
rain alert | ಮುಂಗಾರು ಮಳೆಯ ದಿಢೀರ್ ಎಂಟ್ರಿ : ಶಿವಮೊಗ್ಗ ಜಿಲ್ಲೆಯಲ್ಲಿ ಬೇಸಿಗೆ ಭತ್ತಕ್ಕೆ ಸಂಕಷ್ಟ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಮೇ 25: ಪ್ರಸ್ತುತ ವರ್ಷ ಮುಂಗಾರು ಮಳೆ, ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಆಗಮನವಾಗಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಇದರಿಂದ ಬೇಸಿಗೆ ಹಂಗಾಮಿನಲ್ಲಿ ಬೆಳೆದ ಭತ್ತಕ್ಕೆ ಭಾರೀ ಸಂಚುಕಾರ ಬಂದೊದಗಿದೆ!
ಹೌದು. ಪ್ರಸ್ತುತ ಜಿಲ್ಲೆಯಾದ್ಯಂತ ಹಿಂಗಾರು ಹಂಗಾಮಿನಲ್ಲಿ ಬೆಳೆದಿದ್ದ ಭತ್ತದ ಬೆಳೆ, ಸದ್ಯ ಕಟಾವು ಹಂತಕ್ಕೆ ಬಂದಿದೆ. ಆದರೆ ಮೇ ಮಧ್ಯಂತರದ ನಂತರ ಬಿದ್ದ ಬೇಸಿಗೆ ಮಳೆ ಹಾಗೂ ಪ್ರಸ್ತುತ ಮುಂಗಾರು ಆಗಮನದಿಂದ, ಬೆಳೆ ನಾಶವಾಗುವ ಹಂತಕ್ಕೆ ತಲುಪಿದೆ.
ಹಲವೆಡೆ ಮಳೆಯಿಂದ ಭತ್ತ ಕಟಾವು ಮಾಡಲು ಸಾಧ್ಯವಾಗಿಲ್ಲ. ಇದೀಗ ಮಳೆಗೆ ನೆನೆದು ಭತ್ತದ ತೆನೆಗಳು ಬೆಳೆಯಲ್ಲಿಯೇ ಮೊಳಕೆ ಬರಲಾರಂಭಿಸಿವೆ. ಹಾಗೆಯೇ ಬೆಳೆಯು ನೆಲಕ್ಕೊರಗಲಾರಂಭಿಸಿದೆ. ಇದು ರೈತ ಸಮುದಾಯವನ್ನು ದಿಕ್ಕು ತೋಚದಂತೆ ಮಾಡಿದ್ದು, ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
‘ಕಳೆದ ವರ್ಷ ಉತ್ತಮ ಮುಂಗಾರು ಮಳೆಯಾಗಿದ್ದ ಕಾರಣದಿಂದ ಕೆರೆಕಟ್ಟೆಗಳು ಭರ್ತಿಯಾಗಿದ್ದವು. ಈ ಕಾರಣದಿಂದ ಈ ಬಾರಿ ಬೇಸಿಗೆಯಲ್ಲಿ ಭತ್ತ ಬೆಳೆಯಲಾಗಿತ್ತು. ಕಳೆದ ನಾಲ್ಕೈದು ತಿಂಗಳಿಂದ ಕಷ್ಟಪಟ್ಟು ಬೆಳೆ ಬೆಳೆಯಲಾಗಿತ್ತು. ಲಕ್ಷಾಂತರ ರೂ. ಖರ್ಚು ಮಾಡಲಾಗಿತ್ತು.
ನಿರೀಕ್ಷಿಸಿದಂತೆ ಈ ಬಾರಿ ಉತ್ತಮ ಫಸಲು ಬಂದಿತ್ತು. ಇನ್ನೇನೂ ಕಟಾವು ಮಾಡಬೇಕು ಎನ್ನುಷ್ಟರಲ್ಲಿ ಬೇಸಿಗೆ ಮಳೆಯಾಗಿತ್ತು. ಇದೀಗ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಬೀಳುತ್ತಿದೆ. ಇದರಿಂದ ಕಟಾವಿಗೆ ಬಂದಿದ್ದ ಭತ್ತ ಕಣ್ಣ ಮುಂದೆಯೇ ಹಾಳಾಗಲಾರಂಭಿಸಿದೆ. ಏನೂ ಮಾಡಬೇಕು ಎಂಬುವುದೇ ಗೊತ್ತಾಗುತ್ತಿಲ್ಲ’ ಎಂದು ಶಿವಮೊಗ್ಗದ ಹೊರವಲಯ ಸೋಮಿನಕೊಪ್ಪ ಗ್ರಾಮದ ಯುವ ರೈತ ಮುಸ್ಸೀ ಗೌಡ ಅವರು ಅಳಲು ತೋಡಿಕೊಳ್ಳುತ್ತಾರೆ.
‘ಸುಮಾರು ಐದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಹಾಳಾಗುತ್ತಿದೆ. ಲಕ್ಷಾಂತರ ರೂ. ನಷ್ಟವಾಗಿದೆ. ಬೆಳೆಯಿರಲಿ, ಜಾನುವಾರುಗಳಿಗೆ ಹುಲ್ಲು ಕೂಡ ಸಿಗದಂತಹ ದುಃಸ್ಥಿತಿಯಿದೆ. ಏನು ಮಾಡಬೇಕು ಎಂಬುವುದೇ ಗೊತ್ತಾಗುತ್ತಿಲ್ಲ. ಸರ್ಕಾರ ತಕ್ಷಣವೇ ಮಧ್ಯಪ್ರವೇಶ ಮಾಡಬೇಕು. ಬೆಳೆ ನಷ್ಟಕ್ಕೀಡಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಮುಸ್ಸೀ ಗೌಡ ಅವರು ಆಗ್ರಹಿಸುತ್ತಾರೆ.
ಸಂಕಷ್ಟ : ಶಿವಮೊಗ್ಗ ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಪ್ರಸ್ತುತ ಬೇಸಿಗೆ ವೇಳೆ ಭತ್ತ ಬೆಳೆಯಲಾಗಿತ್ತು. ಸದ್ಯ ಬೇಸಿಗೆ ಪೂರ್ಣಕ್ಕೂ ಮುನ್ನವೇ ಮುಂಗಾರು ಮಳೆ ಆಗಮನವಾಗಿರುವುದರಿಂದ ಬೆಳೆ ನಷ್ಟದ ಆತಂಕ ಎದುರಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ಒಟ್ಟಾರೆ ಮುಂಗಾರು ಮಳೆ ದಿಢೀರ್ ಪ್ರವೇಶದ ಪರಿಣಾಮವು, ಬೇಸಿಗೆ ಹಂಗಾಮಿನಲ್ಲಿ ಬೆಳೆ ಬೆಳೆದ ರೈತ ಸಮುದಾಯದ ಮೇಲೆ ನಾನಾ ಅಡ್ಡ ಪರಿಣಾಮ ಬೀರಲಾರಂಭಿಸಿದೆ.
Shivamogga, May 25: This year, the monsoon has arrived ahead of schedule. There is good rainfall across Shivamogga district. This has been a huge boon for the paddy grown in the summer season!
Yes. The rice crop that was grown in the rainy season across the district is now at the harvesting stage. However, due to the summer rains that fell after mid-May and the current arrival of the monsoon, the crop has reached the point of being destroyed.