
ಮೋದಿ – ಅಮಿತ್ ಶಾ ಬಿಗಿ ನಿಲುವು : ಹಲವು ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದ್ದಾರೆಯೇ ಅಚ್ಚರಿಯ ಅಭ್ಯರ್ಥಿಗಳು?
ಕಮಲ ಹುರಿಯಾಳುಗಳ ಪಟ್ಟಿ ರಿಲೀಸ್ ಗೆ ಕೌಂಟ್ ಡೌನ್…!
-ಬಿ. ರೇಣುಕೇಶ್-
ನವದೆಹಲಿ/ಬೆಂಗಳೂರು, ಎ. 11: ವಿಧಾನಸಭೆ ಚುನಾವಣೆ ನಾಮಪತ್ರ ಸಲ್ಲಿಕೆಗೆ ದಿನಗಣನೆ ಆರಂಭವಾಗಿದೆ. ಆದಾಗ್ಯೂ ಆಡಳಿತಾರೂಢ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಹೆಸರು ಪ್ರಕಟವಾಗಿಲ್ಲ. ಇದು ಹಲವು ರೀತಿಯ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.
ಎಲ್ಲ ಅಂದುಕೊಂಡಂತೆ ನಡೆದಿದ್ದರೆ, ಸೋಮವಾರವೇ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಬೇಕಾಗಿತ್ತು. ಪಕ್ಷದ ವರಿಷ್ಠರು ಕೂಡ ಮ್ಯಾರಥಾನ್ ಸಭೆಗಳನ್ನು ನಡೆಸಿ, ಅಂತಿಮ ಪಟ್ಟಿ ಅಖೈರುಗೊಳಿಸಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು.
ಆದರೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ರಾಜ್ಯ ನಾಯಕರ ನಡುವೆ ಒಮ್ಮತದ ಅಭಿಪ್ರಾಯ ಏರ್ಪಡದ ಹಿನ್ನೆಲೆಯಲ್ಲಿ, ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬವಾಗುತ್ತಿದೆ ಎಂಬ ಮಾತುಗಳು ಕೇಳಿಬರಲಾರಂಭಿಸಿದೆ. ಯಾವಾಗ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂಬುವುದು ಪಕ್ಷದ ಮುಖಂಡರಿಗೂ ಸ್ಪಷ್ಟತೆಯಿಲ್ಲದಂತಾಗಿದೆ!
ಪಕ್ಷದ ಉನ್ನತ ಮೂಲಗಳ ಮಾಹಿತಿ ಅನುಸಾರ, ಮಂಗಳವಾರ ರಾತ್ರಿ ಅಥವಾ ಬುಧವಾರ ಬೆಳಿಗ್ಗೆ ಬಿಜೆಪಿ ಪ್ರಥಮ ಹಂತದ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಸುಮಾರು 150 ಕ್ಕೂ ಹೆಚ್ಚು ಕ್ಷೇತ್ರಗಳ ಹುರಿಯಾಳುಗಳ ಹೆಸರು ಅಂತ್ಯಗೊಂಡಿದೆ ಎಂದು ಹೇಳಲಾಗುತ್ತಿದೆ.
ವರಿಷ್ಠರ ಬಿಗಿ ನಿಲುವು!: ಬಿಜೆಪಿ ವರಿಷ್ಠರು, ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿಗಿ ನಿಲುವು ತಳೆದಿದ್ದಾರೆ. ರಾಜ್ಯ ನಾಯಕರ ಯಾವುದೇ ಲಾಬಿ, ಒತ್ತಡ ತಂತ್ರಕ್ಕೆ ಮಣೆ ಹಾಕುತ್ತಿಲ್ಲ. ಸ್ಪರ್ಧಾಕಾಂಕ್ಷಿಗಳ ಕುರಿತಂತೆ ಬಂದಿರುವ ಸಮೀಕ್ಷಾ ವರದಿಗಳು, ಗೆಲ್ಲುವ ಸಾಧ್ಯತೆ, ವಿವಿಧ ಮೂಲಗಳಿಂದ ಸಂಗ್ರಹಿಸಿದ ವರದಿಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆಗೆ ಒತ್ತು ನೀಡಿದ್ದಾರೆ ಎನ್ನಲಾಗಿದೆ.
ಹಾಗೆಯೇ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾದವರಿಗೆ, ನಾಯಕರ ಮಕ್ಕಳು-ಕುಟುಂಬದವರಿಗೆ, ನಾಲ್ಕೈದು ಬಾರಿ ಚುನಾವಣ ಕಣಕ್ಕಿಳಿದವರಿಗೆ ಅಳೆದುತೂಗಿ ವರಿಷ್ಠರು ನಿರ್ಧಾರ ಕೈಗೊಂಡಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನ ಪ್ರಭಾವಿ ನಾಯಕರು ಕಣಕ್ಕಿಳಿದಿರುವ ಕ್ಷೇತ್ರಗಳಲ್ಲಿ ಪಕ್ಷದಿಂದ ಯಾರನ್ನು ಕಣಕ್ಕಿಳಿಸಿದರೆ ಸಹಕಾರಿಯಾಗಲಿದೆ ಎಂಬುವುದರ ಆಧಾರದ ಮೇಲೆ ಅಭ್ಯರ್ಥಿಗಳ ಅಖೈರುಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಕಾರಣದಿಂದ ಹಲವು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಹಾಗೂ ಅಚ್ಚರಿಯ ಅಭ್ಯರ್ಥಿಗಳು ಅಖಾಡಕ್ಕಿಳಿಯುವ ಸಾಧ್ಯತೆಗಳು ತಳ್ಳಿ ಹಾಕುವಂತಿಲ್ಲವಾಗಿದೆ. ಇದರಿಂದ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಾಕಷ್ಟು ಕುತೂಹಲಕ್ಕೆಡೆ ಮಾಡಿಕೊಡುವಂತೆ ಮಾಡಿದೆ.
ಯಡಿಯೂರಪ್ಪ ದಿಢೀರ್ ನಿರ್ಗಮನ : ಚರ್ಚೆ!
*** ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತ್ಯಗೊಳ್ಳುವುದಕ್ಕೂ ಮುನ್ನವೇ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೆಹಲಿಯಿಂದ ಬೆಂಗಳೂರಿಗೆ ನಿರ್ಗಮಿಸಿದ್ದಾರೆ.

ಹಾಗೆಯೇ ಸೋಮವಾರ ದೆಹಲಿಯಲ್ಲಿ ಪಕ್ಷದ ರಾಷ್ಟ್ರಿಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಯಡಿಯೂರಪ್ಪ ಅವರನ್ನು ಹೊರಗಿಟ್ಟು ಸಭೆ ನಡೆಸಿದ್ದಾರೆ. ಇದು ಕೂಡ ಬಿಜೆಪಿ ಪಾಳೇಯದಲ್ಲಿ ಹಲವು ರೀತಿಯ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.
ಪ್ರಚಾರಕ್ಕೆ ಎಡರುತೊಡರು!
*** ಈಗಾಗಲೇ ಹಲವು ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿ ಸಿದ್ದತೆ ಆರಂಭಿಸಿದ್ದಾರೆ.

ಆದರೆ ಬಿಜೆಪಿ ಪಕ್ಷದಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗದಿರುವುದರಿಂದ, ಸ್ಪರ್ಧಾಕಾಂಕ್ಷಿಗಳು ಪ್ರಚಾರ ಕಣಕ್ಕಿಳಿಯಲು ಮೀನಮೇಷ ಎಣಿಸುವಂತಾಗಿದೆ. ಮತ್ತೊಂದೆಡೆ, ಟಿಕೆಟ್ ಸಿಕ್ಕೇ ಸಿಗುವ ವಿಶ್ವಾಸದಲ್ಲಿರುವ ಕೆಲ ಶಾಸಕರು, ಮುಖಂಡರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.