
ಲೋಕಾಯುಕ್ತ ಪೊಲೀಸ್ ಅಧಿಕಾರಿ ಎಂದು ಲಕ್ಷಾಂತರ ರೂ. ಬ್ಲ್ಯಾಕ್’ಮೇಲ್! : ಕೇಸ್ ದಾಖಲು
ಭದ್ರಾವತಿ, ಎ. 4: ಲೋಕಾಯುಕ್ತ ಪೊಲೀಸ್ ಅಧಿಕಾರಿ ಎಂದು ಅಧಿಕಾರಿಯೋರ್ವರ ಮೊಬೈಲ್ ಫೋನ್ ಗೆ ಕರೆ ಮಾಡಿ, ಲಕ್ಷಾಂತರ ರೂ. ನೀಡುವಂತೆ ಬ್ಲ್ಯಾಕ್’ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ.
ಪ್ರಕರಣದ ಹಿನ್ನೆಲೆ: ಸಮಾಜ ಕಲ್ಯಾಣ ಇಲಾಖೆಯ ಭದ್ರಾವತಿ ಶಿಶು ಯೋಜನಾಭಿವೃದ್ದಿ ಅಧಿಕಾರಿ (ಸಿಡಿಪಿಓ) ಸುರೇಶ್ ರವರ ಮೊಬೈಲ್ ಗೆ ಕರೆ ಮಾಡಿದ ವ್ಯಕ್ತಿಯೋರ್ವ, ತನ್ನನ್ನು ಶಿವಮೊಗ್ಗ ಲೋಕಾಯುಕ್ತ ಉಪಾಧೀಕ್ಷಕರೆಂದು ಪರಿಚಯಿಸಿಕೊಂಡಿದ್ದ.
‘ಅಂಗನವಾಡಿಗಳಿಗೆ ಆಹಾರ ವಿತರಣೆ ವಿಚಾರದಲ್ಲಿ ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ. ಬೆಂಗಳೂರಿನಿಂದ ವಿಚಾರಣಾಧಿಕಾರಿಗಳು ಆಗಮಿಸಿದ್ದಾರೆ.ಈ ಸಾರಿ ನಿಮಗೆ ಜೀವದಾನ ನೀಡುತ್ತೆವೆ. 1.20 ಲಕ್ಷ ರೂ.ಗಳನ್ನು ಗೂಗಲ್ ಪೇ ಮಾಡುವಂತೆ’ ಬ್ಲ್ಯಾಕ್’ಮೇಲ್ ಮಾಡಿದ್ದ.
‘ಹಣಕ್ಕೆ ಬೆದರಿಕೆ ಹಾಕಿ ಮಾನಸಿಕ ಕಿರುಕುಳ ನೀಡಿದವನ ವಿರುದ್ದ ಕ್ರಮಕೈಗೊಳ್ಳುವಂತೆ, ಅಧಿಕಾರಿ ಸುರೇಶ್ ಅವರು ದೂರು ನೀಡಿದ್ದಾರೆ. ಸದರಿ ದೂರಿನ ಆಧಾರದ ಮೇಲೆ ಹಳೇನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 384, 511 ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.