
shimoga rain | ಶಿವಮೊಗ್ಗ | ಮುಂಗಾರು ಆರಂಭಕ್ಕೂ ಮುನ್ನವೇ ಮಲೆನಾಡಲ್ಲಿ ಭರ್ಜರಿ ಮಳೆ!
ಶಿವಮೊಗ್ಗ (shivamogga), ಮೇ 24: ಮುಂಗಾರು ಮಳೆ ಪ್ರವೇಶಕ್ಕೂ ಮುನ್ನವೇ, ಮಲೆನಾಡು ಭಾಗದ ಹಲವೆಡೆ ಭರ್ಜರಿ ಮಳೆಯಾಗುತ್ತಿದೆ. ಇದರಿಂದ ತಾಪಮಾನದಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ. ತಣ್ಣನೆ ವಾತಾವರಣ ನೆಲೆಸುವಂತಾಗಿದೆ!
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಕಾರಣದಿಂದ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ. ಶನಿವಾರ ಕೂಡ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆಯಾಗುತ್ತಿದೆ.
ಮತ್ತೊಂದೆಡೆ, ಮುಂದಿನ ಒಂದು ವಾರ ಮಳೆ ಮುಂದುವರೆಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ನಡುವೆ ಮೇ 27 ರಿಂದಲೇ ಮುಂಗಾರು ಮಳೆ ಪ್ರವೇಶದ ಮುನ್ಸೂಚನೆಯನ್ನು ಕೂಡ ಹವಾಮಾನ ಇಲಾಖೆ ನೀಡಿದೆ.
ಜಲ ಸಂಗ್ರಹ : ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಮಳೆಯಿಂದ, ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹವಾಗಲಾರಂಭಿಸಿದೆ. ಜಿಲ್ಲೆಯ ಪ್ರಮುಖ ಜಲಾಶಯಗಳಿಗೆ ಒಳಹರಿವು ಕಂಡುಬರಲಾರಂಭಿಸಿದೆ.
ಕಡಿಮೆ ವ್ಯಾಪ್ತಿ – ವಿಸ್ತೀರ್ಣ ಹೊಂದಿರುವ ಶಿವಮೊಗ್ಗ ತಾಲೂಕಿನ ಗಾಜನೂರು ತುಂಗಾ ಜಲಾಶಯವು ಬೇಸಿಗೆ ಮಳೆಗೆ ಗರಿಷ್ಠ ಮಟ್ಟಕ್ಕೆ ಬರಲಾರಂಭಿಸಿದೆ. ಡ್ಯಾಂ ಭರ್ತಿಗೆ ಇನ್ನೂ ಕೇವಲ ಸುಮಾರು 1 ಅಡಿಯಷ್ಟು ನೀರು ಬರಬೇಕಾಗಿದೆ.
ಉಳಿದಂತೆ ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ ಒಳಹರಿವು ಶನಿವಾರ ಬೆಳಿಗ್ಗೆಯ ಮಾಹಿತಿಯಂತೆ, 7145 ಕ್ಯೂಸೆಕ್ ಗೆ ಏರಿಕೆಯಾಗಿದೆ. ಡ್ಯಾಂ ನೀರಿನ ಮಟ್ಟ 1763. 65 (ಗರಿಷ್ಠ ಮಟ್ಟ : 1819) ಅಡಿಯಿದೆ.
Shivamogga, May 24: Even before the onset of monsoon, heavy rains are being received in many parts of the Malnad region. This has led to a significant drop in temperature. The cold weather is settling in! Pre-monsoon rains have intensified due to a depression in the Arabian Sea. It is raining in many parts of the district, including Shivamogga city, on Saturday as well.