
shimoga | ಶಿವಮೊಗ್ಗಕ್ಕೆ ಸಿಎಂ, ಡಿಸಿಎಂ : ನೆನೆಗುದಿಗೆ ಬಿದ್ದ ಬೇಡಿಕೆಗಳತ್ತ ಹರಿಯುವುದೆ ಚಿತ್ತ?
ವರದಿ : ಬಿ ರೇಣುಕೇಶ್
ಶಿವಮೊಗ್ಗ (shivamogga), ಮೇ 17: ಶಿವಮೊಗ್ಗ ನಗರದಲ್ಲಿ ಮೇ 18 ರಂದು ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಭಾಗವಹಿಸುತ್ತಿದ್ದಾರೆ.
ಹಲವು ದಿನಗಳ ನಂತರ ಸಿಎಂ – ಡಿಸಿಎಂ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಈ ಕಾರಣದಿಂದ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪ್ರಮುಖ ಬೇಡಿಕೆಗಳತ್ತ ರಾಜ್ಯ ಸರ್ಕಾರದ ಚಿತ್ತ ಹರಿಯಲಿದೆಯಾ? ಜಿಲ್ಲೆಗೆ ಏನಾದರೂ ಮಹತ್ವದ ಯೋಜನೆ, ಅನುದಾನ ಘೋಷಣೆಯಾಗಲಿದೆಯಾ? ಎಂಬ ಕುತೂಹಲದ ನಿರೀಕ್ಷೆ ಸ್ಥಳೀಯ ಜನಮಾನಸದಲ್ಲಿದೆ.
ಹರಿಯುವುದೆ ಚಿತ್ತ! : ಭದ್ರಾವತಿಯಲ್ಲಿರುವ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಕಾಯಕಲ್ಪಕ್ಕೆ ರಾಜ್ಯ ಸರ್ಕಾರ ಆದ್ಯ ಗಮನಹರಿಸಬೇಕಾಗಿದೆ. ಈಗಾಗಲೇ ಸರ್ಕಾರದ ಹಂತದಲ್ಲಿ ಕಾರ್ಖಾನೆ ಪುನಶ್ಚೇತನಕ್ಕೆ ಸಂಬಂಧಿಸಿದಂತೆ, ಹಲವು ಪ್ರಕ್ರಿಯೆಗಳು ನಡೆಯುತ್ತಿವೆ. ಆದರೆ ಯಾವೊಂದು ಕಾರ್ಯರೂಪಕ್ಕೆ ಬಂದಿಲ್ಲ.
ಶಿವಮೊಗ್ಗ – ಭದ್ರಾವತಿ ನಗರಗಳ ಬೆಳವಣಿಗೆ ಹಾಗೂ ಕಾನೂನು-ಸುವ್ಯವಸ್ಥೆ ಹಿತದೃಷ್ಟಿಯಿಂದ, ಪೊಲೀಸ್ ಕಮೀಷನರೇಟ್ ಸ್ಥಾಪನೆ ಮಾಡಬೇಕೆಂಬ ಬೇಡಿಕೆಯಿದೆ. ಪೊಲೀಸ್ ಕಮೀಷನರೇಟ್ ಸ್ಥಾಪನೆಯಿಂದ ಎರಡೂ ನಗರಗಳ ಪೊಲೀಸ್ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಲಿದೆ. ಪೊಲೀಸ್ ಬಲ ಹೆಚ್ಚಾಗಲಿದೆ. ಹೊಸ ಪೊಲೀಸ್ ಠಾಣೆಗಳು ಅಸ್ತಿತ್ವಕ್ಕೆ ಬರಲಿವೆ. ಇದರಿಂದ ಎರಡೂ ನಗರಗಳಿಗೆ ಸಾಕಷ್ಟು ಅನುಕೂಲವಾಗಲಿದೆ.
ಜಿಲ್ಲೆಗೆ ಅಸ್ತಿತ್ವಕ್ಕೆ ಬಂದ ನಂತರ ಇಲ್ಲಿಯವರೆಗೂ ಹೊಸದಾಗಿ ಒಂದೇ ಒಂದು ತಾಲೂಕು ಕೇಂದ್ರ ರಚನೆಯಾಗಿಲ್ಲ. ಸುಗಮ ಆಡಳಿತ ದೃಷ್ಟಿಯಿಂದ ಶಿವಮೊಗ್ಗ ನಗರ – ಗ್ರಾಮಾಂತರ, ಆನವಟ್ಟಿ, ಹೊಳೆಹೊನ್ನೂರು, ಶಿರಾಳಕೊಪ್ಪ ತಾಲೂಕು ಕೇಂದ್ರಗಳ ರಚನೆ ಮಾಡಬೇಕೆಂಬ ಬೇಡಿಕೆಯಿದೆ.
ಶಿವಮೊಗ್ಗ ನಗರದ ಬೆಳವಣಿಗೆಗೆ ಅನುಗುಣವಾಗಿ ಮೂಲಸೌಕರ್ಯಗಳು ಅಭಿವೃದ್ದಿಯಾಗುತ್ತಿಲ್ಲ. ವೈಜ್ಞಾನಿಕವಾಗಿ ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯಾಗಬೇಕು. ವಾರ್ಡ್ ಗಳ ಸಂಖ್ಯೆಯನ್ನು 50 ರಿಂದ 60 ಕ್ಕೆ ಹೆಚ್ಚಿಸಬೇಕು. ಸಂಪೂರ್ಣವಾಗಿ ನೆನೆಗುದಿಗೆ ಬಿದ್ದಿರುವ ಪಾಲಿಕೆ ವಾರ್ಡ್ ಗಳ ಚುನಾವಣೆ ಘೋಷಣೆಯಾಗಬೇಕು. ಗಾಜನೂರು ತುಂಗಾ ಜಲಾಶಯದಿಂದ ಶಿವಮೊಗ್ಗ ನಗರಕ್ಕೆ ಸಮರ್ಪಕ ನೀರು ಪೂರೈಕೆಗಾಗಿ, ಹೊಸದಾಗಿ ನೀರು ಶುದ್ಧೀಕರಣ ಘಟಕ ಸ್ಥಾಪನೆಯಾಗಬೇಕೆಂಬ ಆಗ್ರಹ ನಾಗರೀಕರದ್ದಾಗಿದೆ.
ಶಿವಮೊಗ್ಗದಲ್ಲಿ ರಾಜ್ಯಕ್ಕೆ ಮಾದರಿಯಾದ ಜಿಲ್ಲಾಡಳಿತ ಭವನ ನಿರ್ಮಾಣದ ಯೋಜನೆ ರೂಪಿಸಲಾಗಿತ್ತು. ಕಳೆದೊಂದು ದಶಕದಿಂದ ಸದರಿ ಪ್ರಸ್ತಾಪವಿದೆ. ಆದರೆ ಸಂಬಂಧಿಸಿದ ಕಡತ ಸರ್ಕಾರದ ಹಂತದಲ್ಲಿ ಧೂಳು ಹಿಡಿಯುತ್ತಿದೆ. ಯೋಜನೆಗೆ ರಾಜ್ಯ ಸರ್ಕಾರದಿಂದ ಅಗತ್ಯ ಅನುದಾನ ಮಂಜೂರುಗೊಳಿಸಿ, ಕಾಲಮಿತಿಯೊಳಗೆ ಭವನ ನಿರ್ಮಾಣಕ್ಕೆ ಕ್ರಮವಾಗಬೇಕಾಗಿದೆ.
ಬಡ – ಮಧ್ಯಮ ವರ್ಗದ ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು, ಶಿವಮೊಗ್ಗ ಅಥವಾ ಭದ್ರಾವತಿಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಸ್ಥಾಪನೆಯಾಗಬೇಕಾಗಿದೆ. ಸಾಧ್ಯವಾದರೆ ಭದ್ರಾವತಿಯಲ್ಲಿರುವ ಸರ್ಕಾರಿ ಐಟಿಐ ಕಾಲೇಜ್ ನಲ್ಲಿ ಎಂಜಿನಿಯರಿಂಗ್ ಕಾಲೇಜ್ ಆರಂಭಕ್ಕೆ ಕ್ರಮಕೈಗೊಳ್ಳಬೇಕೆಂಬ ಆಗ್ರಹವಿದೆ.
ರಾಜ್ಯ ಸರ್ಕಾರ ಅಧೀನದಲ್ಲಿರುವ, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ವಿಮಾನಗಳ ಸಂಚಾರಕ್ಕೆ ಅವಕಾಶವಾಗುವ ಕಾಮಗಾರಿ ಆಮೆವೇಗದಲ್ಲಿ ಸಾಗುತ್ತಿದ್ದು, ಇಲ್ಲಿಯವರೆಗೂ ಪೂರ್ಣಗೊಂಡಿಲ್ಲ. ಟ್ರಕ್ ಟರ್ಮಿನಲ್ ಯೋಜನೆ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಶಿವಮೊಗ್ಗದಲ್ಲಿ ಜೆನ್ ನರ್ಮ್ ಯೋಜನೆಯಡಿ ಸಂಚರಿಸುತ್ತಿದ್ದ, ಸರ್ಕಾರಿ ಸಿಟಿ ಬಸ್ ಗಳ ಸಂಚಾರ ಅವ್ಯವಸ್ಥೆಯ ಆಗರವಾಗಿದೆ. ವಿವಿಧೆಡೆ ಸಂಚರಿಸುತ್ತಿದ್ದ ಸರ್ಕಾರಿ ಸಿಟಿ ಬಸ್ ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಹಾಗೆಯೇ ಪ್ರತ್ಯೇಕ ಸರ್ಕಾರಿ ಸಿಟಿ ಬಸ್ ಸ್ಟ್ರ್ಯಾಂಡ್ ನಿರ್ಮಾಣ ಇಲ್ಲಿಯವರೆಗೂ ಆರಂಭವಾಗಿಲ್ಲ.
ಆಯುಷ್ ವಿಶ್ವವಿದ್ಯಾಲಯ ಆರಂಭ, ಫುಡ್ ಪಾರ್ಕ್ ನಿರ್ಮಾಣ, ರಾಜ್ಯ ಹಾಗೂ ಜಿಲ್ಲಾ ಹೆದ್ಧಾರಿಗಳ ಅಭಿವೃದ್ದಿಗೆ ಅನುದಾನ, ಪ್ರವಾಸಿ ತಾಣಗಳ ಅಭಿವೃದ್ದಿ ಸೇರಿದಂತೆ ಜಿಲ್ಲೆಯ ಹತ್ತು ಹಲವು ಕ್ಷೇತ್ರಗಳಿಗೆ ರಾಜ್ಯ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿವೆ. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ ಎಂಬುವುದು ನಾಗರೀಕರ ಆಗ್ರಹವಾಗಿದೆ.
Shivamogga, May 17: Chief Minister Siddaramaiah and Deputy Chief Minister D K Shivakumar are participating in the inauguration ceremony of the State Government Employees’ Association Sports Meet to be held in Shivamogga city on May 18. After many days, the CM and DCM are arriving in Shivamogga. Due to this, the local people are curious as to whether the state government will pay attention to the important demands regarding Shivamogga district.