
Shimoga | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಆಯುಕ್ತರೇ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವುದು ಯಾವಾಗ?!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜು. 03: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆ, ನಿಗದಿತ ವೇಗದಲ್ಲಿ ಸಾಗುತ್ತಿಲ್ಲವೆಂಬ ದೂರುಗಳಿವೆ. ಇದರಿಂದ ಪ್ರಕ್ರಿಯೆ ಆರಂಭಗೊಂಡು ವರ್ಷವೇ ಉರುಳಿದರೂ ಇಲ್ಲಿಯವರೆಗೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ!
ಈ ನಡುವೆ ಈಗಾಗಲೇ ಸಿದ್ದಪಡಿಸಲಾಗಿರುವ ವರದಿಯಲ್ಲಿ, ಪಾಲಿಕೆ ಸೇರ್ಪಡೆಗೆ ಪರಿಗಣಿಸದ ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಮ ಪಂಚಾಯ್ತಿ ಅಧೀನದ ವಿವಿಧ ಬಡಾವಣೆಗಳ ನಿವಾಸಿಗಳು, ತಮ್ಮ ಪ್ರದೇಶಗಳನ್ನು ಕೂಡ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡುವಂತೆ ಜಿಲ್ಲಾಡಳಿತಕ್ಕೆ ಹಾಗೂ ಗ್ರಾಮ ಪಂಚಾಯ್ತಿ ಆಡಳಿತಗಳಿಗೆ ಮನವಿ ಪತ್ರ ಅರ್ಪಿಸಲಾರಂಭಿಸಿದ್ದಾರೆ.
ನಾಗರೀಕರ ಬೇಡಿಕೆಗಳ ಕುರಿತಂತೆ ಪರಿಶೀಲಿಸಿ ಹಾಗೂ ಈಗಾಗಲೇ ಸಿದ್ದಪಡಿಸಿರುವ ವರದಿಯನ್ನು ಪರಿಷ್ಕರಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಪಾಲಿಕೆ ಆಡಳಿತಕ್ಕೆ ಇತ್ತೀಚೆಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದ್ದಾರೆ.
ಆದರೆ ಡಿಸಿ ಸೂಚನೆ ನೀಡಿ ತಿಂಗಳಾಗುತ್ತ ಬಂದರೂ ಇಲ್ಲಿಯವರೆಗೂ ಪಾಲಿಕೆ ಆಡಳಿತದಿಂದ ಯಾವುದೇ ಕ್ರಮವಾಗಿಲ್ಲವೆಂಬ ಮಾಹಿತಿಗಳು ಕೇಳಿಬರುತ್ತಿವೆ. ಇದರಿಂದ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳು ಗೋಚರವಾಗುತ್ತಿವೆ.
ಈ ಹಿಂದಿನ ಪಾಲಿಕೆ ಆಯುಕ್ತರಾಗಿದ್ದ ಕವಿತಾ ಯೋಗಪ್ಪನವರ್ ರವರ ಅವಧಿಯಲ್ಲಿಯೂ, ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆ ನಿಗದಿತ ವೇಗದಲ್ಲಿ ಸಾಗಿರಲಿಲ್ಲ. ಜಿಲ್ಲಾಡಳಿತಕ್ಕೆ ವರದಿ ಸಲ್ಲಿಕೆ ಪ್ರಕ್ರಿಯೆ ಸಾಕಷ್ಟು ವಿಳಂಬವಾಗಿತ್ತು. ಅಂತೂ ಇಂತೂ ಕೊನೆಗೂ ವರದಿ ಸಲ್ಲಿಕೆಯಾಗಿತ್ತು.
ಸದರಿ ವರದಿಯ ಕುರಿತಂತೆ, ಜಿಲ್ಲಾಧಿಕಾರಿಗಳು ಕಳೆದ ಮೇ ತಿಂಗಳಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ್ದರು. ಜನಪ್ರತಿನಿಧಿಗಳು, ಗ್ರಾಮ ಪಂಚಾಯ್ತಿಗಳು, ನಾಗರೀಕರ ಅಭಿಪ್ರಾಯ ಆಲಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಇದಾದ ನಂತರ ಗ್ರಾಪಂ ಅಧೀನದ ಹಲವು ಬಡಾವಣೆಗಳ ನಿವಾಸಿಗಳು, ತಮ್ಮ ಪ್ರದೇಶಗಳನ್ನು ಕೂಡ ಪಾಲಿಕೆಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದರು. ಗ್ರಾಪಂ ಆಡಳಿತಗಳಿಂದ ಸಮರ್ಪಕ ಮೇಲ್ವಿಚಾರಣೆಯಾಗುತ್ತಿಲ್ಲ ಎಂದು ದೂರಿದ್ದರು.
ಆಯುಕ್ತರು ಗಮನಿಸಲಿ : ಕಳೆದ ಕೆಲ ವಾರಗಳ ಹಿಂದೆ ಪಾಲಿಕೆ ಆಯುಕ್ತರಾಗಿದ್ದ ಕವಿತಾ ಯೋಗಪ್ಪರನ್ನು ಆಯುಕ್ತ ಹುದ್ದೆಯಿಂದ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ, ಮಾಯಣ್ಣಗೌಡ ಅವರನ್ನು ನಿಯೋಜಿಸಿತ್ತು.
ನೂತನ ಆಯುಕ್ತ ಮಾಯಣ್ಣಗೌಡರವರು ಕಾಲಮಿತಿಯೊಳಗೆ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಕುರಿತಂತೆ, ನಾಗರೀಕರು ಸಲ್ಲಿಸಿರುವ ಬೇಡಿಕೆಗಳ ಪರಿಶೀಲನೆ ನಡೆಸಬೇಕಾಗಿದೆ. ಖುದ್ದು ಬಡಾವಣೆಗಳಿಗೆ ಭೇಟಿಯಿತ್ತು ಅಲ್ಲಿರುವ ಸೌಲಭ್ಯಗಳ ವೀಕ್ಷಣೆ ಮಾಡಬೇಕಾಗಿದೆ.
ಈ ಮೂಲಕ ಪರಿಷ್ಕರಣೆಯ ಸಮಗ್ರ ವರದಿ ಸಿದ್ದಪಡಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕಾಗಿದ್ದು, ವಿಳಂಬಕ್ಕೆ ಆಸ್ಪದವಾಗದಂತೆ ಅಗತ್ಯ ಕ್ರಮಕೈಗೊಳ್ಳಬೇಕು ಎಂಬುವುದು ಗ್ರಾಮ ಪಂಚಾಯ್ತಿ ಅಧೀನದ ಬಡಾವಣೆಗಳ ನಿವಾಸಿಗಳು ಆಗ್ರಹಿಸುತ್ತಾರೆ.
Shivamogga, Jul. 03: There are complaints that the Shivamogga Municipal Corporation’s boundary revision process is not progressing at the scheduled pace. Even though a year has passed since the process began, no proposal has been submitted to the government till date!
Meanwhile, the report that has already been prepared shows that residents of various settlements under the Gram Panchayat, which are adjacent to the city and are not considered for inclusion in the corporation, have started submitting a petition to the district administration to include their areas under the corporation’s jurisdiction.