The feud between the B.S. Yediyurappa and K.S. Eshwarappa families has been resolved?! ಶಮನಗೊಂಡ ಬಿ ಎಸ್ ಯಡಿಯೂರಪ್ಪ – ಕೆ ಎಸ್ ಈಶ್ವರಪ್ಪ ಕುಟುಂಬಗಳ ನಡುವಿನ ಮುನಿಸು?!

ಶಮನಗೊಂಡ ಬಿ ಎಸ್ ಯಡಿಯೂರಪ್ಪ – ಕೆ ಎಸ್ ಈಶ್ವರಪ್ಪ ಕುಟುಂಬಗಳ ನಡುವಿನ ಮುನಿಸು?!

ಶಿವಮೊಗ್ಗ (shivamogga), ಜೂ. 15: ‘ರಾಜಕೀಯದಲ್ಲಿ ಯಾರೂ ಶಾಶ್ವತ ಶತೃಗಳೂ ಅಲ್ಲ, ಮಿತ್ರರೂ ಅಲ್ಲ..!’ ಎಂಬ ಮಾತು, ಶಿವಮೊಗ್ಗ ರಾಜಕಾರಣದ ಮಟ್ಟಿಗೆ ಹಲವು ಸಂದರ್ಭಗಳಲ್ಲಿ ದೃಢವಾಗಿದೆ. ಇದೀಗ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹಾಗೂ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಕುಟುಂಬಗಳ ನಡುವಿನ ಸ್ನೇಹ ಮತ್ತೊಂದು ಸೇರ್ಪಡೆಯಾಗಿದೆ!

ಸದ್ಯದ ಬಿಜೆಪಿ ರಾಜಕೀಯ ಬೆಳವಣಿಗೆ ಗಮನಿಸಿದರೆ, ಕೆ ಎಸ್ ಈಶ್ವರಪ್ಪ ಮತ್ತವರ ಪುತ್ರ ಕೆ ಇ ಕಾಂತೇಶ್ ಮತ್ತೆ ಬಿಜೆಪಿ ಸೇರ್ಪಡೆಯಾಗುವ ಲಕ್ಷಣಗಳು ಗೋಚರವಾಗುತ್ತಿವೆ. ಇವರ ಬಿಜೆಪಿ ಪುನಾರಾಗಮನಕ್ಕೆ ದೊಡ್ಡ ಅಡೆತಡೆಯಾಗಿದ್ದ ಬಿ ಎಸ್ ಯಡಿಯೂರಪ್ಪ ಮತ್ತವರ ಪುತ್ರರು ಇದೀಗ ಶಾಂತವಾಗಿದ್ದಾರೆ ಎನ್ನಲಾಗಿದೆ.

ಈ ಕಾರಣದಿಂದಲೇ ಇತ್ತೀಚೆಗೆ ಶಿಕಾರಿಪುರ ಪಟ್ಟಣದಲ್ಲಿ ಆಯೋಜಿತವಾಗಿದ್ದ ಸಂಸದ ಬಿ ವೈ ರಾಘವೇಂದ್ರರವರ ಪುತ್ರ ಸುಭಾಷ್ ವಿವಾಹ ಆರತಕ್ಷತೆಯಲ್ಲಿ ಕೆ ಎಸ್ ಈಶ್ವರಪ್ಪ ಮತ್ತವರ ಪುತ್ರ ಭಾಗಿಯಾಗಿದ್ದರು. ಇದರ ಬೆನ್ನಲ್ಲೇ, ಜೂ. 14 ರಂದು ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಬಿ ವೈ ರಾಘವೇಂದ್ರ ಸಮ್ಮುಖದಲ್ಲಿ ಕೆ ಎಸ್ ಈಶ್ವರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದ ಕೆಲ ಮುಖಂಡರು – ಕಾರ್ಯಕರ್ತರು ಬಿಜೆಪಿ ಮರು ಸೇರ್ಪಡೆಯಾಗಿದ್ದಾರೆ.

ಈ ಕಾರಣದಿಂದ ಕೆ ಎಸ್ ಈಶ್ವರಪ್ಪ, ಪುತ್ರ ಕೆ ಇ ಕಾಂತೇಶ್ ಬಿಜೆಪಿ ಮರು ಸೇರ್ಪಡೆ ಖಚಿತ ಎನ್ನಲಾಗುತ್ತಿದೆ. ಸದರಿ ವಿಚಾರ ಬಿಜೆಪಿ ಪಾಳೇಯದಲ್ಲಿ, ಮತ್ತೆ ಚರ್ಚೆಯ ಮುನ್ನೆಲೆಗೆ ಬರುವಂತಾಗಿದೆ.

ಮುನಿಸು : ಒಂದಾನೊಂದು ಕಾಲದಲ್ಲಿ ಬಿಜೆಪಿ ಪಕ್ಷದ ರಾಮ-ಲಕ್ಷ್ಮಣರೆಂದೇ, ಯಡಿಯೂರಪ್ಪ ಹಾಗೂ ಈಶ್ವರಪ್ಪರನ್ನು ಕರೆಯಲಾಗುತ್ತಿತ್ತು. ಆ ಮಟ್ಟಕ್ಕೆ ಅವರಿಬ್ಬರ ನಡುವೆ ಗಳಸ್ಯಕಂಠಸ್ಯವಿತ್ತು. ಆದರೆ ಕಾಲಕ್ರಮೇಣ ನಾನಾ ಕಾರಣಗಳಿಂದ ಇವರಿಬ್ಬರ ನಡುವೆ ವೈಮನಸ್ಸು ಆವರಿಸಿಕೊಂಡಿತ್ತು. ಪರಸ್ಪರ ಶತೃಗಳಾಗಿ ಪರಿವರ್ತಿತವಾಗಿದ್ದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಹಾವೇರಿಯಿಂದ ಪುತ್ರ ಕೆ ಇ ಕಾಂತೇಶ್’ಗೆ ಬಿಜೆಪಿ ಟಿಕೆಟ್ ಕೊಡಿಸಲು ಈಶ್ವರಪ್ಪ ಭಾರೀ ಕಸರತ್ತು ನಡೆಸಿದ್ದರು. ಆದರೆ ಪುತ್ರನಿಗೆ ಟಿಕೆಟ್ ಕೊಡಿಸಲು ಸಾಧ್ಯವಾಗಿರಲಿಲ್ಲ. ಇದಕ್ಕೆ ಯಡಿಯೂರಪ್ಪ ಮೇಲೆ ಮುನಿಸಿಕೊಂಡಿದ್ದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ ವಿರುದ್ದವೇ ಬಂಡಾಯವಾಗಿ ಅಖಾಡಕ್ಕಿಳಿದಿದ್ದರು. ಶತಾಯಗತಾಯ ಬಿ ವೈ ರಾಘವೇಂದ್ರ ಮಣಿಸುವ ಪಣ ತೊಟ್ಟಿದ್ದರು. ಚುನಾವಣೆಯಲ್ಲಿ ಗೆದ್ದು ಮತ್ತೆ ಬಿಜೆಪಿ ಸೇರ್ಪಡೆಯಾಗುವುದಾಗಿ ಹೇಳಿದ್ದರು. ಆದರೆ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿದ್ದರು.

ಇದು ಅವರ ರಾಜಕೀಯ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿತ್ತು. ತದನಂತರ ಅವರು ಮತ್ತೆ ಬಿಜೆಪಿ ಸೇರ್ಪಡೆಯಾಗುವ ಯತ್ನಕ್ಕೆ ಯಡಿಯೂರಪ್ಪ, ಬಿ ವೈ ವಿಜಯೇಂದ್ರ, ಬಿ ವೈ ರಾಘವೇಂದ್ರ ದೊಡ್ಡ ಅಡ್ಡಿಯಾಗಿ ಪರಿಣಮಿಸಿದ್ದರು. ಈ ಕಾರಣದಿಂದಲೇ ಮಾತೃ ಪಕ್ಷಕ್ಕೆ ವಾಪಾಸ್ ಆಗುವ ಈಶ್ವರಪ್ಪರ ಯತ್ನಗಳು ಫಲ ನೀಡಿರಲಿಲ್ಲ.

ಶಮನ : ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಯಡಿಯೂರಪ್ಪ – ಈಶ್ವರಪ್ಪ ನಡುವಿನ ಮುನಿಸು ಶಮನವಾಗಿದೆ. ಈ ಕಾರಣದಿಂದ ಈಶ್ವರಪ್ಪರ ಬಿಜೆಪಿ ಮರು ಸೇರ್ಪಡೆಗೆ, ಪಕ್ಷದಲ್ಲಿದ್ದ ಎಡರುತೊಡರುಗಳು ನಿವಾರಣೆಯಾದಂತಾಗಿದೆ. ಆದರೆ ಸೇರ್ಪಡೆ ಯಾವಾಗ? ಎಂಬುವುದು ಮಾತ್ರ ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.

Shivamogga, Jun. 14: The saying ‘In politics, there are no permanent enemies or friends..!’ has been confirmed on many occasions in terms of Shivamogga politics. Now, the friendship between the families of former CM B S Yediyurappa and former DCM K S Eshwarappa has become another addition!

Looking at the current BJP political developments, there are signs that K S Eshwarappa and his son K E Kantesh will rejoin the BJP. It is said that B S Yediyurappa and his sons, who were a major obstacle to his BJP comeback, have now calmed down.

Bhadravati: Fake currency circulation - Real estate worker arrested! ಭದ್ರಾವತಿ : ನಕಲಿ ನೋಟು ಚಲಾವಣೆ - ರಿಯಲ್ ಎಸ್ಟೇಟ್ ಕೆಲಸಗಾರ ಅರೆಸ್ಟ್! Previous post ಭದ್ರಾವತಿ : ನಕಲಿ ನೋಟು ಚಲಾವಣೆ – ರಿಯಲ್ ಎಸ್ಟೇಟ್ ಕೆಲಸಗಾರ ಅರೆಸ್ಟ್!
Heavy rain: Holiday declared for schools and colleges in Hosanagar taluk! ಭಾರೀ ಮಳೆ : ಹೊಸನಗರ ತಾಲೂಕಿನ ಶಾಲಾ – ಕಾಲೇಜುಗಳಿಗೆ ಜೂ. 25 ರಂದು ರಜೆ ಘೋಷಣೆ! Next post shimoga rain | ಭಾರೀ ಮಳೆ : ಸಾಗರ, ಹೊಸನಗರ ತಾಲೂಕಿನ ಶಾಲಾ – ಕಾಲೇಜುಗಳಿಗೆ ಜೂ. 16 ರಂದು ರಜೆ ಘೋಷಣೆ!