
ನುಡಿ ನಮನ : ‘ಎಂಜಿನಿಯರ್ ಗಳಿಗೆ ಆದರ್ಶಪ್ರಾಯರಾಗಿದ್ದ ಕೆ ಪಿ ಚಿನ್ನಪ್ಪ ಹೆಗ್ಡೆ…’
ಬರಹ : ಬಿ ಎಸ್ ಬಾಲಕೃಷ್ಣ, ಪಿಡಬ್ಲ್ಯೂಡಿ ನಿವೃತ್ತ ಅಧೀಕ್ಷಕ ಎಂಜಿನಿಯರ್.
“ನಾವು ಒಬ್ಬ ವ್ಯಕ್ತಿ ಯನ್ನು ಕಳೆದುಕೊಳ್ಳುವವರೆಗೆ, ಅವರ ವ್ಯಕ್ತಿತ್ವವನ್ನು ಅರಿತು ಕೊಳ್ಳುವುದಿಲ್ಲ ಮತ್ತು ಅವರ ಒಳ್ಳೆಯ ಗುಣಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದು ಇಲ್ಲ…”
ರಾಷ್ಟ್ರೀಯ ಹೆದ್ದಾರಿ ಮತ್ತು ಲೋಕೋಪಯೋಗಿ ಇಲಾಖೆಗಳಲ್ಲಿ, ವಿವಿಧ ಹುದ್ದೆಗಳಲ್ಲಿ ಸುಮಾರು 40 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ, 88 ವರ್ಷ ವಯೋಮಾನದ ಹಿರಿಯ ಚೇತನ ಕೆ.ಪಿ. ಚಿನ್ನಪ್ಪ ಹೆಗ್ಡೆ ಯವರು ಮೇ 17 ರಂದು ವಿಧಿವಶರಾಗಿದ್ದಾರೆ. ಈ ವಿಷಯ ತಿಳಿದು ತಮಗೆ ಅತೀವ ಬೇಸರ, ದುಃಖವಾಯಿತು. ಅವರ ಕುಟುಂಬದ ಸದಸ್ಯರಿಗೆ ನನ್ನ ಸಂತಾಪಗಳು.
ಸುರತ್ಕಲ್ ನಲ್ಲಿ ನನ್ನ ವ್ಯಾಸಂಗ ಮುಗಿದ ನಂತರ, ಸ್ಪಲ್ಪಕಾಲ AFCONS ಕಂಪೆನಿ ಯಲ್ಲಿ ಸೇವೆ ಸಲ್ಲಿಸಿದೆ. 1983 ರಲ್ಲಿ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ ಇಲಾಖೆಯಲ್ಲಿ ನನ್ನ ವೃತ್ತಿ ಜೀವನ ಪ್ರಾರಂಭಿಸಿದೆ . ಆಗ ಚಿನ್ನಪ್ಪ ಹೆಗ್ಡೆಯವರು ಕಚೇರಿಯ ಮುಖ್ಯಸ್ಥರಾಗಿದ್ದರು.
ಇಲಾಖೆಯಲ್ಲಿ ನನ್ನ ಪ್ರಥಮ ‘ಬಾಸ್’ ಆಗಿದ್ದರು. ನಾನು ಇಲಾಖೆಯಲ್ಲಿ ವರದಿ ಮಾಡಿಕೊಳ್ಳುವ ಮೊದಲೇ ಶ್ರೀಯುತರ ಶಿಸ್ತುಬದ್ಧ, ಪ್ರಾಮಾಣಿಕ, ಕಠಿಣ ಪರಿಶ್ರಮದ ಬಗ್ಗೆ, ಕಾಮಗಾರಿಗಳ ಗುಣಮಟ್ಟದ ಅನುಷ್ಠಾನದದಲ್ಲಿ ವಹಿಸುವ ಕಾಳಜಿಯ ಬಗ್ಗೆ ಸಾಕಷ್ಟು ಕೇಳಿ ತಿಳಿದಿದ್ದೆ. ಆದರೆ ಇದು ಅಕ್ಷರಶಃ ನಿಜ ಎಂದು ತಿಳಿಯಲು ತಮಗೆ ಹೆಚ್ಚು ಸಮಯ ಬೇಕಾಗಿರಲಿಲ್ಲ.
ಅವರ ವೈಯಕ್ತಿಕ ವ್ಯಕ್ತಿತ್ವ, ವೇಷಭೂಷಣ, ನಡೆ, ನುಡಿ, ಆಡಳಿತದಲ್ಲಿ ಶಿಸ್ತು, ಸಮಯ ಪಾಲನೆ, ಕಾಮಗಾರಿಗಳ ಬಗ್ಗೆ ಆಳವಾದ ಜ್ಞಾನ, ಹೆಚ್ಚಿನ ತಾಂತ್ರಿಕ ವಿಷಯಗಳನ್ನು ತಿಳಿದು ಕೊಳ್ಳುವ ಬಯಕೆ, ಕಾಮಗಾರಿಗಳ ಯೋಜನೆ, DPR ತಯಾರಿಕೆ, ಗುಣ ಮಟ್ಟದ ತ್ವರಿತ ಅನುಷ್ಠಾನ, ಶಿಸ್ತು ಬದ್ಧ ಆಡಳಿತ, ಪ್ರತಿಯೊಂದರಲ್ಲಿಯೂ ಮಾದರಿ ಆಗಿದ್ದರು. ಪ್ರತಿದಿನ 10 ರಿಂದ 12 ಗಂಟೆವರೆಗೆ ಕೆಲಸ ಮಾಡುವುದು ವಾಡಿಕೆ ಆಗಿತ್ತು. ಅವರ ಈ ಗುಣ ಎಲ್ಲ ಇಲಾಖೆಗಳ ಎಂಜಿನಿಯರ್ ಗಳಿಗೂ ಸರ್ವಕಾಲಕ್ಕೂ ಮಾದರಿಯಾಗಿದೆ ಎಂದರೇ ತಪ್ಪಾಗಲಾರದು.
ತಮ್ಮ ನಿಲುವುಗಳಲ್ಲಿ ಕಠಿಣ ವಾಗಿದ್ದರೂ ಸಹೋದ್ಯೋಗಿಗಳ ಬಗ್ಗೆ ಕಾಳಜಿ, ಸಹಾನುಭೂತಿ ತೋರಿಸುವಲ್ಲಿ ಹಿಂದೆ ಇರುತ್ತಿರಲಿಲ್ಲ. ನಾನು ಆಗಷ್ಟೇ ವ್ಯಾಸಂಗ ಮುಗಿಸಿ ಬಂದಿದ್ದರಿಂದ ಮತ್ತು ನಾನು ಅವರ ಜಿಲ್ಲೆಯವನೇ ಆಗಿದ್ದರಿಂದ ನನ್ನ ಬಗ್ಗೆ ಸ್ವಲ್ಪ ಹೆಚ್ಚು ಮೃಧು ಧೋರಣೆ ಹೊಂದಿದ್ದರು. ನನ್ನನ್ನು ಉತ್ತೇಜಿಸಲು, ಆಗಾಗ್ಗೆ “ಬಾಲಕೃಷ್ಣ, ನೀವು ಯಾಕೆ IAS ಪರೀಕ್ಷೆ ಬರೆಯಬಾರದು. ಆಂಗ್ಲ ಭಾಷೆಯ ಮೇಲೆಗೆ ನಿಮಗೆ ಉತ್ತಮ ಪ್ರಾವಿಣ್ಯವಿದೆ ” ಎಂದು ಹೇಳುತ್ತಿದ್ದರು.
ಈ ವಿಶೇಷ ಗುಣಗಳು ಖಂಡಿತಾ ನನ್ನನ್ನು ಸೇರಿದಂತೆ ಸಹೋದ್ಯೋಗಿಗಳ ಮೇಲೆ ಪ್ರಭಾವ ಬೀರದೇ ಇರಲಿಲ್ಲ. ಆಂಗ್ಲ ಭಾಷೆಯಲ್ಲಿ ಒಂದು ನಾಣ್ಣುಡಿ ಇದೆ, “ಎಲ್ಲಾ ಒಳ್ಳೆಯ ವಿಷಯ ಗಳಿಗೂ ಒಂದು ಅಂತ್ಯ ಈರಲೇ ಬೇಕು” ಎಂದು. ಆದರೆ ಇವರ ಸಾವು ಖಂಡಿತಾ ಎಲ್ಲರಿಗೂ ಬೇಸರವನ್ನು ಉಂಟು ಮಾಡಿದೆ. ಅವರ ಅತ್ಮಕ್ಕೆ ಶಾಂತಿಯನ್ನು ತರಲಿ ಎಂದು ಹಾರೈಕೆ ಮಾಡುತ್ತೇನೆ .
ಕೊನೆಯದಾಗಿ,’ಇಲಾಖೆಯಲ್ಲಿ ನಾನು ಕಂಡ ಕೆಲವೇ ಉತ್ತಮ ಅಧಿಕಾರಿಗಳಲ್ಲಿ ಇವರೂ ಒಬ್ಬರು ಎಂದು ಹೇಳಿ ನನ್ನ ನುಡಿ ನಮನವನ್ನು ಮುಗಿಸುತ್ತೇನೆ.
ಬಿ ಎಸ್ ಬಾಲಕೃಷ್ಣ ಪರಿಚಯ

ಬಿ ಎಸ್ ಬಾಲಕೃಷ್ಣ ಅವರು ಲೋಕೋಪಯೋಗಿ ಇಲಾಖೆ ಶಿವಮೊಗ್ಗ – ಚಿತ್ರದುರ್ಗ – ದಾವಣಗೆರೆ ಜಿಲ್ಲೆಗಳ ಅಧೀಕ್ಷಕ ಎಂಜಿನಿಯರ್ ಆಗಿ ಕಾರ್ಯನಿರ್ವಹಣೆ ಮಾಡಿದ್ದರು. ಅವರ ದಕ್ಷ, ಪ್ರಾಮಾಣಿಕ ಕಾರ್ಯನಿರ್ವಹಣೆ ಗಮನ ಸೆಳೆದಿತ್ತು. ಕಾಮಗಾರಿಗಳ ಅನುಷ್ಠಾನದಲ್ಲಿ ಆಮೂಲಾಗ್ರ ಸುಧಾರಣೆ – ಬದಲಾವಣೆ ತಂದಿದ್ದರು. ಇದು ಅಂದು ರಾಜ್ಯ ಸರ್ಕಾರದ ಗಮನ ಸೆಳೆದಿತ್ತು. ಕಳೆದ ಕೆಲ ವರ್ಷಗಳ ಹಿಂದೆ ವಯೋ ನಿವೃತ್ತಿಯಾಗಿರುವ ಬಿ ಎಸ್ ಬಾಲಕೃಷ್ಣ ಅವರು, ಕರ್ನಾಟಕ ನೀರಾವರಿ ನಿಗಮ ಹಾಗೂ ಕೃಷ್ಣ ಭಾಗ್ಯ ಜಲ ನಿಗಮದ ಅಂದಾಜು ಪಟ್ಟಿ ಪರಿಶೀಲನಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇದರ ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರಿ ಕಾಮಗಾರಿಗಳ ಅನುಷ್ಠಾನ, ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಹಾಗೂ ಎಂಜಿನಿರಯ್ ಗಳಿಗೆ ಮಾಹಿತಿ ನೀಡುತ್ತಿರುತ್ತಾರೆ.