಾಳೇಯ ಕೂಡ ಆಯನೂರು ‘ಭಿನ್ನ’ ನಡೆಯ ಬಗ್ಗೆ ನಿಗೂಢ ಮೌನಕ್ಕೆ ಶರಣಾಗಿತ್ತು. ಇಷ್ಟೆಲ್ಲ ರಾಜಕೀಯ ಬೆಳವಣಿಗೆಗಳ ನಡುವೆಯೂ, ಆಯನೂರು ಬಹಿರಂಗವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಿಜೆಪಿ ತೊರೆಯುವ ಬಗ್ಗೆಯಾಗಲಿ, ಕಾಂಗ್ರೆಸ್ ಗೆ ಹೋಗುವ ಕುರಿತಾಗಲಿ ಸ್ಪಷ್ಟನೆ ನೀಡಿಲ್ಲ.
ಹಾಗೆಯೇ ಸಾರ್ವಜನಿಕವಾಗಿಯೂ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದರಿಂದ ಅವರ ಮುಂದಿನ ನಡೆಯ ಬಗ್ಗೆ ಸ್ಥಳೀಯ ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳು ಮನೆ ಮಾಡುವಂತಾಗಿದೆ.
ಈ ಕಾರಣದಿಂದ ಏ. 3 ರ ಬೆಳಿಗ್ಗೆ 11 ಗಂಟೆಗೆ ಖಾಸಗಿ ಹೋಟೆಲ್ ನಲ್ಲಿ ಆಯನೂರು ಕರೆದಿರುವ ಸುದ್ಧಿಗೋಷ್ಠಿ ಸಹಜವಾಗಿಯೇ ಕುತೂಹಲ ಮೂಡಿಸಿದೆ. ಸ್ಥಳೀಯ ಬಿಜೆಪಿ – ಕಾಂಗ್ರೆಸ್ ನಾಯಕರ ಚಿತ್ತ ನೆಡುವಂತೆ ಮಾಡಿದೆ!