
public problem | ವಿಭಾಗ ಪತ್ರ ಗೊಂದಲದಿಂದ ಕೌಟಂಬಿಕ ಕಲಹ : ಗಮನಿಸುವರೆ ಸಿಎಂ ಸಿದ್ದರಾಮಯ್ಯ, ಸಚಿವ ಕೃಷ್ಣ ಭೈರೇಗೌಡ?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜೂ. 5: ಪ್ರಿತ್ರಾರ್ಜಿತ ಸ್ಥಿರಾಸ್ತಿಯನ್ನು ಕುಟುಂಬ ಸದಸ್ಯರು ಹಂಚಿಕೆ ಮಾಡಿಕೊಳ್ಳುವ ‘ವಿಭಾಗ ಪತ್ರ’ ವ್ಯವಸ್ಥೆಯು, ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸದ್ಯ ಗೊಂದಲದ ಗೂಡಾಗಿ ಪರಿಣಮಿಸಿದೆ. ಇದರಿಂದ ಆಸ್ತಿ ಹಂಚಿಕೊಳ್ಳಲು ಸಾಧ್ಯವಾಗದೆ, ಕೌಟಂಬಿಕ ವಿರಸ – ಕಲಹಗಳು ಹೆಚ್ಚಾಗಲಾರಂಭಿಸಿದೆ..!
ಹೌದು. ನಾನಾ ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದ, ಸರಿಸುಮಾರು ಕಳೆದೊಂದು ವರ್ಷದಿಂದ ಕುಟುಂಬ ಸದಸ್ಯರು, ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನಿಯಮಾನುಸಾರ ಪಿತ್ರಾರ್ಜಿತ ಆಸ್ತಿ ಹಂಚಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಇದರಿಂದ ಕುಟುಂಬ ಸದಸ್ಯರು ಪಿತ್ರಾರ್ಜಿತ ಆಸ್ತಿ ಹಂಚಿಕೆ ಮಾಡಿಕೊಳ್ಳಲು ಸಾಧ್ಯವಾಗದೆ, ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇದರಿಂದ ಕೆಲವೆಡೆ ಕುಟುಂಬ ಸದಸ್ಯರಲ್ಲಿ ವೈಮನಸ್ಸು, ಭಿನ್ನಾಭಿಪ್ರಾಯಗಳು ತಲೆದೋರುವಂತೆ ಮಾಡಿದೆ. ಜೊತೆಗೆ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ.
ಸಮಸ್ಯೆಯೇನು? : ವಿಭಾಗ ಪತ್ರ ಮಾಡಿಕೊಳ್ಳುವ ಸಂದರ್ಭದಲ್ಲಿ, ಪಿತ್ರಾರ್ಜಿತ ಸ್ಥಿರಾಸ್ತಿಯನ್ನು ಕುಟುಂಬ ಸದಸ್ಯರು ಯಾರಿಗೆ ಎಷ್ಟು ಎಂಬುವುದನ್ನು ನಿರ್ಧರಿಸಿಕೊಂಡು ಸಬ್ ರಿಜಸ್ಟ್ರಾರ್ ಕಚೇರಿಯಲ್ಲಿ ನಿಯಮಾನುಸಾರ ನೊಂದಣಿ ಮಾಡಿಸಿಕೊಳ್ಳುತ್ತಿದ್ದರು. ತದನಂತರ ಸ್ಥಳಿಯಾಡಳಿತಗಳಲ್ಲಿ ಖಾತೆ ಮಾಡಿಕೊಳ್ಳುತ್ತಿದ್ದರು.
ಕಂದಾಯ ಇಲಾಖೆಗೆ ಸಂಬಂಧಿಸಿದ ಕಾವೇರಿ, ಭೂಮಿ ತಂತ್ರಾಂಶ (ಸಾಫ್ಟ್’ವೇರ್) ದ ಜೊತೆಗೆ ಕಳೆದ ವರ್ಷ ಇ – ಆಸ್ತಿ ತಂತ್ರಾಂಶ ಇಂಟಿಗ್ರೇಡ್ ಮಾಡಲಾಗಿತ್ತು. ತದನಂತರ ವಿಭಾಗ ಪತ್ರ ವ್ಯವಸ್ಥೆಯಲ್ಲಿ ಗೊಂದಲ ಉಂಟಾಗಿದೆ.
ಹಾಲಿ ವಿಭಾಗ ಪತ್ರ ವ್ಯವಸ್ಥೆಯಲ್ಲಿ, ಕುಟುಂಬದ ಕೇವಲ ಓರ್ವ ಸದಸ್ಯರಿಗೆ ಮಾತ್ರ ಇಡೀ ಪಿತ್ರಾರ್ಜಿತ ಆಸ್ತಿಯನ್ನು ನೊಂದಣಿ ಮಾಡಬಹುದಾಗಿದೆ! ಉಳಿದ ಸದಸ್ಯರಿಗೆ ಆಸ್ತಿ ಹಂಚಿಕೆ ಮಾಡಲು ಸಾಧ್ಯವಾಗದಂತಾಗಿದೆ!!
ಈ ಗೊಂದಲದ ಕಾರಣದಿಂದ ಕುಟುಂಬ ಸದಸ್ಯರು ವಿಭಾಗ ಪತ್ರ ಮಾಡಿಸಿಕೊಳ್ಳಲು ಸಾಧ್ಯವಾಗದೆ ಪರದಾಡುವಂತಾಗಿದೆ. ಸಮರ್ಪಕ ಮಾಹಿತಿಯಿಲ್ಲದೆ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಇದು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿಯೂ ಗೊಂದಲಕ್ಕೆ ಕಾರಣವಾಗಿದೆ. ಕೆಲ ಕುಟುಂಬ ಸದಸ್ಯರು ಅಧಿಕಾರಿಗಳ ಜೊತೆ ವಾಗ್ವಾದ ನಡೆಸುತ್ತಿರುವುದು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿದೆ.
ಗಮನಿಸಲಿ : ಸದರಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಬೆಂಗಳೂರಿನ ಮುದ್ರಾಂಕ – ನೊಂದಣಿ, ಪೌರಾಡಳಿತ, ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯವಹಿಸಿದ್ದಾರೆ. ಇದರಿಂದ ನಾಗರೀಕರು ತೊಂದರೆಗೆ ಸಿಲುಕುವಂತಾಗಿದೆ ಎಂಬ ಆರೋಪಗಳು ನಾಗರೀಕ ವಲಯದಿಂದ ಕೇಳಿಬರುತ್ತಿದೆ.
ಈ ಕುರಿತಂತೆ ಸಿಎಂ ಸಿದ್ದರಾಮಯ್ಯ ಹಾಗೂ ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ ಅವರು ಆದ್ಯ ಗಮನ ಹರಿಸಬೇಕು. ಸಮಸ್ಯೆ ಪರಿಹಾರಕ್ಕೆ ಕಾಲಮಿತಿಯೊಳಗೆ ಕ್ರಮಕೈಗೊಳ್ಳಬೇಕು ಎಂದು ಪ್ರಜ್ಞಾವಂತ ನಾಗರೀಕರು ಆಗ್ರಹಿಸುತ್ತಾರೆ.
Shivamogga, June 5: The ‘vibhāga patra’ system, through which family members divide inherited immovable property, has become a source of confusion in sub-registrar offices. Due to this, it is not possible to divide the property and family disputes and conflicts have started increasing..!
Due to technical and administrative reasons, for about the past year, family members have been unable to distribute ancestral property as per the rules at the Sub-Registrar’s offices. CM Siddaramaiah and Revenue Minister Krishna Bhairegowda should pay priority attention to this matter. Conscious citizens demand that action be taken within the time limit to resolve the problem.