
shimoga | ಶಿವಮೊಗ್ಗ : ಆರ್’ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ ವೇಳೆ ಲಘು ಲಾಠಿ ಪ್ರಹಾರ – ಅಪಘಾತದಲ್ಲಿ ಯುವಕ ಸಾವು!
ಶಿವಮೊಗ್ಗ (shivamogga), ಜೂ. 3: ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆರ್’ಸಿಬಿ ತಂಡ ಜಯ ಸಾಧಿಸಿದ ಹಿನ್ನೆಲೆಯಲ್ಲಿ, ಮಂಗಳವಾರ ರಾತ್ರಿ ಶಿವಮೊಗ್ಗ ನಗರದಲ್ಲಿ ಆರ್’ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲುಮುಟ್ಟಿತ್ತು. ಈ ವೇಳೆ ಕೆಲ ಅಹಿತಕರ ಘಟನೆಗಳು ಕೂಡ ವರದಿಯಾಗಿವೆ.
ಗೋಪಿ ವೃತ್ತದಲ್ಲಿ ನೂರಾರು ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು. ಪಟಾಕಿ ಸಿಡಿಸಿ, ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ನೂಕುನುಗ್ಗಲು ಹೆಚ್ಚಾದ ಕಾರಣದಿಂದ ಹಾಗೂ ಜನಜಂಗುಳಿ ನಿಯಂತ್ರಣಕ್ಕಾಗಿ ಪೊಲೀಸರು ಲಘು ಲಾಠಿ ಪ್ರಹಾರ ಕೂಡ ನಡೆಸಿದ್ದಾರೆ.
ಪೊಲೀಸರು ಲಾಠಿ ಬೀಸುತ್ತಿದ್ದಂತೆ ಸ್ಥಳದಲ್ಲಿದ್ದ ನೂರಾರು ಜನರು ಚದುರಿದ್ದಾರೆ. ಲಾಠಿ ಪ್ರಹಾರದಿಂದ ಕೆಲ ಯುವಕರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಪಘಾತ : ಬೈಕ್ ರ್ಯಾಲಿ ಮೂಲಕ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದ ಯುವಕನೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಉಷಾ ನರ್ಸಿಂಗ್ ಹೋಂ ಸರ್ಕಲ್ ಸಮೀಪ ನಿನ್ನೆ ರಾತ್ರಿ ನಡೆದಿದೆ.
ವೆಂಕಟೇಶ ನಗರದ ನಿವಾಸಿ ಅಭಿಷೇಕ್ (21) ಮೃತಪಟ್ಟ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಮತ್ತೊಂದು ಬೈಕ್ ನಲ್ಲಿದ್ದ ಇಬ್ಬರು ಯುವಕರು ಗಾಯಗೊಂಡಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Shivamogga, June 3: RCB fans were in full swing in Shivamogga city on Tuesday night after the team won the IPL cricket tournament. Some unpleasant incidents were also reported during this time.
Accident: A young man who was participating in a bike rally celebration died in a road accident near Usha Nursing Home Circle last night. A case has been registered at the Eastern Traffic Police Station in this regard.