
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ : ಕಿಮ್ಮನೆ ‘ಕೈ’ ಹಿಡಿದ ಕಾಂಗ್ರೆಸ್ ವರಿಷ್ಠರು!
– ಬಿ.ರೇಣುಕೇಶ್ –
ತೀರ್ಥಹಳ್ಳಿ, ಎ. 6: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಎರಡನೇ ಹಂತದ ಹುರಿಯಾಳುಗಳ ಪಟ್ಟಿ ಬಿಡುಗಡೆಗೊಳಿಸಿದೆ. ಇದರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದ್ದು, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ.
ಕಾಂಗ್ರೆಸ್ ಟಿಕೆಟ್ ಗೆ, ಕಿಮ್ಮನೆ ಹಾಗೂ ಆರ್.ಎಂ.ಮಂಜುನಾಥ್ ಗೌಡ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇಬ್ಬರ ನಡುವಿನ ಜಿದ್ದಾಜಿದ್ದಿಯು ಟಿ – 20 ಕ್ರಿಕೆಟ್ ಮ್ಯಾಚ್ ನಷ್ಟೆ ರೋಚಕತೆ ಮೂಡಿಸಿತ್ತು!
ಈ ಕಾರಣದಿಂದಲೇ, ಇತ್ತೀಚೆಗೆ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಇಬ್ಬರು ಮುಖಂಡರ ಸಂಧಾನ ಸಭೆ ಕೂಡ ನಡೆದಿತ್ತು.
ಸಭೆಯಲ್ಲಿ ಓರ್ವರಿಗೆ ಅಸೆಂಬ್ಲಿ ಸ್ಪರ್ಧೆಗೆ ಅವಕಾಶ ಹಾಗೂ ಮತ್ತೋರ್ವರಿಗೆ ವಿಧಾನ ಪರಿಷತ್’ಗೆ ಆಯ್ಕೆಗೊಳಿಸಲಾಗುವುದು ಎಂದು ತಿಳಿಸಲಾಗಿತ್ತು. ಯಾರಿಗೆ ಟಿಕೆಟ್ ನೀಡಿದರೂ ಒಟ್ಟಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿತ್ತು.
ಇದಕ್ಕೆ ಇಬ್ಬರು ಮುಖಂಡರು ಸಮ್ಮತಿ ವ್ಯಕ್ತಪಡಿಸಿದ್ದರು. ಇದೀಗ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ವರಿಷ್ಠರು ಅಸ್ತು ಎಂದಿದ್ದಾರೆ.
ಈಗಾಗಲೇ ತೀರ್ಥಹಳ್ಳಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಕ್ಷೇತ್ರದ ಶಾಸಕರೂ ಆದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಖಾಡಕ್ಕಿಳಿಯುವುದು ಖಚಿತವಾಗಿದೆ. ಉಳಿದಂತೆ ಜೆಡಿಎಸ್ ಅಭ್ಯರ್ಥಿಯಾಗಿ ರಾಜಾರಾಮ್ ಯಡೂರ್ ಅವರು ಕಣಕ್ಕಿಳಿಯುತ್ತಿದ್ದಾರೆ.
ನಿಗೂಢವಾದ ಶಿವಮೊಗ್ಗ, ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರ ಅಭ್ಯರ್ಥಿಗಳು!
*** ಕಾಂಗ್ರೆಸ್ ಪಕ್ಷ ಪ್ರಕಟಿಸಿದ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯಲ್ಲಿ ಭದ್ರಾವತಿ, ಸಾಗರ, ಸೊರಬ ಕ್ಷೇತ್ರಗಳ ಹುರಿಯಾಳುಗಳ ಹೆಸರು ಪ್ರಕಟಿಸಿತ್ತು. ಉಳಿದ ನಾಲ್ಕು ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ ಹಾಗೂ ಶಿಕಾರಿಪುರ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಿಲ್ಲ.

ಶಿವಮೊಗ್ಗ ನಗರ ಹಾಗೂ ಗ್ರಾಮಾಂತರದಲ್ಲಿ ಟಿಕೆಟ್ ಗೆ ಭಾರೀ ಪೈಪೋಟಿಯಿದೆ. ಮತ್ತೊಂದೆಡೆ, ಶಿಕಾರಿಪುರದಲ್ಲಿ ಟಿಕೆಟ್ ಗೆ ಅಂತಹ ಪೈಪೋಟಿಯಿಲ್ಲ. ಆದಾಗ್ಯೂ ಆ ಕ್ಷೇತ್ರದಿಂದ ಅಭ್ಯರ್ಥಿ ಹೆಸರು ಘೋಷಣೆಯಾಗಿಲ್ಲ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅಖಾಡಕ್ಕಿಳಿಯುತ್ತಿರುವ ಶಿಕಾರಿಪುರ ಕ್ಷೇತ್ರದಿಂದ ಯಾರು ‘ಕೈ’ ಅಭ್ಯರ್ಥಿಯಾಗಲಿದ್ದಾರೆ ಎಂಬ ಕುತೂಹಲ ಸ್ಥಳೀಯ ರಾಜಕೀಯ ವಲಯದಲ್ಲಿ ಮನೆ ಮಾಡಿದೆ.
ಯಡಿಯೂರಪ್ಪ ಪುತ್ರನ ಎದುರು ಅಖಾಡಕ್ಕಿಳಿಯುವವರು ಯಾರು?
*** ಶಿವಮೊಗ್ಗ ನಗರ ಹಾಗೂ ಗ್ರಾಮಾಂತರದಲ್ಲಿ, ಕಾಂಗ್ರೆಸ್ ಟಿಕೆಟ್ ಗೆ ಭಾರೀ ಪೈಪೋಟಿಯಿದೆ. ಇದರಿಂದ ಒಮ್ಮತದ ಅಭ್ಯರ್ಥಿ ಆಯ್ಕೆಯು ವರಿಷ್ಠರಿಗೆ ಕಗ್ಗಂಟಾಗಿ ಪರಿಣಮಿಸಿದೆ. ಮತ್ತೊಂದೆಡೆ, ಶಿಕಾರಿಪುರದಲ್ಲಿ ಟಿಕೆಟ್ ಗೆ ಅಂತಹ ಪೈಪೋಟಿಯಿಲ್ಲ. ಆದಾಗ್ಯೂ ಆ ಕ್ಷೇತ್ರಕ್ಕೆ ಎರಡೂ ಹಂತಗಳಲ್ಲಿಯೂ, ಕಾಂಗ್ರೆಸ್ ಅಭ್ಯರ್ಥಿ ಹೆಸರು ಘೋಷಣೆಯಾಗಿಲ್ಲದಿರುವುದು ಕುತೂಹಲ ಮೂಡಿಸಿದೆ.

ಶಿಕಾರಿಪುರದಿಂದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಬಿಜೆಪಿಯಿಂದ ಅಖಾಡಕ್ಕಿಳಿಯುತ್ತಿದ್ದಾರೆ. ಈ ಕಾರಣದಿಂದ ಶಿಕಾರಿಪುರ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಯೋರ್ವರನ್ನು ಕಣಕ್ಕಿಳಿಸುವ ಚಿಂತನೆ ಕಾಂಗ್ರೆಸ್ ದೆಹಲಿ ವರಿಷ್ಠರದ್ದಾಗಿದೆ ಎನ್ನಲಾಗಿದೆ. ಇದರಿಂದ ಶಿಕಾರಿಪುರ ಕ್ಷೇತ್ರದ ‘ಕೈ’ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಸ್ಥಳೀಯ ರಾಜಕೀಯ ವಲಯದಲ್ಲಿ ಮನೆ ಮಾಡುವಂತಾಗಿದೆ.