
bengaluru | ಬೆಂಗಳೂರು | ಡಿಸಿ – ಸಿಇಓ – ಎಸ್ಪಿಗಳಿಗೆ ಸಿಎಂ ಖಡಕ್ ವಾರ್ನಿಂಗ್..!
ಬೆಂಗಳೂರು (bangalore), ಮೇ 30: ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮೇ 30 ರಂದು ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಿದರು.
ಸಿಎಂ ಹೇಳಿದ್ದೇನು? : ಸಂವಿಧಾನದ ಆಶಯ ಮತ್ತು ಧ್ಯೇಯೋದ್ದೇಶಗಳಿಗೆ ಯಾರೂ ವಿರುದ್ಧವಾಗಿ ಕಾರ್ಯನಿರ್ವಹಿಸಬಾರದು. ಅಂತಹ ಶಕ್ತಿಗಳು ಬೆಳೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಇತ್ತೀಚಿನ ದಿನಗಳಲ್ಲಿ ಇಂತಹ ಶಕ್ತಿಗಳು ತಲೆಎತ್ತುತ್ತಿದ್ದು, ಅಂತಹ ಶಕ್ತಿಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು. ಅಂತಹ ವ್ಯಕ್ತಿಗಳೂ ಯಾರೇ ಆಗಿದ್ದರೂ, ಅವರನ್ನು ಮಟ್ಟ ಹಾಕುವುದು ಅಂತಹ ಶಕ್ತಿಗಳು ಬೆಳೆಯದಂತೆ ನೋಡಿಕೊಳ್ಳಬೇಕಾದುದು ಡಿಸಿ, ಸಿಇಒ, ಎಸ್ಪಿಗಳ ಜವಾಬ್ದಾರಿ ತಾನೇ ಎಂದು ಸಿಎಂ ಖಾರವಾಗಿ ಪ್ರಶ್ನಿಸಿದರು.
ಹಿಂದಿನ ಸಭೆಯಲ್ಲಿ ನೀಡಿದ ಸೂಚನೆಗಳು, ತೆಗೆದುಕೊಂಡ ನಿರ್ಣಯಗಳಲ್ಲಿ ಕೆಲವು ಇಲಾಖೆಗಳು ಶೇ. 100 ರಷ್ಟು ಪ್ರಗತಿ ತೋರಿಸಿಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ರಾಜಿ ಇಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ಮೇಲೆ ನಿಷ್ಠುರವಾಗಿ ಕ್ರಮ ಕೈಗೊಳ್ಳುವುದು ನಮಗೆ ಅನಿವಾರ್ಯ ಆಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳು ಮತ್ತು ಸಿಇಒ ಗಳು ತಮ್ಮ ಅಹಂ ಬದಿಗೊಟ್ಟಿ ಸಮನ್ವಯದಿಂದ ಕೆಲಸ ಮಾಡಿದರೆ ಮಾತ್ರ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯ. ಈ ಉದ್ದೇಶಕ್ಕೇ ನೀವುಗಳು ಐಎಎಸ್ ಮಾಡಿರುವುದು. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
10-10-1949 ರಂದು ಸಂವಿಧಾನ ಜಾರಿ ಸಭೆಯಲ್ಲಿ ಇಂಡಿಯನ್ ಸಿವಿಲ್ ಸರ್ವೀಸ್ ಬೇಕಾ ಎಂದು ಚರ್ಚೆ ಆಗಿ ಐಎಎಸ್ ಬೇಕು ಎನ್ನುವ ನಿರ್ಧಾರಕ್ಕೆ ಬರಲಾಗಿದೆ. ಆ ಸಭೆಯಲ್ಲಿ ವಲ್ಲಭಾಬಾಯಿ ಪಟೇಲರು “ದೇಶವನ್ನು ನೈಜ ಸ್ವಾತಂತ್ರ್ಯ ಹೋರಾಟಗಳ ಆಶಯದಲ್ಲಿ ಮುನ್ನಡೆಸಲು ಐಎಎಸ್ ಸೇವೆ ಇರಬೇಕು, ಇದರ ನೈಜ ಕಾಳಜಿಯನ್ನು ನೀವು ಅರ್ಥ ಮಾಡಿಕೊಳ್ಳಬೇಕು.
ವಲ್ಲಭಬಾಯಿ ಅವರ ಮಾತನ್ನು ನಾವು ಅರ್ಥಮಾಡಿಕೊಳ್ಳಬೇಕು. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡುವವರ ವಿರುದ್ಧ ಮತ್ತು ಜನಪರ ಆಶಯಗಳಿಗೆ ಸ್ಪಂದಿಸದಿದ್ದರೆ ಅವರ ವಿರುದ್ಧ ನಾವು ಕ್ರಮ ಕೈಗೊಳ್ಳಬೇಕಾಗುತ್ತದೆ. ನೀವೆಲ್ಲಾ ಸಂವಿಧಾನ ಓದಿದ್ದೀರಿ, ಅದರ ಆಶಯಗಳಿಗೆ, ಧ್ಯೇಯೋದ್ದೇಶಗಳಿಗೆ ಬದ್ದರಾಗಿದ್ದೀರಿ ಎಂದು ನಂಬಿದ್ದೇನೆ. ಇದನ್ನು ಕಾರ್ಯ ರೂಪಕ್ಕೆ ತರುವುದರಲ್ಲಿ ವಿಫಲರಾದವರ ವಿರುದ್ಧ ನಾನು ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲು ನಿರ್ಧಿರಿಸಿದ್ದೇನೆ ಎಂದು ಎಚ್ಚರಿಸಿದರು.
ಸಂವಿಧಾನ ವಿರೋಧಿ, ಜನ ವಿರೋಧಿ ದುಷ್ಟ ಶಕ್ತಿಗಳು ಕೆಲವು ಕಡೆ ಬಾಲ ಬಿಚ್ಚುತ್ತಿವೆ. ಅವರು ಎಷ್ಟೇ ಪ್ರಭಾವಿ ಆಗಿರಲಿ, ಕಾನೂನು ಹಾಳು ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ನಿಮ್ಮ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿಮತ್ತು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಾವು ಜನರ ತೆರಿಗೆ ದುಡ್ಡಿನಲ್ಲಿ ಆಡಳಿತ ನಡೆಸುತ್ತಿದ್ದೇವೆ. ನಾವು ಮತ್ತು ನೀವು ಎಲ್ಲಾ ಸವಲತ್ತುಗಳನ್ನು ಅನುಭವಿಸುತ್ತಿರುವುದು ಜನರ ತೆರಿಗೆ ಹಣದಿಂದ ಎನ್ನುವುದನ್ನು ಮರೆಯಬಾರದು. ಕಾರು, ಮನೆ ಸೇರಿ ಎಲ್ಲಾ ಸವಲತ್ತುಗಳನ್ನು ನಾವು ಕೊಟ್ಟಿರುವುದು ತೆರಿಗೆ ಹಣದಲ್ಲಿ. ಆದ್ದರಿಂದ ಜನಪರ ಧೋರಣೆಯಲ್ಲಿ ಕೆಲಸ ಮಾಡಬೇಕು. ಇದೇ ಪ್ರಜಾಪ್ರಭುತ್ವದ ಮೂಲ ಆಶಯ. ಜಿಲ್ಲಾ ಮಟ್ಟದ ಶಾಂತಿ ಸಮಿತಿ ಅಧ್ಯಕ್ಷರು ಜಿಲ್ಲಾಧಿಕಾರಿಗಳೇ ಆಗಿರ್ತಾರೆ. ಶಾಂತಿ ಕಾಪಾಡಲು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಶಾಂತಿಭಂಗ ಆದ ಮೇಲೆ ಪೋಸ್ಟ್ ಮಾರ್ಟಂ ಮಾಡುತ್ತಾ ಕೂರಬಾರದು. ಮೊದಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಏನು ಸಮಸ್ಯೆ ನಿಮಗೆ ಎಂದು ಪ್ರಶ್ನಿಸಿದರು.
ಮೊದಲೇ ತಿಳಿಸಿ : ಜಿಲ್ಲಾಧಿಕಾರಿಗಳು, ಸಿಇಒಗಳು ತಮ್ಮ ಪ್ರವಾಸ ಕಾರ್ಯಕ್ರಮ ಮೊದಲೇ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು. ತಪಾಸಣಾ ವರದಿಗಳನ್ನು ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಜಿಲ್ಲೆಯಲ್ಲಿ ಶಾಲೆಗಳು, ಹಾಸ್ಟೆಲ್ ಗಳು, ವಸತಿ ಶಾಲೆಗಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸಲು ನಿರಂತರವಾಗಿ ಭೇಟಿ ನೀಡಬೇಕು. ಮುನ್ಸೂಚನೆ ಇಲ್ಲದೇ ಇಂತಹ ಭೇಟಿಯನ್ನು ಪ್ರತಿ ತಿಂಗಳು ಕಡ್ಡಾಯವಾಗಿ ನಡೆಸಬೇಕು ಎಂದು ಪದೇ ಪದೇ ಸೂಚನೆ ನೀಡಿದ್ದೇನೆ. ಆದರೂ ಕೆಲವರು ಇದನ್ನು ಪಾಲಿಸಿಲ್ಲ ಎನ್ನುವ ವರದಿ ನನಗೆ ಬಂದಿದೆ.
ನಿಮ್ಮ ಅಧೀನದಲ್ಲಿರುವ ಇಲಾಖೆಗಳು, ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸುವುದು ನಿಮ್ಮ ಜವಾಬ್ದಾರಿ. ನೀವು ದಕ್ಷತೆಯಿಂದ ಕಾರ್ಯನಿರ್ವಹಿಸದಿದ್ದರೆ ಅಧೀನ ಅಧಿಕಾರಿಗಳು ಕಾರ್ಯನಿರ್ವಹಿಸುವುದನ್ನು ಹೇಗೆ ನಿರೀಕ್ಷಿಸಬಹುದು? ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ಆರೋಗ್ಯ, ಸಾರಿಗೆ ಸಂಚಾರದಂತಹ ಮೂಲಭೂತ ಸೌಕರ್ಯಗಳು ಲಭಿಸದಿದ್ದರೆ ಅದನ್ನು ಆಡಳಿತದ ವೈಫಲ್ಯವೆಂದೇ ಪರಿಗಣಿಸಬೇಕಾಗಿದೆ.
ಹಾಡಿಗಳಲ್ಲಿ ಶಾಲೆ, ರಸ್ತೆ, ಆಸ್ಪತ್ರೆಯಂತಹ ಮೂಲಸೌಲಭ್ಯ ಒದಗಿಸಲು ಇಂದಿಗೂ ಸರಿಯಾಗಿ ಯಾಕೆ ಸಾಧ್ಯವಾಗಿಲ್ಲ. ಅವರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಸರಿಯಾಗಿ ಹಕ್ಕು ಒದಗಿಸಲು ಯಾಕೆ ಸಾಧ್ಯವಾಗಿಲ್ಲ. ಜಿಲ್ಲಾಧಿಕಾರಿಗಳು, ಸಿಇಒಗಳು ಇಂತಹ ಹಾಡಿಗಳಿಗೆ ನಿರಂತರ ಭೇಟಿ ನೀಡಬೇಕು ಎಂದರು.
ಕೆಲವು ಜಿಲ್ಲಾಧಿಕಾರಿಗಳು, ಸಿಇಒಗಳು ಸರಿಯಾಗಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗದಿರುವ ಬಗ್ಗೆ ದೂರುಗಳು ಬಂದಿವೆ. ಸಾರ್ವಜನಿಕ ಭೇಟಿಯ ಅವಧಿಯನ್ನು ಮೊದಲೇ ಪ್ರಕಟಿಸಬೇಕು. ಶೋಷಿತರು, ಬಡವರು, ಜನಸಾಮಾನ್ಯರು ಸಾಮಾನ್ಯವಾಗಿ ಜಿಲ್ಲಾಧಿಕಾರಿ ಅವರ ಕಚೇರಿಗೆ ಬರುತ್ತಾರ. ಅಂತವರ ಸಂಕಷ್ಟಗಳನ್ನು ನೀವೇ ಆಲಿಸದಿದ್ದರೆ ಅದನ್ನು ಬಗೆಹರಿಸುವವರು ಯಾರು? ಯಾರ ಬಳಿ ಅವರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಬೇಕು?
ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ವಾಸವಿರಬೇಕು. ಎಲ್ಲಾ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಲಭ್ಯವಿದ್ದು, ಜನರಿಗೆ ಲಭ್ಯವಿರಬೇಕು. ಇದನ್ನು ಜಿಲ್ಲಾಧಿಕಾರಿಗಳು ಖಾತ್ರಿಪಡಿಸಬೇಕು. ಕೇಂದ್ರ ಸ್ಥಾನದಲ್ಲಿರದ ಅಧಿಕಾರಿಗಳ ವಿರುದ್ಧ ಕೈಗೊಂಡಿರುವ ಕ್ರಮದ ಬಗ್ಗೆ ನನಗೆ ವರದಿ ನೀಡಬೇಕು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಂಗಳಲ್ಲಿ ಕನಿಷ್ಟ ಎರಡು ಬಾರಿ ಆಯಾ ಜಿಲ್ಲೆಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಬೇಕು. ಅದರೊಂದಿಗೆ ಶಾಲೆ, ಹಾಸ್ಟೆಲ್, ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ವರದಿಯನ್ನು ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಬೇಕು ಎಂದು ಸಿಎಂ ತಾಕೀತು ಮಾಡಿದ್ದಾರೆ.
Bengaluru, May 30: CM Siddaramaiah held a meeting of the District Collectors and Zilla Panchayat Chief Executive Officers at the Banquet Hall of Vidhana Soudha in Bengaluru on May 30. The details given by the CM in the meeting are as follows.