
ಶಿವಮೊಗ್ಗ : ಕೇಂದ್ರದ ವಿರುದ್ದ ಯುವ ಕಾಂಗ್ರೆಸ್ ಪ್ರತಿಭಟನೆ – ಅಂಚೆ ಕಚೇರಿಗೆ ಮುತ್ತಿಗೆ ಯತ್ನ!
ಶಿವಮೊಗ್ಗ (shivamogga), ಏ. 16: ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ದ ಜಾರಿ ನಿರ್ದೇಶನಾಲಯ ಆರೋಪ ಪಟ್ಟಿ ದಾಖಲಿಸಿರುವುದನ್ನು ಖಂಡಿಸಿ, ಏ. 16 ರಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದರು.
ಬಾಲರಾಜಅರಸ್ ರಸ್ತೆಯಲ್ಲಿರುವ ಮುಖ್ಯ ಅಂಚೆ ಕಚೇರಿ ಎದುರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಚೇರಿಗೆ ಮುತ್ತಿಗೆ ಹಾಕಲು ವಿಫಲ ಯತ್ನ ನಡೆಸಿದರು. ಇದರಿಂದ ಸ್ಥಳದಲ್ಲಿ ಕೆಲ ಸಮಯ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಕಾರ್ಯಕರ್ತರನ್ನು ನಿಯಂತ್ರಿಸಿದರು.
ಆಕ್ರೋಶ : ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರವು, ತನಿಖಾ ಸಂಸ್ಥೆಗಳನ್ನು ನಿರಂತರವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ದ್ವೇಷ ರಾಜಕಾರಣ ನಡೆಸುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ದ ಇ.ಡಿ ಸಂಸ್ಥೆ ಆರೋಪ ಪಟ್ಟಿ ದಾಖಲಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರವು ತನಿಖಾ ಸಂಸ್ಥೆಗಳ ಮೂಲಕ ವಿರೋಧ ಪಕ್ಷಗಳನ್ನು ಹತ್ತಿಕ್ಕುವ ವ್ಯವಸ್ಥಿತ ಹುನ್ನಾರ ನಡೆಸುತ್ತಿದೆ. ಇ.ಡಿ, ಐಟಿ, ಸಿಬಿಐ ನಂತಹ ತನಿಖಾ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಬೆದರಿಸುವ ಕಾರ್ಯ ನಡೆಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣವೇ ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಬೇಕು. ಸಾಂವಿಧಾನಿಕ ತನಿಖಾ ಸಂಸ್ಥೆಗಳನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್ ರಮೇಶ್, ಶಿವಕುಮಾರ್, ವಿಜಯಕುಮಾರ್, ಕೆ ಚೇತನ್, ಸಿ ಜೆ ಮಧುಸೂಧನ್, ಇಮ್ರಾನ್, ಅಕ್ಬರ್, ಯುವ ಕಾಂಗ್ರೆಸ್ ಮುಖಂಡರಾದ ಹರ್ಷಿತ್ ಗೌಡ, ಚರಣ್, ಪ್ರವೀಣ್, ಗಿರೀಶ್, ಸಕ್ಲೇನ್, ಅನಿಲ್ ಪಾಟೀಲ್, ಧನುಷ್, ಮಲವಗೊಪ್ಪ ಶಿವು, ಆಕಾಶ್, ಎನ್ಎಸ್’ಯುಐ ಮುಖಡರಾದ ವಿಜಯ್, ರವಿ ತಟ್ಟಿಕೆರೆ, ಚಂದ್ರೋಜಿರಾವ್, ಸುಭಾನ್, ಅಭಿ, ಆದಿತ್ಯ, ವರುಣ್ ಮೊದಲಾದವರಿದ್ದರು.
Shivamogga, Apr. 16: Youth Congress workers staged a protest against the central government in Shivamogga city on Apr. 16, condemning the Enforcement Directorate’s charge sheet filed against Congress leaders Sonia Gandhi and Rahul Gandhi.