
shimoga | ಗ್ರಾಪಂಗಳ ಮೇಲಿನ ವಿದ್ಯುತ್ ಶುಲ್ಕದ ಹೊರೆ ತಗ್ಗಿಸಲು ಶಿವಮೊಗ್ಗ ಜಿಪಂ ಆಡಳಿತದ ಮಹತ್ವದ ಕ್ರಮ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜೂ. 16: ಶಿವಮೊಗ್ಗ ಜಿಲ್ಲೆಯಲ್ಲಿಯೂ ಗ್ರಾಮ ಪಂಚಾಯ್ತಿಗಳಿಂದ, ಮೆಸ್ಕಾಂಗೆ ಕೋಟ್ಯಾಂತರ ರೂ. ವಿದ್ಯುತ್ ಶುಲ್ಕ ಬಾಕಿಯಿದೆ. ಮತ್ತೊಂದೆಡೆ, ಗ್ರಾಪಂಗಳಿಗೆ ವರ್ಷದಿಂದ ವರ್ಷಕ್ಕೆ ವಿದ್ಯುತ್ ಶುಲ್ಕದ ಹೊರೆ ಹೆಚ್ಚಾಗುತ್ತಿದ್ದು, ಆದಾಯದ ಬಹುಪಾಲು ಮೊತ್ತ ವಿದ್ಯುತ್ ಶುಲ್ಕಕ್ಕೆ ಬಳಕೆಯಾಗುತ್ತಿದೆ!
ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ಅಧಿನಿಯಮದ ಪ್ರಕಾರ, ಅಗತ್ಯ ಸಂಖ್ಯೆಯ ಬೀದಿ ದೀಪಗಳ ಅಳವಡಿಕೆ ಹಾಗೂ ವಿದ್ಯುತ್ ಶುಲ್ಕ ಪಾವತಿಸುವುದು ಗ್ರಾಪಂಗಳ ಆದ್ಯ ಕರ್ತವ್ಯವಾಗಿದೆ. ಇದರ ಜೊತೆಗೆ ನೀರು ಸರಬರಾಜು ವಿದ್ಯುತ್ ಶುಲ್ಕವನ್ನು ಕೂಡ ಗ್ರಾಪಂ ಆಡಳಿತ ಭರಿಸಬೇಕು.
ಆದರೆ ಬಹುತೇಕ ಗ್ರಾಪಂಗಳಿಗೆ, ಸಕಾಲಕ್ಕೆ ವಿದ್ಯುತ್ ಶುಲ್ಕ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಬಾಕಿ ಮೊತ್ತ ಬೆಳೆಯುತ್ತಿದೆ. ಮತ್ತೊಂದೆಡೆ, ಎಸ್ಕಾಂಗಳು ವಿದ್ಯುತ್ ಶುಲ್ಕ ಬಾಕಿ ಮೊತ್ತ ಪಾವತಿಗೆ ನಿರಂತರವಾಗಿ ಒತ್ತಡ ಹಾಕುತ್ತಿವೆ. ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆ ನೀಡಿಕೊಂಡು ಬರುತ್ತಿದೆ.
ಜಿಪಂ ಕ್ರಮ : ಶಿವಮೊಗ್ಗ ಜಿಲ್ಲೆಯಲ್ಲಿ ಗ್ರಾಪಂಗಳ ವಿದ್ಯುತ್ ಶುಲ್ಕದ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಅನಗತ್ಯ ವಿದ್ಯುತ್ ಶುಲ್ಕ ಪಾವತಿಗೆ ಕಡಿವಾಣ ಹಾಕುವ ಉದ್ದೇಶದಿಂದ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಹೇಮಂತ್ ಅವರು ಮಹತ್ವದ ಕ್ರಮಕೈಗೊಂಡಿದ್ದಾರೆ.
ಪ್ರತಿಯೊಂದು ಗ್ರಾಪಂ ವ್ಯಾಪ್ತಿಗಳಲ್ಲಿ ಬೀದಿ ದೀಪ, ಕುಡಿಯುವ ನೀರು ಪೂರೈಕೆ ವಿದ್ಯುತ್ ಸಂಪರ್ಕ – ಬಳಕೆಯ ಪರಿಶೀಲನೆಗೆ ಕ್ರಮಕೈಗೊಂಡಿದ್ದಾರೆ. ಈ ಕುರಿತಂತೆ ಗ್ರಾಪಂ ಹಾಗೂ ಮೆಸ್ಕಾಂ ತಂಡ ಜಂಟಿಯಾಗಿ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಜಿಲ್ಲೆಯ ಎಲ್ಲ ಗ್ರಾಪಂ ವ್ಯಾಪ್ತಿಗಳಲ್ಲಿ ವಿದ್ಯುತ್ ಮೀಟರ್ ಸಂಪರ್ಕಗಳ ಪರಿಶೀಲನೆ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಲಭ್ಯ ಮಾಹಿತಿ ಅನುಸಾರ ಪರಿಶೀಲನೆ ವೇಳೆ ಕೆಲವೆಡೆ ಅನಗತ್ಯವಾಗಿ ಗ್ರಾಪಂ ಆಡಳಿತಗಳು ವಿದ್ಯುತ್ ಶುಲ್ಕ ಪಾವತಿಸುತ್ತಿರುವುದು, ವಿದ್ಯುತ್ ಪೋಲಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರಲಾರಂಭಿಸಿವೆ!
ಇದಕ್ಕೆ ತಾಜಾ ನಿದರ್ಶನವೆಂಬಂತೆ, ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಗ್ರಾಪಂನ ಬಸವನಗಂಗೂರು ಗ್ರಾಮ ವ್ಯಾಪ್ತಿಯ ಕರ್ನಾಟಕ ಗೃಹ ಮಂಡಳಿ ಬಡಾವಣೆಯಲ್ಲಿ, ಸುಮಾರು 30 ವಿದ್ಯುತ್ ಮೀಟರ್ ಗಳು ಬೀದಿ ದೀಪಕ್ಕಾಗಲಿ ಅಥವಾ ಕುಡಿಯುವ ನೀರಿನ ಬಳಕೆಗೆ ಬಾರದಿದ್ದರೂ ಗ್ರಾಪಂ ಆಡಳಿತ ವಿದ್ಯುತ್ ಶುಲ್ಕ ಭರಿಸುತ್ತಿರುವುದು ಪತ್ತೆಯಾಗಿದೆ ಎನ್ನಲಾಗಿದೆ!
ಸದರಿ ಬಡಾವಣೆಯಲ್ಲಿ ಹಾಲಿ ಬೀದಿ ದೀಪಕ್ಕೆ ಸುಮಾರು ನಾಲ್ಕೈದು ವಿದ್ಯುತ್ ಮೀಟರ್ ಹಾಗೂ ನೀರು ಪೂರೈಕೆಗೆ ಒಂದು ಮೀಟರ್ ಬಳಕೆಯಾಗುತ್ತಿದೆ. ಉಳಿದ ವಿದ್ಯುತ್ ಮೀಟರ್ ಗಳು ಬಳಕೆಯಿಲ್ಲವಾಗಿದೆ. ಪ್ರತಿ ತಿಂಗಳು ಸದರಿ ಬಡಾವಣೆಯಿಂದ ವಿದ್ಯುತ್ ಶುಲ್ಕದ ಮೊತ್ತವಾಗಿ ಮೆಸ್ಕಾಂನಿಂದ ಸರಿಸುಮಾರು 70 ರಿಂದ 80 ಸಾವಿರ ರೂ. ಬರುತ್ತಿದೆ ಎನ್ನಲಾಗಿದೆ!
10 ರಿಂದ 15 ಸಾವಿರ ರೂ. ವಿದ್ಯುತ್ ಶುಲ್ಕ ಬರಬೇಕಾದ ಸ್ಥಳದಲ್ಲಿ, 70 ಸಾವಿರ ರೂ. ಶುಲ್ಕ ಬರುತ್ತಿರುವುದು ಸಖೇದಾಶ್ಚರ್ಯಕ್ಕೆ ಕಾರಣವಾಗಿದೆ. ಈ ಬಗ್ಗೆ ಗ್ರಾಪಂ ಆಡಳಿತ ಸಮಗ್ರ ಪರಿಶೀಲನೆಗೆ ಮುಂದಾಗಿರುವ ಮಾಹಿತಿಗಳು ಕೇಳಿಬಂದಿವೆ.
ಒಟ್ಟಾರೆ ಶಿವಮೊಗ್ಗ ಜಿಪಂ ಸಿಇಓ ಅವರ ಸಕಾಲಿಕ ಕ್ರಮದಿಂದ ಭವಿಷ್ಯದಲ್ಲಿ ಗ್ರಾಪಂ ಆಡಳಿತಗಳಿಗೆ ವಿದ್ಯುತ್ ಶುಲ್ಕದ ಹೊರೆ ಕಡಿಮೆಯಾಗುವುದು ನಿಶ್ಚಿತವಾಗಿದೆ. ಆದರೆ ಪ್ರಸ್ತುತ ನಡೆಸುತ್ತಿರುವ ಕಾರ್ಯಾಚರಣೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ ಮಾತ್ರ ಇದು ಸಾಧ್ಯ ಎಂಬುವುದು ಪ್ರಜ್ಞಾವಂತ ನಾಗರೀಕರ ಅಭಿಪ್ರಾಯವಾಗಿದೆ.