
ಮಲೆನಾಡಲ್ಲಿ ರಣ ಬಿಸಿಲು : ಕುಸಿಯುತ್ತಿರುವ ಅಂತರ್ಜಲ – ಕುಡಿಯುವ ನೀರಿಗೆ ಎದುರಾಗಲಾರಂಭಿಸಿದೆ ಹಾಹಾಕಾರ!
-ಬಿ.ರೇಣುಕೇಶ್-
ಶಿವಮೊಗ್ಗ, ಎ. 4: ಮಲೆನಾಡು ಭಾಗದಲ್ಲಿ ಪ್ರಸ್ತುತ ವರ್ಷ ಬೇಸಿಗೆ ಬಿಸಿಲ ತೀವ್ರತೆ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ತಾಪಮಾನ ಏರುಗತಿಯಲ್ಲಿ ಸಾಗುತ್ತಿದೆ. ನೆತ್ತಿ ಸುಡುವ ರಣ ಬಿಸಿಲಿಗೆ ನಾಗರೀಕರು ಅಕ್ಷರಶಃ ತತ್ತರಿಸಿ ಹೋಗಲಾರಂಭಿಸಿದ್ದಾರೆ!
ಮತ್ತೊಂದೆಡೆ, ಬಿಸಿಲ ತಾಪದಿಂದ ಅಂತರ್ಜಲ ಮಟ್ಟ ಗಂಭೀರ ಸ್ವರೂಪದಲ್ಲಿ ಕುಸಿಯಲಾರಂಭಿಸಿದೆ. ಹಲವೆಡೆ ಬೋರ್ ವೆಲ್, ಬಾವಿ ಮತ್ತೀತರ ಜಲಮೂಲಗಳು ನೀರಿಲ್ಲದೆ ಬರಿದಾಗಲಾರಂಭಿಸಿದೆ. ಇದರಿಂದ ಕುಡಿಯುವ ನೀರು ಪೂರೈಕೆಯ ಮೇಲೆ ಪರಿಣಾಮ ಬೀರಲಾರಂಭಿಸಿದೆ. ಈಗಾಗಲೇ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಜೀವಜಲಕ್ಕೆ ತತ್ವಾರ ಎದುರಾಗಿದೆ.
ಮುಂಬರುವ ದಿನಗಳಲ್ಲಿ, ತಾಪಮಾನದ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಗಳು ಗೋಚರವಾಗುತ್ತಿವೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕುಡಿಯುವ ನೀರಿಗೆ ಜನ-ಜಾನುವಾರುಗಳು ಪರಿತಪಿಸುವುದು ನಶ್ಚಿತವಾಗುತ್ತದೆ.
ಅಗತ್ಯ ಕ್ರಮ: ‘ಜಿಲ್ಲೆಯಲ್ಲಿ ಬಿಸಿಲ ಬೇಗೆ ಹೆಚ್ಚಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರವಹಿಸುವಂತೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ನೂತನ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ತಿಳಿಸಿದ್ದಾರೆ.
ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತೀವ್ರ ಸ್ವರೂಪದ ತಾಪಮಾನದ ಪ್ರಮಾಣದಿಂದ, ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರಿಂದ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯವಾಗುತ್ತಿರುವ ದೂರುಗಳು ಬರಲಾರಂಭಿಸಿವೆ. ಇಂತಹ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.
ತಾವು ಸಿಇಓ ಆಗಿ ಅಧಿಕಾರ ಸ್ವೀಕರಿಸಿದ ನಂತರ, ತಾಲೂಕುಗಳಿಗೆ ಭೇಟಿಯಿತ್ತು ಪರಿಶೀಲನೆ ನಡೆಸುತ್ತಿದ್ದೆನೆ. ಸ್ಥಳೀಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ, ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದೆನೆ. ನಾಗರೀಕರಿಗೆ ತೊಂದರೆಯಾಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಸೂಚಿಸಿರುವುದಾಗಿ ಸಿಇಓರವರು ಮಾಹಿತಿ ನೀಡಿದ್ದಾರೆ
ಚುನಾವಣೆ ನಡುವೆಯೂ ನಾಗರೀಕರ ಸಮಸ್ಯೆ ಪರಿಹರಿಸಲು ಸೂಚನೆ : ಸಿಇಓ
*** ಪ್ರಸ್ತುತ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಕೆಲ ಅಧಿಕಾರಿ, ಸಿಬ್ಬಂದಿಗಳು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಚುನಾವಣೆ ಜೊತೆಜೊತೆಗೆ ಕುಡಿಯುವ ನೀರು ಸೇರಿದಂತೆ ಮತ್ತೀತರ ನಾಗರೀಕ ಸಮಸ್ಯೆಗಳ ಪರಿಹಾರದತ್ತಲೂ ಗಮನಹರಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಕುಸಿದು, ಕುಡಿಯುವ ನೀರು ಸಮಸ್ಯೆ ಉಲ್ಬಣಿಸಬಹುದಾದ ಗ್ರಾಮಗಳ ಸಂಭಾವ್ಯ ಪಟ್ಟಿ ಸಿದ್ದಪಡಿಸಲಾಗಿದೆ. ಇಂತಹ ಗ್ರಾಮಗಳಲ್ಲಿ ಸಮಸ್ಯೆ ಪರಿಹಾರಕ್ಕೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುತ್ತಿದೆ. ಸಮಸ್ಯೆ ಕಂಡುಬರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು.
ಶುದ್ಧ ಕುಡಿಯುವ ನೀರು ಘಟಕಗಳ ಸಮರ್ಪಕ ಕಾರ್ಯನಿರ್ವಹಣೆಗೆ ಕ್ರಮಕೈಗೊಳ್ಳಲಾಗುವುದು. ಜೊತೆಗೆ ಫ್ಲೋರೈಡ್ ಯುಕ್ತ ನೀರು ಪತ್ತೆ ಹಚ್ಚಿ ಕುಡಿಯಲು ಯೋಗ್ಯವಾದ ನೀರು ಪೂರೈಕೆಗೂ ಕ್ರಮಕೈಗೊಳ್ಳುವಂತೆ ಸಂಬಂಧಿಸಿದವರಿಗೆ ಸೂಚಿಸಲಾಗಿದೆ ಎಂದು ಇದೇ ವೇಳೆ ಸಿಇಓ ಅವರು ತಿಳಿಸಿದ್ದಾರೆ.