Rabies vaccination for street dogs in Shivamogga : will the municipal administration pay attention? shimoga | ಶಿವಮೊಗ್ಗದ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ : ಕಾಟಾಚಾರದ ಶಿಬಿರ  - ಗಮನಿಸುವುದೆ ಪಾಲಿಕೆ ಆಡಳಿತ?

shimoga | ಶಿವಮೊಗ್ಗದ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ : ಕಾಟಾಚಾರದ ಶಿಬಿರ  – ಗಮನಿಸುವುದೆ ಪಾಲಿಕೆ ಆಡಳಿತ?

ಶಿವಮೊಗ್ಗ (shivamogga), ಮೇ 5: ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತವು, ನಗರ ವ್ಯಾಪ್ತಿಯಲ್ಲಿನ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ, ರೇಬಿಸ್ ವಿರುದ್ಧ ಲಸಿಕೆ ಹಾಗೂ ಕಿವಿಗೆ ಗುರುತು ಹಾಕುವ ಕಾರ್ಯಾಚರಣೆ ಹಮ್ಮಿಕೊಂಡಿದೆ.

ಸದರಿ ಶಿಬಿರ ರಾಜೀವ್ ಗಾಂಧಿ ಬಡಾವಣೆಯ ಮಹಾವೀರ ಗೋ ಶಾಲೆ ಪಕ್ಕ ಆಯೋಜಿಸಲಾಗಿದೆ. ಮೇ 5 ರಿಂದ ಶಿಬಿರ ಆರಂಭವಾಗಲಿದೆ ಎಂದು ಪಾಲಿಕೆ ಆಯುಕ್ತರು ಇತ್ತೀಚೆಗೆ ಬಿಡುಗಡೆ ಮಾಡಿದ್ದ ಪ್ರಕಟಣೆಯಲ್ಲಿ ತಿಳಿಸಿದ್ದರು. ಆದರೆ ನಾಯಿಗಳನ್ನು ಹಿಡಿಯುವ ತಂಡ ನಗರಕ್ಕೆ ಆಗಮಿಸದಿರುವ ಹಿನ್ನೆಲೆಯಲ್ಲಿ, ಇನ್ನೆರೆಡು ದಿನ ತಡವಾಗಿ ಶಿಬಿರ ಆರಂಭವಾಗಲಿದೆ ಎಂದು ಪಾಲಿಕೆ ಆಡಳಿತ ಮೂಲಗಳು ಮಾಹಿತಿ ನೀಡಿವೆ.

ಕಾಟಾಚಾರವಾಗದಿರಲಿ : ಸದ್ಯ ಶಿವಮೊಗ್ಗ ನಗರ ಸೇರಿದಂತೆ ಹೊರವಲಯದ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತ ಮಟ್ಟಕ್ಕೆ ತಲುಪಿರುವ ಮಾಹಿತಿಗಳು ಕೇಳಿಬರುತ್ತಿವೆ. ಪ್ರಸ್ತುತ ಕೆಲವೆಡೆ ಸಿಕ್ಕಸಿಕ್ಕವರ ಮೇಲೆ ನಾಯಿಗಳು ದಾಳಿ ನಡೆಸುತ್ತಿರುವ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ನಾಯಿ ಕಡಿತದಿಂದ ಬರುವ ರೇಬಿಸ್ ರೋಗ ಮಾರಣಾಂತಿಕವಾಗಿದೆ. ಈ ಕಾರಣದಿಂದ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳಿಗೆ ಪರಿಣಾಮಕಾರಿಯಾಗಿ ರೇಬಿಸ್ ವಿರುದ್ಧದ ಲಸಿಕೆ ಹಾಕುವ ಕಾರ್ಯಕ್ರಮವನ್ನು ಪಾಲಿಕೆ ಆಡಳಿತ ಮಾಡಬೇಕಾಗಿದೆ.

ಸದ್ಯ ರಾಜೀವ್ ಗಾಂಧಿ ಬಡಾವಣೆ ಸಮೀಪ ಮಾತ್ರ ಶಿಬಿರ ಆಯೋಜಿಸಲಾಗುತ್ತಿದೆ. ಇದು ಮೇಲ್ನೋಟಕ್ಕೆ ಕಾಟಾಚಾರದಂತೆ ಭಾಸವಾಗುತ್ತಿದೆ. ಒಂದೇ ಕಡೆ ಶಿಬಿರ ಹಮ್ಮಿಕೊಂಡು, ನಗರದಲ್ಲಿರುವ ಸಾವಿರಾರು ನಾಯಿಗಳನ್ನು ಹಿಡಿದು ತಂದು ಲಸಿಕೆ ಹಾಕುವ ಪಾಲಿಕೆ ಯೋಜನೆ ಅವೈಜ್ಞಾನಿಕವಾಗಿದೆ ಎಂದು ನಾಗರೀಕರು ದೂರುತ್ತಾರೆ.

ಪ್ರತಿಯೊಂದು ವಾರ್ಡ್ ನಲ್ಲಿಯೂ ಶಿಬಿರ ಆಯೋಜಿಸಬೇಕಾಗಿದೆ. ಈ ಬಗ್ಗೆ ಮುಂಚಿತವಾಗಿಯೇ ಆಯಾ ವಾರ್ಡ್ ನಾಗರೀಕರಿಗೆ ಮಾಹಿತಿ ನೀಡಬೇಕು. ಸ್ಥಳೀಯ ಸಂಘಸಂಸ್ಥೆಗಳು, ಪಶುವೈದ್ಯಕೀಯ ಕಾಲೇಜು, ಪಶುವೈದ್ಯಕೀಯ ಇಲಾಖೆಯ ಸಹಕಾರ ಪಡೆದುಕೊಳ್ಳಬೇಕು.

ಇದರಿಂದ ಪ್ರತಿಯೊಂದು ಪ್ರದೇಶದಲ್ಲಿರುವ ಬೀದಿ ನಾಯಿಗಳನ್ನು ಪತ್ತೆ ಹಚ್ಚಿ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುವುದು ಹಾಗೂ ರೇಬಿಸ್ ಲಸಿಕೆ ಹಾಕಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ನೆಪಮಾತ್ರಕ್ಕೆ ಕೆಲ ಬೀದಿ ನಾಯಿಗಳನ್ನು ಹಿಡಿದು ತಂದು ಲಸಿಕೆ ಹಾಕಿದರೆ ಏನು ಪ್ರಯೋಜನ? ಅನಗತ್ಯ ದುಂದುವೆಚ್ಚವಾಗುತ್ತದೆ ಎಂದು ನಾಗರೀಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಇತರೆ ಅಧಿಕಾರಿ – ಸಿಬ್ಬಂದಿಗಳ ನಿಯೋಜಿಸಿ : ಸದ್ಯ ಪಾಲಿಕೆಯಲ್ಲಿ ಓರ್ವ ಪಶುವೈದ್ಯಾಧಿಕಾರಿಯಿದ್ದಾರೆ. ಇವರೊಬ್ಬರೇ 35 ವಾರ್ಡ್ ಗಳ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕುವ ಜವಾಬ್ದಾರಿ ಹೊತ್ತಿದ್ದಾರೆ..! ಎಲ್ಲದಕ್ಕಿಂತ ಮುಖ್ಯವಾಗಿ ಪಾಲಿಕೆ ಆಡಳಿತ ನೀಡಿರುವ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ, ಶಿಬಿರದ ಬಗ್ಗೆ ಸಮರ್ಪಕ ಮಾಹಿತಿ ನೀಡುವವರು ಇಲ್ಲವಾಗಿದ್ದಾರೆ.

ಸದ್ಯ ಪಾಲಿಕೆಯಲ್ಲಿ ಆರೋಗ್ಯ ವಿಭಾಗವಿದೆ. ಸದರಿ ವಿಭಾಗದಲ್ಲಿ ಹೆಲ್ತ್ ಇನ್ಸ್’ಪೆಕ್ಟರ್ ಗಳು ಸೇರಿದಂತೆ ಸಾಕಷ್ಟು ಸಂಖ್ಯೆಯ ಅಧಿಕಾರಿ – ಸಿಬ್ಬಂದಿಗಳಿದ್ದಾರೆ. ಜೊತೆಗೆ ಪ್ರತಿ ವಾರ್ಡ್ ಗಳಿಗೂ ಎಂಜಿನಿಯರ್ ಮೇಲುಸ್ತುವಾರಿಗಳಿದ್ದಾರೆ. ಇವರೆಲ್ಲರನ್ನು ಬಳಸಿಕೊಂಡು ರೇಬಿಸ್ ಲಸಿಕೆ ಕಾರ್ಯಾಚರಣೆ ನಡೆಸಬೇಕಾಗಿದೆ.

ಪ್ರತಿಯೊಂದು ವಾರ್ಡ್ ನಲ್ಲಿಯೂ ಶಿಬಿರ ನಡೆಸಬೇಕು. ಪ್ರತ್ಯೇಕ ಅಧಿಕಾರಿ – ಸಿಬ್ಬಂದಿಗಳ ತಂಡ ರಚನೆ ಮಾಡಬೇಕು. ಆಗ ಮಾತ್ರ ಶಿಬಿರ ಯಶಸ್ವಿಯಾಗಿ ನಡೆಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಕೇವಲ ಅಂಕೆಸಂಖ್ಯೆಗಳಲ್ಲಿ ಮಾತ್ರ ಶಿಬಿರ ಯಶಸ್ವಿಯಾಗುತ್ತದೆ. ಹಣವೂ ಖರ್ಚಾಗುತ್ತದೆ ಎಂದು ನಾಗರೀಕರು ದೂರುತ್ತಾರೆ.

ಇನ್ನಾದರೂ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಆಡಳಿತ ಇತ್ತ ಚಿತ್ತ ಹರಿಸಬೇಕಾಗಿದೆ. ಸಮರ್ಪಕವಾಗಿ ಶಿಬಿರ ಆಯೋಜನೆ ಮಾಡುವ ನಿಟ್ಟಿನಲ್ಲಿ ಆದ್ಯ ಗಮನಹರಿಸಬೇಕಾಗಿದೆ ಎಂಬುವುದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.

*** ಬೆಂಗಳೂರಿನಂತಹ ಮಹಾನಗರದಲ್ಲಿ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕುವ ಕಾರ್ಯಕ್ರಮವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಿಬಿಎಂಪಿ ಆಡಳಿತ ಮಾಡಿಕೊಂಡು ಬರುತ್ತಿದೆ. ಸ್ವತಃ ಬಿಬಿಎಂಪಿ ಆಯುಕ್ತರೇ ಸಾಕಷ್ಟು ಮುತುವರ್ಜಿ ವಹಿಸುತ್ತಾರೆ. ಪ್ರತಿಯೊಂದು ಪ್ರದೇಶಗಳಲ್ಲಿಯೂ ಶಿಬಿರ ಆಯೋಜಿಸಲಾಗುತ್ತದೆ. ಆದರೆ ಶಿವಮೊಗ್ಗದಲ್ಲಿ ಮಾತ್ರ ಇವ್ಯಾವ ಆಸಕ್ತಿಯೂ ಕಂಡುಬರುತ್ತಿಲ್ಲ. ನೆಪಮಾತ್ರಕ್ಕೆ ಶಿಬಿರ ಆಯೋಜನೆ ಮಾಡಿಕೊಂಡು ಬರಲಾಗುತ್ತಿರುವ ದೂರುಗಳಿವೆ. ಇನ್ನಾದರೂ ಪಾಲಿಕೆ ಆಡಳಿತ ಬೆಂಗಳೂರು ಮಾದರಿಯಲ್ಲಿ ಶಿವಮೊಗ್ಗದಲ್ಲಿಯೂ ಯಶಸ್ವಿಯಾಗಿ ಶಿಬಿರ ಆಯೋಜನೆ ಮಾಡುವ ನಿಟ್ಟಿನಲ್ಲಿ ಆದ್ಯ ಗಮನಹರಿಸಬೇಕಾಗಿದೆ.

Shivamogga, May 5: The Shivamogga Municipal Corporation administration has launched a campaign to sterilize stray dogs in the city, vaccinate them against rabies, and tag their ears. Currently, there are reports that the number of stray dogs has reached an extreme level in the outskirts of Shivamogga city and other areas. Currently, there are complaints from the public that dogs are attacking peoples.

Rabies caused by dog ​​bites is fatal. For this reason, the municipal administration needs to implement an effective anti-rabies vaccination program for stray dogs within the Shivamogga city limits.

Bhadravati: House theft case - accused arrested! bhadravati | ಭದ್ರಾವತಿ : ಮನೆಯಲ್ಲಿ ಕಳವು ಪ್ರಕರಣ - ಆರೋಪಿ ಬಂಧನ! Previous post bhadravati | ಭದ್ರಾವತಿ : ಮನೆಯಲ್ಲಿ ಕಳವು ಪ್ರಕರಣ – ಆರೋಪಿ ಬಂಧನ!
Shivamogga : Power outages in various places on June 17-18! ಶಿವಮೊಗ್ಗ : ಜೂ. 17 – 18 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ! Next post shimoga | ಶಿವಮೊಗ್ಗ : ಮೇ 7 ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ!