
‘ಬಸವರಾಜ ಬೊಮ್ಮಾಯಿಗೆ ಬೆಂಬಲ : ರಾಜಕೀಯಕ್ಕೆ ಬರಲ್ಲ!’ – ನಟ ಸುದೀಪ್ ಹೇಳಿಕೆ
ಯಾವುದೇ ಕಾರಣಕ್ಕೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ…!!
ಬೆಂಗಳೂರು, ಎ. 5: ‘ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲಿಸುತ್ತಿದ್ದೆನೆ. ಅವರು ನನಗೆ ಕಷ್ಟ ಕಾಲದಲ್ಲಿ ಸ್ಪಂದಿಸಿದ್ದಾರೆ. ಅದಕ್ಕಾಗಿ ಅವರ ಪರವಾಗಿ ನಿಲ್ಲುತ್ತಿದ್ದೆನೆ. ತಮಗೆ ಯಾವುದೇ ಒತ್ತಡವಿಲ್ಲ. ಒತ್ತಡಕ್ಕಾಗಿ ಬರುವ ವ್ಯಕ್ತಿಯಲ್ಲ’ ಎಂದು ಚಿತ್ರನಟ ಸುದೀಪ್ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಕಿಕ್ಕಿರಿದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ‘ರಾಜಕೀಯಕ್ಕೆ ಬರುವುದಿಲ್ಲ. ಬಿಜೆಪಿಗೆ ಸೇರ್ಪಡೆಯಾಗಿಲ್ಲ. ತಮ್ಮದೇನಿದ್ದರೂ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ’ ಎಂದು ಸುದೀಪ್ ಗೊಂದಲದ ಹೇಳಿಕೆ ನೀಡಿದರು.
‘ಸಿಎಂ ಏನೂ ಹೇಳುತ್ತಾರೋ ಆ ಕೆಲಸ ಮಾಡುತ್ತೆನೆ. ಎಲ್ಲೆಲ್ಲಿ ಪ್ರಚಾರ ಮಾಡಬೇಕು ಎಂಬುವುದು ಇನ್ನೂ ನಿರ್ಧಾರವಾಗಿಲ್ಲ. ಈ ನಿಟ್ಟಿನಲ್ಲಿ ಯಾವುದೇ ನೀಲನಕ್ಷೆಯೂ ಸಿದ್ಧಪಡಿಸಿಲ್ಲ. ಮುಂದಿನ ದಿನಗಳಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೆನೆ’ ಎಂದು ಸುದೀಪ್ ಹೇಳಿದರು.
‘ತಾವು ರಾಜಕೀಯಕ್ಕೆ ಬರುತ್ತಿಲ್ಲ. ನನ್ನ ನಿಲುವು ಸ್ಪಷ್ಟವಾಗಿದೆ. ತಮ್ಮದೇನಿದ್ದರೂ ಬೊಮ್ಮಾಯಿ ಅವರಿಗೆ ಬೆಂಬಲವಷ್ಟೆ. ಯಾವುದೇ ಕಾರಣಕ್ಕೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಸಿನಿಮಾಗಳ ಬೇಕಾದಷ್ಟಿವೆ. ರಾಜಕೀಯಕ್ಕೆ ಪ್ರವೇಶಿಸುತ್ತಿಲ್ಲ’ ಎಂದು ಇದೇ ವೇಳೆ ಸುದೀಪ್ ಅವರು ತಿಳಿಸಿದ್ದಾರೆ.
ಸಿಎಂ ಹೇಳಿಕೆ: ‘ನನ್ನ ಅವರ ವೈಯಕ್ತಿಕ ಸಂಬಂಧ ಹಾಗೂ ಗೌರವಗಳ ಆಧಾರದ ಮೇಲೆ ತಮಗೆ ಬೆಂಬಲ ವ್ಯಕ್ತಪಡಿಸುವುದಾಗಿ ಸುದೀಪ್ ಅವರು ಹೇಳಿದ್ದಾರೆ. ಅವರಿಗೆ ತಾವು ಧನ್ಯವಾದ ಅರ್ಪಿಸುತ್ತೆನೆದೆ’ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಅವರ ಅಭಿಮಾನಿಗಳಿಗೆ ತೊಂದರೆಯಾಗದಂತೆ, ಸುದೀಪ್ ಪ್ರಚಾರ ಸಭೆ ಆಯೋಜಿಸಲಾಗುವುದು. ಸುದೀಪ್ ಅವರ ಬೆಂಬಲದಿಂದ ಬಿಜೆಪಿಗೆ ಅತೀ ದೊಡ್ಡ ಶಕ್ತಿ ಬಂದಂತಾಗಿದೆ. ಇಡೀ ರಾಜ್ಯದಲ್ಲಿ ವಿದ್ಯುತ್ ಸಂಚಲನವಾದಂತಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.