
shimoga | ಶಿವಮೊಗ್ಗ ಮಹಾನಗರ ಪಾಲಿಕೆ ಎಲೆಕ್ಷನ್ : ರಾಜ್ಯ ಚುನಾವಣಾ ಆಯುಕ್ತರ ಮಹತ್ವದ ಹೇಳಿಕೆ!
ಶಿವಮೊಗ್ಗ (shivamogga), ಮೇ 23: ಶಿವಮೊಗ್ಗ ಮಹಾನಗರಪಾಲಿಕೆಗೆ ಚುನಾವಣೆ ನಡೆಸುವ ಸಂಬಂಧ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ, ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಈ ಕುರಿತು ಸರ್ಕಾರದಿಂದ ಪ್ರತಿಕ್ರಿಯೆ ಬಂದ ಕೂಡಲೇ ಚುನಾವಣೆಗೆ ದಿನಾಂಕ ನಿಗದಿಗೊಳಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತರಾದ ಜಿ.ಎಸ್.ಸಂಗ್ರೇಶಿ ತಿಳಿಸಿದರು.
ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಶುಕ್ರವಾರ ಮಹಾನಗರಪಾಲಿಕೆ ಚುನಾವಣೆ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿವಮೊಗ್ಗ ಪಾಲಿಕೆಯಲ್ಲಿ ನಿಕಾಯ (ಬಾಡಿ) ಇಲ್ಲದೇ ಒಂದೂವರೆ ವರ್ಷ ಆಗಿದೆ. ಚುನಾವಣೆ ನಡೆಸಲು ಮೀಸಲಾತಿ ಪಟ್ಟಿ ನೀಡುವಂತೆ ಸರ್ಕಾರಕ್ಕೆ ಹಲವಾರು ಬಾರಿ ಪತ್ರ ವ್ಯವಹಾರ ಮಾಡಲಾಗಿದೆ. ಸಂಬಂಧಿಸಿದ ಮಂತ್ರಿಗಳು, ಮುಖ್ಯಮಂತ್ರಿಗಳಿಗೆ ಸಹ ಕೋರಲಾಗಿದೆ. ಸರ್ಕಾರದಿಂದ ಈ ಕುರಿತು ಸ್ಪಂದನೆ ಬಾರದ ಕಾರಣ ಸುಪ್ರೀಂ ಕೋರ್ಟ್ ಆದೇಶದನ್ವಯ ಉಚ್ಛ ನ್ಯಾಯಾಲಯಕ್ಕೆ ರಿಟ್ ಸಲ್ಲಿಸಿ ಪಾಲಿಕೆ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಜೂನ್ ವೇಳೆಗೆ ಉಚ್ಛ ನ್ಯಾಯಾಲಯದಲ್ಲಿ ಈ ರಿಟ್‌ಗೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿದೆ. ಚುನಾವಣೆ ಕುರಿತು ಸರ್ಕಾರದಿಂದ ಸ್ಪಂದನೆ ಬಂದ ತಕ್ಷಣ ದಿನಾಂಕ ನಿಗದಿಗೊಳಿಸಲಾಗುವುದು. ಕಳೆದ ಆಗಸ್ಟ್ ಮಾಹೆಯಲ್ಲಿಯೇ ಚುನಾವಣೆಗೆ ಸಂಬಂಧಿಸಿದಂತೆ ಮತದಾತರರ ಪಟ್ಟಿ ತಯಾರಿಸುವ ವೇಳಾಪಟ್ಟಿ ಹೊರಡಿಸಲಾಗಿತ್ತು. ಕಾರಣಾಂತರದಿಂದ ಅದರ ಪ್ರಕಾರ ಅಂತಿಮ ಮತದಾರರ ಪಟ್ಟಿ ಸಿದ್ದವಾಗಿಲ್ಲ. ಕರಡು ಮತದಾರರ ಪಟ್ಟಿ ಮಾತ್ರ ಸಿದ್ದವಾಗಿದೆ.
ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ವಿಶೇಷವಾಗಿ ಮತದಾರರ ಪಟ್ಟಿಯನ್ನು ಸಮರ್ಪಕವಾಗಿ ಸಿದ್ದ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ ಅವರು ನ್ಯಾಯ ಮತ್ತು ಮುಕ್ತ ಚುನಾವಣೆ ನಡೆಸಲು ಎಲ್ಲ ಅಧಿಕಾರಿಗಳು ಸಹಕರಿಸಬೇಕೆಂದು ತಿಳಿಸಿದರು.
ಮಹಾನಗರಪಾಲಿಕೆ ಆಯುಕ್ತರಾದ ಡಾ.ಕವಿತಾ ಯೋಗಪ್ಪನವರ್ ಮಾತನಾಡಿ, ಆಗಸ್ಟ್ ಮಾಹೆಯಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದ ವೇಳಾಪಟ್ಟಿ ಹೊರಡಿಸಲಾಗಿದ್ದು, ದಿನಾಂಕ: 19-08-2024 ರಿಂದ 24-08-2024 ರವರೆಗೆ ವಾರ್ಡುಗಳ ವಿಂಗಡಣೆ ಅಧಿಸೂಚನೆಯಂತೆ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಮತದಾರರನ್ನು ಗುರುತಿಸುವಿಕೆ.
25-08-2024 ರಿಂದ 31-08-2024 ರವರಗೆ ಮತದಾರರ ಪಟ್ಟಿಯಲ್ಲಿ ಮತದಾರರನ್ನು ಗುರುತಿಸಿದ ನಂತರ ಫ್ರಂ ಟು ಮ್ಯಾಟ್ರಿಕ್ಸ್ ತಯಾರಿಸಿ ಮುದ್ರಕರಿಗೆ ನೀಡುವುದು. 01-09-2024 ರಿಂದ 04-9-2024 ರವರೆಗೆ ಫ್ರಂ ಟು ಮ್ಯಾಟ್ರಿಕ್ಸ್ ರಂತೆ ಪ್ರಥಮ ಚೆಕ್ ಲಿಸ್ಟ್ ಮುದ್ರಣ. 05-09-2024 ರಿಂದ 10-09-2024 ರವರೆಗೆ ಮುದ್ರಕರಿಂದ ಪ್ರಥಮ ಚೆಕ್‌ಲಿಸ್ಟ್ ಪಡೆದುಕೊಂಡು ವಾರ್ಡ್ ವಾರು ಮತ್ತೊಮ್ಮೆ ಪರಿಶೀಲಿಸಿ ಆಗಬೇಕಾಗಿರುವ ಬದಲಾವಣೆಗಳನ್ನು ಮತದಾರರ ಪಟ್ಟಿಯಲ್ಲಿ ಅಳವಡಿಸುವುದು.
17-09-2024 ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟಿಸುವುದು. 24-09-2024 ಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಲು ಕೊನೆಯ ದಿನ. 30-09-2024 ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲು ಕೊನೆಯ ದಿನ. 06-10-2024 ಕ್ಕೆ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿದ ನಂತರ ಮುದ್ರಕರಿಂದ ಅಗತ್ಯ ಬದಲಾವಣೆಗಳನ್ನು ಮಾಡಿಸಿ ಅಂತಿಮ ಚೆಕ್‌ಲಿಸ್ಟ್ ಪಡೆದುಕೊಂಡು ವಾರ್ಡುವ್ಯಾಪ್ತಿಯಲ್ಲಿ ಮತ್ತೊಮ್ಮೆ ಪರಿಶೀಲಿಸಲು ಅಂತಿಮ ದಿನಾಂಕ. ದಿ: 09-10-2024 ಅಂತಿಮ ಮತದಾರರ ಪಟ್ಟಿ ಪ್ರಕಟಣೆ.
ಮೇಲ್ಕಂಡ ವೇಳಾ ಪಟ್ಟಿಯಂತೆ ಅಂತಿಮ ಮತದಾರರ ಪಟ್ಟಿಯನ್ನು ಕಾರಣಾಂತರಗಳಿAದ ಪ್ರಕಟಿಸಲಾಗಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ 35 ವಾರ್ಡುಗಳಿದ್ದು 2011 ರ ಜನಗಣತಿ ಪ್ರಕಾರ 3.22 ಲಕ್ಷ ಜನಸಂಖ್ಯೆ ಇದೆ. ಒಟ್ಟು 288 ಮತಗಟ್ಟೆಗಳಿವೆ. 2024-2025 ರಂತೆ 133479 ಪುರುಷ, 141480 ಮಹಿಳೆ, 17 ಇತರೆ ಸೇರಿದಂತೆ 274976 ಮತದಾರರು ಇದ್ದಾರೆ. ಇದರಲ್ಲಿ 85 ವರ್ಷ ಮೀರಿದ 2583 ಹಾಗೂ ವಿಕಲಚೇತನ 1465 ಮತದಾರರು ಇದ್ದಾರೆ ಎಂದರು.
ಕರಡು ಮತದಾರರ ಪಟ್ಟಿ ಸಿದ್ದವಾಗಿದೆ. ಚುನಾವಣೆ ನಡೆಸಲು ಅಗತ್ಯವಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಸಭೆಯಲ್ಲಿ ಪಾಲಿಕೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
shivamogga, may 23: A writ petition has been filed in the High Court seeking directions to the government regarding the conduct of elections to the Shivamogga Municipal Corporation. The date for the elections will be fixed as soon as the government responds, said State Election Commission Commissioner G.S. Sangreshi.
He was speaking while presiding over a meeting organized with officials regarding the municipal election issues at the Municipal Corporation hall on Friday.