
shimoga rain | ಶಿವಮೊಗ್ಗ : ಸಿಡಿಲು ಬಡಿದು 41 ಮೇಕೆಗಳ ಸಾವು – ಓರ್ವರಿಗೆ ಗಾಯ!
ಶಿವಮೊಗ್ಗ (shivamogga), ಏ. 15: ಶಿವಮೊಗ್ಗ ತಾಲೂಕಿನ ಆಯನೂರು, ಕುಂಸಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಏ. 15 ರ ಸಂಜೆ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ.
ಕುಂಸಿ ಸಮೀಪದ ಬಾಳೇಕೊಪ್ಪ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು 41 ಮೇಕೆಗಳು ಹಾಗೂ ಎರಡು ನಾಯಿಗಳು ಸ್ಥಳದಲ್ಲಿಯೇ ಮೃತಪಟ್ಟು, ಮೇಕೆ ಕಾಯುತ್ತಿದ್ದ ಓರ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಮೇಕೆ ಕಾಯುತ್ತಿದ್ದ ಹುಚ್ಚಪ್ಪ ಎಂಬುವರಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಅವರನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಳೆಯಿಂದ ರಕ್ಷಣೆ ಪಡೆಯಲು ಜಮೀನಿನ ಮರವೊಂದರ ಕೆಳಗೆ ಹುಚ್ಚಪ್ಪ ಅವರು ಮೇಕೆಗಳೊಂದಿಗೆ ಆಶ್ರಯ ಪಡೆದಿದ್ದ ವೇಳೆ ಸಿಡಿಲು ಬಡಿದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ, ಪಶುವೈದ್ಯಕೀಯ, ಗ್ರಾಮ ಪಂಚಾಯ್ತಿ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ನಷ್ಟದ ವಿವರ ಇನ್ನಷ್ಟೆ ತಿಳಿದುಬರಬೇಕಾಗಿದೆ.
ಆಯನೂರು, ಕುಂಸಿ ಸುತ್ತಮುತ್ತ ಭಾರೀ ಮಳೆಯಿಂದ ಕೆಲವೆಡೆ ಮರ, ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಇದರಿಂದ ವಿದ್ಯುತ್ ಪೂರೈಕೆಯಲ್ಲಿ ಅಸ್ತವ್ಯಸ್ತವಾಗಿರುವ ವರದಿಗಳು ಬಂದಿವೆ.
ಮತ್ತೊಂದೆಡೆ ಧಾರ್ಮಿಕ ಕ್ಷೇತ್ರ ಹಣಗೆರೆಕಟ್ಟೆ ಸುತ್ತಮುತ್ತಲು ಸಂಜೆ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಈ ವೇಳೆ ಹಣಗೆರೆಕಟ್ಟೆ ಬಳಿ ಮರ ಹಾಗೂ ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದಿದೆ.
ಇದರಿಂದ ಕೆಲ ಸಮಯ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳೀಯರು ರಸ್ತೆ ಮೇಲೆ ಬಿದ್ದ ಮರವನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಮಾಹಿತಿ ಬಂದಿದೆ.
Shivamogga, Apr. 15: The villages around Ayanur and Kumsi in Shivamogga taluk were lashed by heavy rain accompanied by thunder and lightning on the evening of Apr. 15.
A lightning strike on the outskirts of Balekoppa village near Kumsi killed 41 goats and two dogs on the spot, and seriously injured a goat herder. Heavy rains in and around Ayanur and Kumsi have uprooted trees and electric poles in some places, leading to reports of power outages.
On the other hand, there was heavy rain accompanied by thunder and lightning in the evening around the religious site of Hanagerekatte. During this time, trees and electric poles fell on the road near Hanagerekatte.