
shimoga palike | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಜನಪ್ರತಿನಿಧಿಗಳ ನಿರ್ಲಕ್ಷ್ಯವೇಕೆ?!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಮೇ 30: ಬರೋಬ್ಬರಿ ಸರಿಸುಮಾರು 30 ವರ್ಷಗಳ ನಂತರ, ಶಿವಮೊಗ್ಗ ನಗರಾಡಳಿತ ವ್ಯಾಪ್ತಿ ಪರಿಷ್ಕರಿಸಲಾಗುತ್ತಿದೆ. ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬೇಕಾದ ಪ್ರದೇಶಗಳ ಪಟ್ಟಿ ಸಿದ್ದವಾಗಿದೆ. ನಾಗರೀಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಇತ್ತೀಚೆಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು, ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಲು ಸಿದ್ದಪಡಿಸಿರುವ ಪ್ರದೇಶಗಳ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಪಡೆದು, 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಆದರೆ ಈ ಬಗ್ಗೆ ನಾಗರೀಕರ ಅಹವಾಲು ಆಲಿಸಿ, ಅಧಿಕಾರಿಗಳಿಗೆ ಸಲಹೆ – ಸೂಚನೆ ನೀಡಬೇಕಾದ ಸರ್ವಪಕ್ಷಗಳ ಜನಪ್ರತಿನಿಧಿಗಳು ದಿವ್ಯ ಮೌನಕ್ಕೆ ಶರಣಾಗಿರುವುದು ಸಖೇದಾಶ್ಚರ್ಯಕ್ಕೆ ಕಾರಣವಾಗಿದೆ. ಶಿವಮೊಗ್ಗಕ್ಕೆ ಸಂಬಂಧಿಸಿದ ಪ್ರಮುಖ ಆಡಳಿತಾತ್ಮಕ ವಿಷಯದ ಬಗ್ಗೆ ನಿರ್ಲಕ್ಷ್ಯವಹಿಸುತ್ತಿರುವುದು ನಾಗರೀಕ ವಲಯದಲ್ಲಿ ನಾನಾ ರೀತಿಯ ಚರ್ಚೆಗೆಡೆ ಮಾಡಿಕೊಟ್ಟಿದೆ.
ಪ್ರಸ್ತುತ ನಗರದಂಚಿನಲ್ಲಿರುವ, ಪಾಲಿಕೆ ವ್ಯಾಪ್ತಿಯ ಪ್ರದೇಶಗಳಿಗೆ ಲಗತ್ತಾಗಿರುವ ಹಲವು ಜನವಸತಿ ಬಡಾವಣೆಗಳನ್ನು ನಾನಾ ಆಡಳಿತಾತ್ಮಕ ನೆಪವೊಡ್ಡಿ ಪಾಲಿಕೆ ವ್ಯಾಪ್ತಿ ಸೇರ್ಪಡೆ ಪಟ್ಟಿಯಿಂದ ಕೈಬಿಡಲಾಗಿದೆ. ಇದಕ್ಕೆ ಸದರಿ ಬಡಾವಣೆಗಳ ನಾಗರೀಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮ ಪಂಚಾಯ್ತಿ ಆಡಳಿತಗಳಿಂದ ಬಡಾವಣೆಗಳಿಗೆ ಸಮರ್ಪಕ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ವರ್ಷಗಳೇ ಉರುಳಿದರೂ ಚರಂಡಿ ಸ್ವಚ್ಛಗೊಳಿಸಲು ಸಾಧ್ಯವಾಗದಂತಹ ದುಃಸ್ಥಿತಿಯಿದೆ. ಇದರಿಂದ ಗ್ರಾಪಂ ಅಧೀನದ ಹಲವು ಬಡಾವಣೆಗಳ ನಿವಾಸಿಗಳು ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ. ಮತ್ತೊಂದೆಡೆ, ಯೋಜನಾಬದ್ಧ ನಗರದ ಬೆಳವಣಿಗೆಯ ಮೇಲೂ ಪರಿಣಾಮ ಬೀರುವಂತಾಗಿದೆ.
ಈ ಕಾರಣದಿಂದ ನಗರದಂಚಿನಲ್ಲಿರುವ ಜನವಸತಿ ಬಡಾವಣೆಗಳನ್ನು, ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬುವುದು ಸ್ಥಳೀಯ ನಿವಾಸಿಗಳ ಆಗ್ರಹವಾಗಿತ್ತು. ಆದರೆ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಬಸವನಗಂಗೂರು ಗ್ರಾಮ ವ್ಯಾಪ್ತಿಯ ಜನವಸತಿ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಂಡಿಲ್ಲ. ಆಡಳಿತದ ಈ ನಿರ್ಧಾರ ಅವೈಜ್ಞಾನಿಕವಾಗಿದೆ ಎಂದು ಕೆ ಹೆಚ್ ಬಿ ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಜನಪ್ರತಿನಿಧಿಗಳು ನಾಗರೀಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ, ಅಧಿಕಾರಗಳೊಂದಿಗೆ ಚರ್ಚಿಸಿ ಪರಿಹಾರ ಕಲ್ಪಿಸುವ ಕಾರ್ಯ ನಡೆಸಬೇಕಾಗಿತ್ತು. ಆದರೆ ಇವ್ಯಾವ ಕೆಲಸ ಕಾರ್ಯಗಳು ಆಗುತ್ತಿಲ್ಲ. ಪಾಲಿಕೆ ವ್ಯಾಪ್ತಿ ಪರಿಷ್ಕರಣೆಗೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂಬ ದೂರುಗಳು ನಾಗರೀಕ ವಲಯದಿಂದ ಕೇಳಿಬರುತ್ತಿವೆ.
ಎಚ್ಚೆತ್ತುಕೊಳ್ಳಲಿ : ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಕುರಿತಂತೆ ಸರ್ವಪಕ್ಷಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ವೈಜ್ಞಾನಿಕವಾಗಿ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಕುರಿತಂತೆ ಜಿಲ್ಲಾಡಳಿತದೊಂದಿಗೆ ಚರ್ಚಿಸಬೇಕಾಗಿದೆ. ಜನವಸತಿ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸಿ, ನಾಗರೀಕರಿಗೆ ಸಮರ್ಪಕ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಆದ್ಯ ಗಮನಹರಿಸಬೇಕಾಗಿದೆ ಎಂದು ಪ್ರಜ್ಞಾವಂತ ನಾಗರೀಕರು ಆಗ್ರಹಿಸುತ್ತಾರೆ.
ನಗರದಂಚಿನ ಜನವಸತಿ ಬಡಾವಣೆಗಳನ್ನು ಕೈಬಿಟ್ಟಿದ್ದೇಕೆ?
*** ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಂತಿರುವ ಬಸವನಗಂಗೂರು ಗ್ರಾಮ ವ್ಯಾಪ್ತಿಯಲ್ಲಿ, ಕಳೆದ ಒಂದೂವರೆ ದಶಕದ ಅವಧಿಯಲ್ಲಿ ಹಲವು ಜನವಸತಿ ಬಡಾವಣೆಗಳು ಅಭಿವೃದ್ದಿಯಾಗಿವೆ. ಕೆಲ ಬಡಾವಣೆಗಳು ಪಾಲಿಕೆ ಪ್ರದೇಶಗಳಿಗೆ ಹೊಂದಿಕೊಂಡಂತಿವೆ. ಆದರೆ ಪಾಲಿಕೆ ವ್ಯಾಪ್ತಿ ಸೇರ್ಪಡೆ ಅರ್ಹತೆ ಹೊಂದಿರುವ ಇಂತಹ ಪ್ರದೇಶಗಳನ್ನು ಕೂಡ, ಪ್ರಸ್ತುತ ಸಿದ್ದಪಡಿಸಿರುವ ವರದಿಯಲ್ಲಿ ಕೈಬಿಡಲಾಗಿದೆ. ಇದು ಸ್ಥಳೀಯ ನಾಗರೀಕರ ಹಿತಾಸಕ್ತಿಗೆ ಮಾರಕವಾಗಿದೆ. ಇದನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಬೇಕಾಗಿದೆ. ನಗದಂಚಿನಲ್ಲಿರುವ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ಖುದ್ದು ಸ್ಥಳ ಪರಿಶೀಲನೆ ನಡೆಸಿ, ನಿರ್ಧಾರ ಕೈಗೊಳ್ಳಬೇಕಾಗಿದೆ ಎಂಬುವುದು ನಾಗರೀಕರ ಆಗ್ರಹವಾಗಿದೆ.
Shivamogga, May 30: After almost 30 years, the Shivamogga municipal jurisdiction is being revised. The list of areas to be included in the corporation’s jurisdiction is ready. Discussions are underway in the civic sector. But it is surprising that representatives of all parties, who should have listened to the citizens’ concerns and advised the authorities, have surrendered to divine silence.