
shimoga | ಶಿವಮೊಗ್ಗ : ಜಿಲ್ಲಾಧಿಕಾರಿಗೆ ಹೊಸನಗರ ತಾಲೂಕು ವಸವೆ ಗ್ರಾಮಸ್ಥರ ಆಗ್ರಹವೇನು?
ಶಿವಮೊಗ್ಗ (shivamogga), ಜೂ. 19: ರೈತರು ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಜಮೀನು ತೆರವುಗೊಳಿಸಬೇಕೆಂಬ ಆಗ್ರಹಕ್ಕೆ, ಯಾವುಧೇ ಮನ್ನಣೆ ನೀಡಬಾರದು ಎಂದು ಹೊಸನಗರ ತಾಲೂಕು ವಸವೆ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಆಗ್ರಹಿಸಿದ್ದಾರೆ.
ಈ ಕುರಿತಂತೆ ಜೂ. 19 ರಂದು ಗ್ರಾಮಸ್ಥರ ನಿಯೋಗ ಶಿವಮೊಗ್ಗ ನಗರದ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಮನವಿ ಪತ್ರ ಅರ್ಪಿಸಿದೆ.
ವಸವೆ ಗ್ರಾಮದ ವ್ಯಕ್ತಿಯೋರ್ವರು, ನಿರಂತರವಾಗಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಳ್ಳುತ್ತ ಬರುತ್ತಿದ್ದಾರೆ. ಈ ಕುರಿತಂತೆ ಏನಾದರೂ ತೊಂದರೆ ಕೊಟ್ಟರೆ ಹೊಡೆಯುವುದಾಗಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಈ ಹಿಂದೆ ಸಾರ್ವಜನಿಕರ ದೂರಿನ ಆಧಾರದ ಮೇಲೆ, ಹೊಸನಗರ ತಾಲೂಕು ಆಡಳಿತವು ಸದರಿ ವ್ಯಕ್ತಿ ಅಕ್ರಮವಾಗಿ ಮಾಡಿಕೊಂಡಿದ್ದ ಒತ್ತುವರಿ ತೆರವುಗೊಳಿಸಿತ್ತು ಎಂದು ಮನವಿ ಪತ್ರದಲ್ಲಿ ಗ್ರಾಮಸ್ಥರು ತಿಳಿಸಿದ್ದಾರೆ.
ನಂತರ ಮತ್ತಷ್ಟು ಪ್ರಮಾಣದ ಭೂಮಿಯನ್ನು ಸದರಿ ವ್ಯಕ್ತಿ ಒತ್ತುವರಿ ಮಾಡಿಕೊಂಡಿದ್ದ. ಈ ಕುರಿತಂತೆ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಹೊಸನಗರ ತಹಶೀಲ್ದಾರ್ ಅವರಿಗೆ ಮನವಿ ಅರ್ಪಿಸಿದ್ದೆವು. ಇದರ ಆಧಾರದ ಮೇಲೆ ತಾಲೂಕು ಆಡಳಿತದ ಸೂಚನೆ ಮೇರೆಗೆ ಅಧಿಕಾರಿಗಳು 28-5-2025 ರಂದು ಒತ್ತುವರಿ ತೆರವುಗೊಳಿಸಿದ್ದರು.
ಸದರಿ ಪ್ರಕರಣದಲ್ಲಿ ತಹಶೀಲ್ದಾರ್ ಅವರು ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ಆದರೆ ಸದರಿ ವ್ಯಕ್ತಿಯೂ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ವಿರುದ್ದ ಇಲ್ಲಸಲ್ಲದ ಆರೋಪ ಮಾಡಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲವಾಗಿದೆ ಎಂದು ಗ್ರಾಮಸ್ಥರು ಮನವಿಯಲ್ಲಿ ಹೇಳಿದ್ದಾರೆ.
ಸದರಿ ವ್ಯಕ್ತಿಯು ಇದೀಗ ಗ್ರಾಮಸ್ಥರು ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ, ನಮೂನೆ 53 ಮತ್ತು 57 ರಲ್ಲಿ ಮಂಜೂರಾತಿಗೆ ಅರ್ಜಿ ಸಲ್ಲಿಸಿದ ಜಮೀನುಗಳನ್ನು ತೆರವುಗೊಳಿಸುವಂತೆ ಆಗ್ರಹಿಸುತ್ತಿದ್ದು, ಇದಕ್ಕೆ ಯಾವುದೇ ಮನ್ನಣೆ ನೀಡಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
Shivamogga, June 19: A delegation of villagers from Vasave in Hosanagar taluk of the district submitted a petition to Deputy Commissioner Gurudatta Hegde at the DC office in Shivamogga city on June 19.