
special article | ಬೇಸಿಗೆ ರಜೆಯಲ್ಲಿ ಮಕ್ಕಳ ರಕ್ಷಣೆ ಮತ್ತು ಪೋಷಣೆಯಲ್ಲಿ ಪಾಲಕರ ಪಾತ್ರ
ವಿಶೇಷ ಲೇಖನ : ತಾಜುದ್ದೀನ್ ಖಾನ್, ಅಧ್ಯಕ್ಷರು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಶಿವಮೊಗ್ಗ.
ಬಂಧುಗಳೇ ಕಳೆದ ವಾರ ಪತ್ರಿಕೆ ಓದುತ್ತಿರುವಂತಹ ಸಂದರ್ಭದಲ್ಲಿ ಆತಂಕ ಪಡುವಂತಹ ಪ್ರತ್ಯೇಕ ಘಟನೆಗಳನ್ನು ವರದಿಯಾಗಿತ್ತು. ಒಂದು ಗ್ರಾಮದಲ್ಲಿ 8 ರಿಂದ 14 ವರ್ಷದ ಒಳಗಿನ 5 ಜನ ಮಕ್ಕಳು ಕಾಣೆಯಾಗಿದರು ಗ್ರಾಮದ ಜನರೆಲ್ಲರೂ ಇಡೀ ದಿನ ರಾತ್ರಿ ಹುಡುಕಿದರೂ ಮಕ್ಕಳು ಸಿಗಲಿಲ್ಲ ನಂತರ ಒಂದು ಗದ್ದೆಯಲ್ಲಿ ಐದು ಮಕ್ಕಳು ಪತ್ತೆಯಾದರೂ. ಮಕ್ಕಳನ್ನು ವಿಚಾರಿಸಿದಾಗ ಕೆರೆಯಲ್ಲಿ ಮೀನು ಹಿಡಿಯಲು ಹೋಗಿರುವುದಾಗಿ, ಕತ್ತಲಾದ ಕಾರಣ ಮನೆಗೆ ದಾರಿ ತೋಚದೆ ಅಲ್ಲೇ ಉಳಿದುಕೊಂಡಿದ್ದೆವು ಎಂದು ತಿಳಿಸಿದರು.
ಮತ್ತೊಂದು ಘಟನೆಯಲ್ಲಿ ಮಕ್ಕಳ ಬೇಸಿಗೆ ರಜೆ ಇದೆ ಎಂದು, ಒಂದು ಕುಟುಂಬ ಒಂದು ದೊಡ್ಡ ಕೆರೆಯಲ್ಲಿ ನೀರಿನ ಆಳ ಮತ್ತು ಅಗಲ ತಿಳಿಯದೆ ಆಟ ಆಡುವ ಸಂದರ್ಭದಲ್ಲಿ, ಒಂದು ಮಗು ನೀರಿನಲ್ಲಿ ಮುಳುಗುತ್ತಿತ್ತು ಅದನ್ನು ರಕ್ಷಣೆ ಮಾಡಲು ಹೋದ ತಾಯಿ ಮತ್ತು ಅಕ್ಕ ಒಟ್ಟು ಮೂರು ಜನ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡರು,
ಇನ್ನೊಂದು ಪ್ರಕರಣದಲ್ಲಿ, 13 ವರ್ಷದ ಬಾಲಕಿ ಒಬ್ಬಳು ಶಾಲೆಗೆ ರಜೆ ಇರುವ ಕಾರಣ ಟಿವಿ ನೋಡಲು ಪಕ್ಕದ ಮನೆಗೆ ಹೋಗುತ್ತಿದ್ದಳು. ಸುಮಾರು 40 ವರ್ಷದ ಅಂಕಲ್ ಸಲುಗೆಯಿಂದ ಮಾತನಾಡಿಸುತ್ತಿದ್ದ. ಬಾಲಕಿ ಯಾಕೋ ತಲೆಸುತ್ತು ಆರೋಗ್ಯ ಸರಿಯಿಲ್ಲವೆಂದು ವೈದ್ಯರ ಬಳಿ ತೋರಿಸಿದಾಗ ಅವಳು ಎರಡು ತಿಂಗಳ ಗರ್ಭಿಣಿ ಎಂದು ತಿಳಿಯಿತು.
ವಿಷಯ ತಿಳಿದ ಅಂಕಲ್ ಊರು ಬಿಟ್ಟು ಪರಾರಿಯಾಗಿದ್ದ. ಪ್ರತಿನಿತ್ಯ ನಡೆಯುವ ಇಂತಹ ಘಟನೆಗಳಿಂದ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.
ಬೇಸಿಗೆ ರಜೆ ಎಂದರೆ ಮಕ್ಕಳು ಆಡುವುದು, ನಲಿಯುವುದು, ಕುಣಿಯುವುದು ಸರ್ವೇಸಾಮಾನ್ಯ. ಒಂದು ಕಡೆ ಪೋಷಕರು ಮಕ್ಕಳ ಬೇಸಿಗೆ ರಜೆ ಎಂದರೆ ತುಂಬಾ ಚಿಂತೆಗೆ ಒಳಗಾಗುತ್ತಾರೆ. ಎರಡು ತಿಂಗಳ ಕಾಲ ಮಕ್ಕಳನ್ನು ಹೇಗೆ ಮನೆಗಳಲ್ಲಿ ಸಂಬಾಳಿಸಬೇಕು ಎನ್ನುವುದೇ ಅವರಿಗೆ ದೊಡ್ಡ ಪ್ರಶ್ನೆ.
ಯಾಕಾದ್ರೂ ಬಂತಪ್ಪ ಈ ಬೇಸಿಗೆ ರಜೆ, ಎಂದು ಹೇಳುವ ಪೋಷಕರೇ ಅಧಿಕ. ಇದಕ್ಕೆ ಮುಖ್ಯ ಕಾರಣ ಪೋಷಕರು ಕಂಫರ್ಟ್ ಜೋನಿನಿಂದ ಹೊರಗೆ ಬಾರದಿರುವುದು.
ಕಂಫರ್ಟ್ ಝೂನ್ ಎಂದರೆ ಮಕ್ಕಳು ಶಾಲೆಗೆ ಹೋಗುವ ಸಂದರ್ಭದಲ್ಲಿ ಬೆಳಗ್ಗೆ ಎದ್ದು ತಿಂಡಿ ತಯಾರಿಸಿ ಮಕ್ಕಳಿಗೆ ತಿನ್ನಿಸಿ ಅವರನ್ನು ರೆಡಿ ಮಾಡಿ ಶಾಲೆಗೆ ಕಳುಹಿಸಿದರೆ ನಂತರ ಮನೆಯಲ್ಲಿ ಬೇರೆ ಕೆಲಸ, ಟಿವಿ ಸೀರಿಯಲ್ ಗಳು ನೋಡುವುದು ಫೋನ್ ಬಳಕೆ ಇತ್ಯಾದಿ…ಆದರೆ ಮಕ್ಕಳು ಮನೆಯಲ್ಲಿ ಇದ್ದರೆ ಇದೆಲ್ಲ ಹೇಗೆ ಸಾಧ್ಯ! ಎಂಬುದೇ ಪೋಷಕರ ಚಿಂತೆ.
ಹಾಗಾದರೆ ಕೆಲವು ವಾರಗಳ ಕಾಲ ಸಿಗುವ ರಜೆ ಪೋಷಕರು ಮಕ್ಕಳೊಟ್ಟಿಗೆ ಹೀಗೆ ಕಳೆಯಬಹುದು? ನಮ್ಮ ಮಕ್ಕಳ ಮನಸ್ಸು ನಾವು ಮೊದಲು ಅರಿತುಕೊಳ್ಳಬೇಕು. ತಂದೆ ತಾಯಿಗೆ ನಮ್ಮ ಮಗುವಿನ ಮನಸ್ಸು ಏನೆನ್ನುವುದು ಗೊತ್ತಾಗಲಿಲ್ಲವೆಂದರೆ ಇನ್ನೂ ಅದನ್ನು ಯಾರು ತಾನೆ ಅರ್ಥ ಮಾಡಿಕೊಳ್ಳುತ್ತಾರೆ? ಅರ್ಥಮಾಡಿಕೊಳ್ಳಲಿಕ್ಕಾಗದೆ ಇರುವುದರಿಂದಲೇ ಮಕ್ಕಳು ಇವತ್ತು ಮಕ್ಕಳಂತೆ ವರ್ತಿಸುತ್ತಿಲ್ಲ. ಅವರಲ್ಲಿ ಮಕ್ಕಳಲ್ಲಿ ಇರಬೇಕಾದ ಮುಗ್ದತೆ ಕಾಣುತ್ತಿಲ್ಲ.ಮಕ್ಕಳು ಹೀಗಾಗಲು ಯಾರೂ ಕಾರಣವೆಂದು ನೋಡಿದರೆ ಅಲ್ಲಿ ಎದ್ದು ಕಾಣುವುದು ಮಕ್ಕಳ ತಂದೆ ತಾಯಿಯ ಪ್ರತಿಬಿಂಬ! ಹಾಗಾಗಿ ಬೇಸಿಗೆ ರಜೆ ಎಂಬುದು ನಮ್ಮ ಮಕ್ಕಳನ್ನು ಅರಿಯಲು ಇರುವ ಅತ್ಯಂತ ಸುವರ್ಣ ಸಮಯವಾಗಿದೆ.
ಇತ್ತೀಚಿನ ಆಧುನಿಕ ಜಗತ್ತಿನಲ್ಲಿ ಪೋಷಕರು ತಮ್ಮ ಕೆಲಸಗಳಲ್ಲಿ ದಿನನಿತ್ಯ ಬಿಸಿಯಾಗಿರುವುದು ಸರ್ವೇಸಾಮಾನ್ಯ. ಮಕ್ಕಳ ರಜೆಯನ್ನು ಬಹಳ ವ್ಯವಸ್ಥಿತವಾಗಿ ಮಕ್ಕಳೊಂದಿಗೆ ಸಮಯವನ್ನು ಕಳೆಯುವುದೇ ಅಪರೂಪ. ಶಾಲಾ ದಿನಗಳಲ್ಲಿ ಮಕ್ಕಳು ಶಾಲೆ, ಟ್ಯೂಷನ್, ಪರೀಕ್ಷೆ ಎಂದು ಬ್ಯುಸಿ ಆಗಿರುತ್ತಾರೆ. ಅವರಿಗೂ ಕೂಡ ಪೋಷಕರೊಟ್ಟಿಗೆ ಸಮಯ ಕಳೆಯಲು ಸಾಧ್ಯವಾಗಿವುದಿಲ್ಲ. ಹಾಗಾಗಿ ಪ್ರತಿ ಪೋಷಕರಿಗೂ ಕೂಡ ಮಕ್ಕಳೊಟ್ಟಿಗೆ ಸಮಯವೂ ಕಳೆಯಲು ಇದೊಂದು ಉತ್ತಮ ಅವಕಾಶ ಎಂದು ಹೇಳಬಹುದು.
ಪೋಷಕರು ತಮ್ಮ ಕಂಫರ್ಟ್ ಜೂನಿನಿಂದ ಹೊರಗಡೆ ಬಂದು ತಮ್ಮ ಮಕ್ಕಳೊಂದಿಗೆ ಸಮಯ ಕಳೆಯುವುದರಿಂದ ಅವರಲ್ಲಿರುವ ವಿಶೇಷವಾದ ಪ್ರತಿಭೆಯನ್ನು ಗುರುತಿಸಬಹುದು. ಕೆಲವು ಮಕ್ಕಳಲ್ಲಿ ಉತ್ತಮವಾದ ಕ್ರೀಡೆ, ಗಾಯನ, ಸ್ವಿಮ್ಮಿಂಗ್, ಡ್ಯಾನ್ಸಿಂಗ್, ಡ್ರಾಯಿಂಗ್ ಹಾಗೂ ಇನ್ನಿತರ ವಿಶೇಷವಾದಂತಹ ಪ್ರತಿಭೆ ಇರುತ್ತದೆ. ಅಂತಹ ಪ್ರತಿಭೆಯನ್ನು ಪೋಷಕರು ಗುರುತಿಸುವುದರ ಮೂಲಕ ಅದಕ್ಕೆ ಪ್ರೋತ್ಸಾಹ ನೀಡಿ ಉತ್ತಮ ಭವಿಷ್ಯ ರೂಪಿಸಲು ಇದು ಉತ್ತಮ ಅವಕಾಶ.
ಇತ್ತೀಚಿನ ಮಕ್ಕಳಿಗೆ ಕುಟುಂಬ ಅಂದರೇನು? ನಮ್ಮ ಸಂಸ್ಕೃತಿ ಹೇಗಿದೆ? ನಮ್ಮ ಆಚಾರ ವಿಚಾರಗಳೇನು? ಅಜ್ಜಿ – ಅಜ್ಜ ನೆರೆಹೊರಿಯೊಂದಿಗೆ ಹೇಗಿರಬೇಕು? ನಮ್ಮ ಕುಟುಂಬದ ಸಂಸ್ಕಾರಗಳೇನು? ಸಂಬಂಧಗಳು ಯಾವ ರೀತಿ ನಿಭಾಯಿಸಬೇಕು? ಇನ್ನೊಬ್ಬರಿಗೆ ಯಾವ ರೀತಿ ಸಹಕಾರ ನೀಡಬೇಕು ಇಂತಹ ಮಾನವೀಯ ಮೌಲ್ಯಗಳನ್ನು ಕಲಿಸುವುದಕ್ಕಾಗಿ ಬೇಸಿಗೆ ರಜೆಯನ್ನು ಬಳಸಿಕೊಳ್ಳಬಹುದು.
ಮಕ್ಕಳಲ್ಲಿ ದೇಶದ ಬಗ್ಗೆ ಅಭಿಮಾನ, ನಾಡು ನುಡಿಯ ಬಗ್ಗೆ ತಿಳಿ ಹೇಳುವುದು, ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ, ನೀತಿ ಕಥೆಗಳನ್ನು ತಿಳಿಸುವುದರ ಮೂಲಕ ಪ್ರಾಮಾಣಿಕತೆ, ನ್ಯಾಯ ಹಾಗೂ ಸಂಸ್ಕೃತಿಯ ಮಹತ್ವದ ಕುರಿತು ತಿಳಿಸಬಹುದು.
ಬಹುತೇಕ ಪೋಷಕರು ರಜೆಯ ಸಂದರ್ಭದಲ್ಲಿ ಮಕ್ಕಳು ಹಠ ಮಾಡುತ್ತಾರೆಂದು ಅವರಿಗೆ ತಮ್ಮ ಮೊಬೈಲ್ ಗಳನ್ನು ನೀಡುವುದು ಲ್ಯಾಪ್’ಟ್ಯಾಪ್ ಗಳನ್ನು ನೀಡುವುದು ಟಿವಿ ಹಾಕಿ ಕೂರಿಸುವುದು ಮಾಡುತ್ತಾರೆ. ಇದು ಖಂಡಿತಾ ತಪ್ಪು!
ಹಿಂದೆಂದೂ ಕಂಡಿಲ್ಲದ ಇಂಟರ್ನೆಟ್, ಸಾಮಾಜಿಕ ಮಾಧ್ಯಮ, ಸೈಬರ್ ಸ್ಪೇಸ್, ನಂತಹ ಡಿಜಿಟಲ್ ತಂತ್ರಜ್ಞಾನಗಳು, ಡಿಜಿಟಲ್ ಗೇಮ್ ಗಳು ಈಗ ಸುಲಭವಾಗಿ ಲಭ್ಯವಿದ್ದು ಅವುಗಳ ಬಳಕೆ ಯಾವುದೇ ನಿಯಂತ್ರಣವಿಲ್ಲದಿರುವುದರಿಂದ ಮಕ್ಕಳು ಸಾಮಾಜಿಕ ಜಾಲತಾಣದ ಮೂಲಕ ಅನೇಕ ಬೇಕು ಬೇಡದ ವಿಡಿಯೋಗಳನ್ನು ನೋಡುವುದರ ಮೂಲಕ ಶೋಷಣೆ ಮತ್ತು ಅವರು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಥವಾ ವಿಡಿಯೋ ಗೇಮ್ ಆಡುವುದರ ಮೂಲಕ ಅದರ ಗೀಳು ಹತ್ತಬಹುದು.
ಹೆಚ್ಚು ಮೊಬೈಲ್ ಬಳಕೆಯಿಂದ ಮಗುವಿನ ಆರೋಗ್ಯ ನಿಧಾನವಾಗಿ ವಿಷದಂತೆ ಹಾಳು ಮಾಡುತ್ತಾ ಬರಬಹುದು ಮುಖ್ಯವಾಗಿ ಬೆಳೆಯುವ ಮಕ್ಕಳ ಮೆದುಳಿನ ಮೇಲೆ ಮೊಬೈಲಿನ ತರಂಗಗಳು ಭೀಕರ ಪರಿಣಾಮ ಬೀರಬಹುದು. ಮಕ್ಕಳ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುವ ಮೊಬೈಲ್ ಅವರಿಗೆ ಅನೇಕ ಕಾಯಿಲೆಗಳನ್ನು ಕೂಡ ತಂದುಡ್ಡಬಹುದು.
ಇತ್ತೀಚಿಗೆ ಪತ್ರಿಕೆಯಲ್ಲಿ ಪ್ರಕಟವಾದ ಜಿಲ್ಲಾ ವರದಿಯಂತೆ ಅತಿಯಾಗಿ ಮೊಬೈಲ್ ಬಳಸುವ ಸುಮಾರು 25 ರಿಂದ 30,000 ಮಕ್ಕಳು ದೃಷ್ಟಿ ದೋಷದ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಕೂಡ ಅತ್ಯಂತ ಕೆಟ್ಟ ಪರಿಣಾಮ ಬೀರಬಹುದು. ಹಾಗಾಗಿ ಮಕ್ಕಳನ್ನು ಮೊಬೈಲ್ ಅಥವಾ ಟಿವಿ ಸಾಧ್ಯವಾದಷ್ಟು ದೂರ ಇಡುವುದು ಉತ್ತಮ. ಮಕ್ಕಳು ಸಾಮಾನ್ಯವಾಗಿ ಪೋಷಕರು ಹೇಳಿದನಂತೆ ಕೇಳುವುದಕ್ಕಿಂತ ಮಾಡಿದನು ಅನುಸರಿಸುತ್ತಾರೆ ಹಾಗಾಗಿ ಪೋಷಕರೂ ಕೂಡ ಮುಬೈಲ್ ಹಾಗೂ ಟಿವಿಯ ಬಳಕೆ ಕಡಿಮೆ ಮಾಡಬೇಕು ಮಕ್ಕಳೊಟ್ಟಿಗೆ ಹೆಚ್ಚು ಸಮಯ ಕಳೆಯುವುದು ಉತ್ತಮ.
ಪೋಷಕರು ಏನು ಮಾಡಬಹುದು : ಮನೆಯ ಸಣ್ಣ ಪುಟ್ಟ ಕೆಲಸಗಳಿಗಾಗಿ ಬಳಸಿಕೊಳ್ಳಿ ಸಂಬಂಧಿಕರೊಂದಿಗೆ ಹಾಗೂ ಮಕ್ಕಳ ಸ್ನೇಹಿತರ ಜೊತೆ ಆಗಾಗ ದೂರವಾಣಿಯ ಮೂಲಕ ಮಾತನಾಡಿ, ದೈಹಿಕ ಚಟುವಟಿಗಾಗಿ ಸೈಕಲ್ ಸವಾರಿ, ಗ್ರಾಮೀಣ ಆಟಗಳನ್ನು ಮಕ್ಕಳೊಟ್ಟಿಗೆ ಆಡಿ, ಮನೆಯಲ್ಲಿ ಮಕ್ಕಳಿಗೆ ಒಂಟಿಯಾಗಿ ಇರಲು ಬಿಡಬಾರದು, ಅವರಿಗೆ ಮನೆಯ ಸುತ್ತಮುತ್ತ ಅಥವಾ ಮನೆಯ ಮೇಲ್ಚಾವಣಿಯಲ್ಲಿ ಇರುವಂತಹ ಜಾಗದಲ್ಲಿ ಗಿಡ, ಸೊಪ್ಪು, ತರಕಾರಿ, ಬೆಳೆಸುವ ಅಭ್ಯಾಸ ಮಾಡಿ, ಇದರಿಂದ ಅವರಿಗೆ ಪರಿಸರದ ಬಗ್ಗೆ ಆಸಕ್ತಿಯ ಕೂಡ ಹುಟ್ಟಬಹುದು.
ಪೋಷಕರು ಒಂದು ಟೈಮ್ ಟೇಬಲ್ ಸಿದ್ದಪಡಿಸುವುದರ ಮೂಲಕ ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯಬೇಕು ಈ ಸಮಯದಲ್ಲಿ ಉತ್ತಮವಾದ ನೀತಿ ಪುಸ್ತಕಗಳು ಓದಿಸುವುದು, ಬರೆಸುವುದು, ಹಾಗೂ ಉತ್ತಮ ಸಂಗೀತ ಕೇಳಿಸುವುದು ಅಭ್ಯಾಸ ಮಾಡಿಸಬೇಕು. ಮಗು ಯಾವುದರಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತದು ಆ ಒಂದು ಪ್ರತಿಭೆಯನ್ನು ಗುರುತಿಸಿ ಅವರಿಗೆ ಹೆಚ್ಚು ಪ್ರೋತ್ಸಾಹಿಸಬೇಕು ಸಾಧ್ಯವಾದರೆ ಅವರಿಗೆ ಮಾರ್ಗದರ್ಶಕರಿಂದ (ಕೋಚ್) ಮಾರ್ಗದರ್ಶನವನ್ನು ಕೊಡಿಸಬೇಕು.
ಮಕ್ಕಳಲ್ಲಿ ಸಂಸ್ಕಾರ ಬೆಳೆಸಲು ಕುಟುಂಬದ ಇತರೆ ಸದಸ್ಯರು ಒಟ್ಟಿಗೆ ಊಟ ಮಾಡುವುದು, ಅಜ್ಜ ಅಜ್ಜಿಯರ ಮಹತ್ವ ತಿಳಿಸುವುದು, ಅಕ್ಕ ತಂಗಿಯರ ಬಾಂಧವ್ಯದ ಬಗ್ಗೆ ತಿಳಿಸುವುದು, ಸಾಧ್ಯವಾದರೆ ಒಮ್ಮೆಯಾದರೂ ಕೂಡ ಹತ್ತಿರದ ವೃದ್ಧಾಶ್ರಮ, ಅನಾಥಾಶ್ರಮ, ಭೇಟಿ ಮಾಡುವುದರ ಮೂಲಕ ಸಮಾಜ ಎಂದರೇನು? ಸಹಕಾರ ಎಂದರೇನು? ನಾವು ಇವರೊಟ್ಟಿಗೆ ಹೇಗೆ ಇರಬೇಕು ಎಂಬುದನ್ನು ತಿಳಿಸುವುದರ ಮೂಲಕ ಉತ್ತಮ ಸಂಸ್ಕಾರ ಬೆಳೆಸಬಹುದು. ವಸ್ತು ಸಂಗ್ರಹಾಲಯಗಳಿಗೆ ಮನೋರಂಜನ ಕೇಂದ್ರಗಳಿಗೆ ಭೇಟಿ ಮಾಡಿಸುವುದರ ಮೂಲಕ ಅವರಲ್ಲಿ ಜ್ಞಾನವನ್ನು ಹೆಚ್ಚಿಸಬಹುದು.
ಪ್ರತಿ ಪೋಷಕರು ಮಕ್ಕಳೊಟ್ಟಿಗೆ ಮಕ್ಕಳಾಗಿ ಚಿಂತಿಸಿದಾಗ ಮಾತ್ರ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಅವರ ಭಾವನೆಗಳಿಗೆ ಸ್ಪಂದಿಸಬೇಕು ಅವರೊಟ್ಟಿಗೆ ಮಾತನಾಡಬೇಕು ಸರಿ ತಪ್ಪುಗಳನ್ನು ಸರಿಪಡಿಸಬೇಕು. ಅವರ ಉತ್ತಮ ಕಾರ್ಯಗಳಿಗೆ ಬೆಂಬಲಿಸಬೇಕು ಮತ್ತು ಮಾರ್ಗದರ್ಶನ ನೀಡಬೇಕು. ಅವರ ಎಲ್ಲಾ ಸಂದರ್ಭಗಳಿಗೂ ಹೊಂದಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು ಅದು ಕುಟುಂಬದೊಂದಿಗೆ ಆಗಲಿ, ಸಂಬಂಧಿಕರೊಂದಿಗೆ ಆಗಲಿ, ಸುತ್ತಮುತ್ತಲಿರುವ ಪರಿಸರಕ್ಕಾಗಲಿ ಹೊಂದಿಕೊಳ್ಳುವಂತೆ ಅವರಿಗೆ ಮಾರ್ಗದರ್ಶನ ನೀಡಬೇಕು.
ಮಕ್ಕಳ ಸುರಕ್ಷತೆಗಾಗಿ ಪೋಷಕರು ವಹಿಸಬೇಕಾದ ವಿಶೇಷ ಜವಾಬ್ದಾರಿಗಳು.
ನಿಮ್ಮ ಮಗುವನ್ನು ಬೇರೆಯವರ ಮನೆಗೆ ಬಿಡುವ ಮೊದಲು ಸ್ವಲ್ಪ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಮಕ್ಕಳ ಮೇಲೆ ಹೆಚ್ಚು ನಿಗಾಡುವುದು, ಅವರೇನು ಮಾಡುತ್ತಿದ್ದಾರೆ ಎಂದು ಅವಲೋಕಿಸುವುದು ಮತ್ತು ಸರಿಯಾದ ರೀತಿ ಮಾರ್ಗದರ್ಶನ ನೀಡುವುದು. ಮಕ್ಕಳನ್ನು ಒಂಟಿಯಾಗಿ ಟ್ರಿಪ್ ಗಳಿಗೆ ಕಳುಹಿಸುವ ಬದಲು ತಂದೆ ಅಥವಾ ತಾಯಿ ಅವರೊಟ್ಟಿಗೆ ಹೋಗುವುದು ಉತ್ತಮ. ಮಕ್ಕಳು ಗೊತ್ತಿಲ್ಲದ ಪ್ರದೇಶದಲ್ಲಿ ಕೆರೆ ನೀರು ಬಾವಿ ಸಮುದ್ರದಲ್ಲಿ ಆಟ ಆಡುವ ಸಂದರ್ಭದಲ್ಲಿ ಬಹಳ ಜಾಗರೂಕತೆಯಿಂದ ಇರುವುದು ಉತ್ತಮ. ಆ ಪ್ರದೇಶದ ಬಗ್ಗೆ ಸಂಪೂರ್ಣ ಜ್ಞಾನ ನೀರಿನ ಆಳ ಅಗಲ ಗೊತ್ತಿಲ್ಲದಿದ್ದರೆ ನೀರಿನಲ್ಲಿ ಆಡುವುದು ಅಪಾಯಕ್ಕೆ ಕಾರಣವಾಗಬಹುದು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ.
ವಸತಿ ನಿಲಯದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಇಡೀ ವರ್ಷ ವಿದ್ಯಾಭ್ಯಾಸದ ಒತ್ತಡದಿಂದ ಪರೀಕ್ಷೆ ಎದುರಿಸಿದ ಮಕ್ಕಳು ಮನೆಗೆ ಬಂದಂತಹ ಸಂದರ್ಭದಲ್ಲಿ ಅಥವಾ ಮನೆಯಲ್ಲಿ ನಿರಂತರವಾಗಿ ವಿದ್ಯಾಭ್ಯಾಸ ಮಾಡಿದ ಸಂದರ್ಭದಲ್ಲಿ ಅವರು ಒತ್ತಡಕ್ಕೆ ಒಳಗಾಗಬಹುದು. ಅವರಿಗೆ ಬೇಸಿಗೆ ರಜೆ ಎಂದು ಸಂಪೂರ್ಣವಾಗಿ ಸ್ವತಂತ್ರ ನೀಡುವುದು ಸರಿಯಲ್ಲ. ನಿರಂತರ ನಿಮ್ಮ ಮಾರ್ಗದರ್ಶನ, ಮಕ್ಕಳೊಟ್ಟಿಗೆ ಹೆಚ್ಚು ಸಮಯ ಕಳೆಯುವುದರ ಮೂಲಕ ಅವರಲ್ಲಿ ಹೊಸ ಹೊಸ ಅನುಭವಗಳನ್ನು ಕಲಿಸುವುದು, ಸ್ವಾವಲಂಬಿಗಳಾಗಿ ಬದುಕುವುದನ್ನು ತಿಳಿಸಿಕೊಡಬೇಕು. ಅವರ ಭಾವನೆಗಳನ್ನು ಬುದ್ಧಿಮಟ್ಟವನ್ನು ತಿಳಿಯುವುದರ ಮೂಲಕ ಮಾರ್ಗದರ್ಶನ ನೀಡುವುದು, ಅವರ ಪ್ರತಿಭೆಗೆ ಬೆಂಬಲ ನೀಡಬಹುದು.
ಪೋಷಕರು ಬೇಸಿಗೆ ರಜೆಯನ್ನು ಸರಿಯಾದ ರೀತಿ ಬಳಸಿಕೊಂಡರೆ ನಿಮ್ಮ ಮಕ್ಕಳನ್ನು ಪ್ರಜ್ಞಾವಂತ ನಾಗರೀಕರನ್ನಾಗಿ ಮಾಡಲು ಇದೊಂದು ಉತ್ತಮ ಅವಕಾಶವಾಗಿದೆ. ಎಲ್ಲಾ ಪುಟ್ಟ ಮಕ್ಕಳಿಗೂ ಬೇಸಿಗೆ ರಜೆಯ ಶುಭಾಶಯಗಳು, ನಿಮ್ಮ ಬೇಸಿಗೆ ರಜೆಯು ಸುರಕ್ಷಿತ ಹಾಗೂ ಆರೋಗ್ಯಕರವಾಗಿರಲಿ. ಮಕ್ಕಳ ಯಾವುದೇ ಸಮಸ್ಯೆ ಕಂಡು ಬಂದಲ್ಲಿ ಮಕ್ಕಳ ಉಚಿತ ಸಹಾಯವಾಣಿ 1098 ಹಾಗೂ 112 ದೂರವಾಣಿ ಕರೆ ಮಾಡುವುದರ ಮೂಲಕ ಮಕ್ಕಳ ಸುರಕ್ಷಿತ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಮಾಡೋಣ ಧನ್ಯವಾದಗಳು.
special article | The role of parents in the protection and nurturing of children during summer vacation | Special Article: Tajuddin Khan, President, District Child Welfare Committee, Shivamogga.