
shimoga | ಶಿವಮೊಗ್ಗ ಜಿಲ್ಲೆಯಲ್ಲಿ ‘ರೌಡಿ ಶೀಟರ್’ ಪಟ್ಟಿಯಿಂದ ಮುಕ್ತಗೊಂಡ 353 ಜನರು!
ಶಿವಮೊಗ್ಗ (shivamogga), ಜೂ. 12: ಕಳೆದ 10 ವರ್ಷಗಳಿಂದ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದೆ, ಉತ್ತಮ ಜೀವನ ರೂಪಿಸಿಕೊಂಡ ಶಿವಮೊಗ್ಗ ಜಿಲ್ಲೆಯ 353 ಜನರನ್ನು ಜಿಲ್ಲಾ ಪೊಲೀಸ್ ಇಲಾಖೆ ‘ರೌಡಿ ಶೀಟರ್’ ಪಟ್ಟಿಯಿಂದ ಮುಕ್ತಗೊಳಿಸಿದೆ!
‘ಉತ್ತಮ ಗುಣ – ನಡತೆ ಹೊಂದಿದವರು, ಮೃತಪಟ್ಟವರು, ವಯಸ್ಸಿನ ಆಧಾರದ ಮೇಲೆ 353 ಜನರ ವಿರುದ್ದ ಪೊಲೀಸ್ ಠಾಣೆಗಳಲ್ಲಿ ತೆರೆಯಲಾಗಿದ್ದ ರೌಡಿ ಶೀಟರ್ ಪಟ್ಟಿಯಿಂದ ಮುಕ್ತಗೊಳಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ಇಲಾಖೆ ಜೂ. 12 ರಂದು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಶಿವಮೊಗ್ಗ ಎ ಉಪ ವಿಭಾಗ – 17, ಶಿವಮೊಗ್ಗ ಬಿ ಉಪ ವಿಭಾಗ – 60, ಭದ್ರಾವತಿ ಉಪ ವಿಭಾಗ – 72, ಸಾಗರ ಉಪ ವಿಭಾಗ – 55, ಶಿಕಾರಿಪುರ ಉಪ ವಿಭಾಗ – 124 ಹಾಗೂ ತೀರ್ಥಹಳ್ಳಿ ಉಪ ವಿಭಾಗ – 25 ಜನರನ್ನು ರೌಡಿ ಶೀಟರ್ ಪಟ್ಟಿಯಿಂದ ತಾತ್ಕಾಲಿಕವಾಗಿ ಮುಕ್ತಾಯ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
ಈ ಸಂಬಂಧ ಗುರುವಾರ ಮಧ್ಯಾಹ್ನ ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ, ರೌಡಿ ಪಟ್ಟಿಯಿಂದ ಮುಕ್ತಗೊಂಡವರ ಸಭೆ ನಡೆಸಲಾಯಿತು. ಎಸ್ಪಿ ಜಿ ಕೆ ಮಿಥುನ್ ಕುಮಾರ್ ಅವರು ಸಭೆಯಲ್ಲಿ ಮಾತನಾಡಿದರು.
‘ಯಾವುದೋ ಕೆಟ್ಟ ಸಂದರ್ಭದ ಕಾರಣದಿಂದ ಈ ಹಿಂದೆ ರೌಡಿ ಹಾಳೆಯನ್ನು ತೆರೆದಿದ್ದು, ಆದರೆ ಇತ್ತೀಚಿನ ದಿನಗಳಲ್ಲಿ ನಿಮ್ಮ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗದೇ ಇರುವುದರಿಂದ ಹಾಗೂ ಸಮಾಜದಲ್ಲಿ ನಿಮ್ಮ ಉತ್ತಮ ನಡತೆ ಗಮನದಲ್ಲಿಟ್ಟುಕೊಂಡು ಕೆಲ ಮಾನದಂಡಗಳ ಆಧಾರದಲ್ಲಿ ರೌಡಿ ಹಾಳೆಗಳನ್ನು ತಾತ್ಕಾಲಿಕವಾಗಿ ಮುಕ್ತಾಯ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
ಸಮಾಜದಲ್ಲಿ ಎಲ್ಲ ನಾಗರೀಕರ ರೀತಿ ನೀವು ಸಹಾ ಉತ್ತಮ ಜೀವನ ನಡೆಸಲು ಇದೊಂದು ಸದಾವಕಾಶವಾಗಿರುತ್ತದೆ. ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ. ಪೊಲೀಸ್ ಇಲಾಖೆಯು ಸೂಕ್ಷ್ಮವಾಗಿ ನಿಮ್ಮ ಚಲನವಲನದ ಮೇಲೆ ನಿಗಾ ಇರಿಸುತ್ತದೆ. ನೀವು ಯಾವುದೇ ಸಣ್ಣ ಪುಟ್ಟ ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಬಂದರೆ, ತಾತ್ಕಾಲಿಕವಾಗಿ ಮುಕ್ತಾಯ ಮಾಡಲಾದ ರೌಡಿ ಹಾಳೆಯನ್ನು ಪುನಃ ತೆರೆಯಲಾಗುತ್ತದೆ ಹಾಗೂ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಿಮ್ಮ ಕುಟುಂಬ, ಸಮಾಜ ಹಾಗೂ ಪೊಲೀಸ್ ಇಲಾಖೆಯೊಂದಿಗೆ ನಿಷ್ಠೆಯಿಂದಿರಿ. ಜೀವನೋಪಾಯಕ್ಕಾಗಿ ನಿರ್ವಹಿಸುವ ಕರ್ತವ್ಯಗಳನ್ನು ಶಿಸ್ತಿನಿಂದ ಮಾಡಿ. ಸಮಾಜದಲ್ಲಿ ಒಬ್ಬ ಉತ್ತಮ ನಾಗರೀಕನಾಗಿ ರೂಪುಗೊಳ್ಳಿ. ಸಮಾಜದಲ್ಲಿ ಒಳ್ಳೆಯ ಸ್ಥಾನ ಮಾನ ಗಳಿಸಲು ನಿಮಗೆ ಸದಾವಕಾಶ ಸಿಕ್ಕಿದ್ದು, ಇದರ ಉಪಯೋಗ ಪಡೆಯಿರಿ ಎಂದು ಕಿವಿಮಾತು ಹೇಳಿದ್ದಾರೆ.
ಪ್ರಸ್ತುತ ತಾತ್ಕಾಲಿಕವಾಗಿ ಮುಕ್ತಾಯ ಮಾಡಲಾದ ರೌಡಿ ಪಟ್ಟಿ ಮತ್ತೆ ತೆರೆಯುವ ಸಂದರ್ಭ ಬಂದರೇ, ಜೀವನ ಪರ್ಯಂತ ನಿಮ್ಮ ವಿರುದ್ಧ ತೆರೆಯಲಾದ ರೌಡಿ ಹಾಳೆಯು ಪ್ರಚಲಿತದಲ್ಲಿರುತ್ತದೆ. ನೀವು ಪೊಲೀಸ್ ಇಲಾಖೆಯ ನೇರ ಕಣ್ಗಾವಲಿನಲ್ಲಿರುತ್ತಿರಿ. ಕಾನೂನು ರೀತ್ಯಾ ಕ್ರಮ ಎದುರಿಸಬೇಕಾಗುತ್ತದೆ.
ಎಲ್ಲರು ಸನ್ನಡತೆಯಿಂದ ಜೀವನ ನಡೆಸಿ, ನಿಮ್ಮ ಸುತ್ತ ಮುತ್ತಲು ನಡೆಯುವ ಯಾವುದೇ ಘಟನೆಗಳ ಬಗ್ಗೆ ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿಗಳಾದ ಅನಿಲ್ ಕುಮಾರ್ ಭೂಮರಡ್ಡಿ, ಕಾರಿಯಪ್ಪ ಎ. ಜಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
Shivamogga, Jun. 12: The District Police Department has exempted 353 people from the ‘rowdy sheeter’ list in Shivamogga district, who have not been involved in any criminal activities for the last 10 years and have built a good life.