ಪ್ರಸ್ತುತ ವಿಧಾನಸಭೆ ಚುನಾವಣೆ ವೇಳೆ, ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿ ಹೈಕಮಾಂಡ್ ತಳೆದಿರುವ ಬಿಗಿ ನಿಲುವಿನ ಎಫೆಕ್ಟ್ ನಿಂದ, ಬಿಜೆಪಿ ಹಿರಿಯ ನಾಯಕರು ಚುನಾವಣಾ ‘ತ್ಯಾಗ’ಕ್ಕೆ ವೇದಿಕೆ ಸಿದ್ಧವಾಗಲಾರಂಭಿಸಿದೆ! ಹೌದು. ಬಿಜೆಪಿ ಪಕ್ಷದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ದಿಢೀರ್ ಆಗಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವುದು, ಬಿಜೆಪಿ ಹೈಕಮಾಂಡ್ ಖಡಕ್ ನಿಲುವಿನ ಸ್ಪಷ್ಟ ಮುನ್ನುಡಿ ಎಂದೇ ಹೇಳಲಾಗುತ್ತಿದೆ!

ಬಿಜೆಪಿ ಹೈಕಮಾಂಡ್ ಖಡಕ್ ನಿಲುವು ಸಮ್ಮತಿಸಿ, ‘ಚುನಾವಣಾ ನಿವೃತ್ತಿ’ ಘೋಷಿಸಿದರೇ ಕೆ.ಎಸ್.ಈಶ್ವರಪ್ಪ?

ಸಮ್ಮತಿ ನಿರ್ಧಾರದ ಹಿಂದೆ ಅಡಗಿದೆಯೇ ಪುತ್ರನ ರಾಜಕೀಯ ಭವಿಷ್ಯ?

– ಬಿ. ರೇಣುಕೇಶ್

ಶಿವಮೊಗ್ಗ, ಎ. 11: ಪ್ರಸ್ತುತ ವಿಧಾನಸಭೆ ಚುನಾವಣೆ ವೇಳೆ, ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿ ಹೈಕಮಾಂಡ್ ತಳೆದಿರುವ ಬಿಗಿ ನಿಲುವಿನ ಎಫೆಕ್ಟ್ ನಿಂದ, ಬಿಜೆಪಿ ಹಿರಿಯ ನಾಯಕರ ಚುನಾವಣಾ ‘ತ್ಯಾಗ’ಕ್ಕೆ ವೇದಿಕೆ ಸಿದ್ಧವಾಗಲಾರಂಭಿಸಿದೆ!

ಹೌದು. ಬಿಜೆಪಿ ಪಕ್ಷದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ದಿಢೀರ್ ಆಗಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವುದು, ಬಿಜೆಪಿ ಹೈಕಮಾಂಡ್ ಖಡಕ್ ನಿಲುವಿನ ಸ್ಪಷ್ಟ ಮುನ್ನುಡಿ ಎಂದೇ ಹೇಳಲಾಗುತ್ತಿದೆ!

ಆಕಾಂಕ್ಷಿಯಾಗಿದ್ದರು: ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ, ಶಿವಮೊಗ್ಗ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಕಲ ತಯಾರಿಯನ್ನು 74 ರ ವಯೋಮಾನದ ಕೆ.ಎಸ್.ಈಶ್ವರಪ್ಪ ಅವರು ನಡೆಸಿಕೊಂಡು ಬಂದಿದ್ದರು.

‘ಪಕ್ಷ ಅವಕಾಶ ಕಲ್ಪಿಸಿದರೆ ಮತ್ತೆ ತಾವು ಚುನಾವಣಾ ಕಣಕ್ಕಿಳಿಯುತ್ತೆನೆ’ ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದರು.  ಇದರ ನಡುವೆ ಪುತ್ರ ಕೆ.ಇ.ಕಾಂತೇಶ್ ರನ್ನು ರಾಜಕೀಯವಾಗಿ ಗಟ್ಟಿಗೊಳಿಸುವ ಕಾರ್ಯ ಕೂಡ ನಡೆಸಿಕೊಂಡು ಬಂದಿದ್ದರು.

ಈ ಕಾರಣದಿಂದಲೇ, ತಮಗೆ ಟಿಕೆಟ್ ನೀಡದಿದ್ದರೆ ಪುತ್ರ ಕೆ.ಇ.ಕಾಂತೇಶ್ ಗಾದರೂ ಸ್ಪರ್ಧೆಗೆ ಅವಕಾಶ ನೀಡಬೇಕೆಂಬ ಮನವಿಯನ್ನ ಪಕ್ಷದ ವರಿಷ್ಠರಿಗೆ ಕೆಎಸ್ಈ  ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿತ್ತು.

ವಿರೋಧಿಗಳ ಲಾಬಿ: ಈ ನಡುವೆ ಕೆಎಸ್ಈ ಸ್ಪರ್ಧೆಯ ವಿರುದ್ದ, ಪಕ್ಷದಲ್ಲಿನ ಅವರ ವಿರೋಧಿ ಪಾಳೇಯ ಭಾರೀ ಲಾಬಿ ನಡೆಸಲಾರಂಭಿಸಿತ್ತು. ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಬಂಡಾಯ ಸಾರಿದ್ದರು. ಕೆಎಸ್ಈ ವಿರುದ್ದ ಚುನಾವಣಾ ಕಣಕ್ಕಿಳಿಯುವುದಾಗಿ ಘೋಷಿಸಿದ್ದರು. ಈ ವಿಷಯ ಬಿಜೆಪಿ ರಾಷ್ಟ್ರೀಯ ನಾಯಕರ ಹಂತದಲ್ಲಿಯೂ ಚರ್ಚೆಯಾಗಿತ್ತು ಎನ್ನಲಾಗಿದೆ.

ಖಡಕ್ ನಿಲುವು: ಮತ್ತೊಂದೆಡೆ ಬಿಜೆಪಿ ರಾಷ್ಟ್ರೀಯ ನಾಯಕರು, ಪ್ರಸ್ತುತ ಟಿಕೆಟ್ ಹಂಚಿಕೆ ವೇಳೆ ಸಾಕಷ್ಟು ಬಿಗಿ ನಿಲುವು ತಳೆದಿದ್ದಾರೆನ್ನಲಾಗಿದೆ. ಹಾಲಿ ಶಾಸಕರ ಮಕ್ಕಳಿಗೆ – ಕುಟುಂಬ ಸದಸ್ಯರಿಗೆ, ನಾಲ್ಕೈದು ಬಾರಿ ಚುನಾವಣಾ ಕಣಕ್ಕಿಳಿದವರಿಗೆ, ಹಿರಿಯ ನಾಯಕರಿಗೆ,  ನಾನಾ ಆರೋಪಗಳಿಗೆ ಗುರಿಯಾದವರಿಗೆ ಟಿಕೆಟ್ ನೀಡದಿರುವ ಖಡಕ್ ನಿರ್ಧಾರ ಕೈಗೊಂಡಿದ್ದಾರೆ. ಈ ಕುರಿತಂತೆ ರಾಜ್ಯ ನಾಯಕರ ಲಾಬಿಗೆ ಮಣಿಯದಿರುವ ನಿಲುವು ತಳೆದಿದ್ದಾರೆ ಎಂದು ಹೇಳಲಾಗಿತ್ತು.

ಈ ಕಾರಣದಿಂದ ಹಲವು ಕ್ಷೇತ್ರಗಳಿಗೆ, ಹೊಸ ಮುಖ ಹಾಗೂ ಅಚ್ಚರಿ ಅಭ್ಯರ್ಥಿಗಳಿಗೆ ಅವಕಾಶ ಲಭ್ಯವಾಗಲಿದೆ. ಹಲವು ಹಾಲಿ ಶಾಸಕರಿಗೆ ಹಾಗೂ ನಾಯಕರಿಗೆ ಟಿಕೆಟ್ ಕೈ ತಪ್ಪಲಿದೆ ಎಂಬ ಮಾಹಿತಿಗಳು ಬಿಜೆಪಿ ಪಾಳೇಯದಲ್ಲಿ ಹರಿದಾಡುತ್ತಿತ್ತು.

ಹೈಕಮಾಂಡ್ ಸೂಚನೆ: ಮತ್ತೊಂದೆಡೆ ಬಿಜೆಪಿ ವರಿಷ್ಠರು ಟಿಕೆಟ್ ರೇಸ್ ನಲ್ಲಿದ್ದ ಪಕ್ಷದ ಕೆಲ ಹಿರಿಯರಿಗೆ ಟಿಕೆಟ್ ರೇಸ್ ನಿಂದ ಹಿಂದೆ ಸರಿಯುವಂತೆ ಸಂದೇಶ ರವಾನಿಸುತ್ತಿದೆ. ಹೈಕಮಾಂಡ್ ಆದೇಶಕ್ಕೆ ಮನ್ನಣೆ ನೀಡಿ ಕೆಎಸ್ಈ ಅವರು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಪುತ್ರನ ಭವಿಷ್ಯ: ಈಗಾಗಲೇ ಹಲವು ಬಿಜೆಪಿ ನಾಯಕರು ತಮ್ಮ ಪುತ್ರರ ರಾಜಕೀಯ ಭವಿಷ್ಯಕ್ಕಾಗಿ ‘ಚುನಾವಣಾ ರಾಜಕೀಯದಿಂದ ನಿವೃತ್ತಿ’ ಘೋಷಿಸಿದ್ದಾರೆ. ಮತ್ತೊಂದೆಡೆ ಬಿಜೆಪಿ ಹೈಕಮಾಂಡ್ ಹಿರಿಯ ನಾಯಕರಿಗೆ ಟಿಕೆಟ್ ನೀಡುವುದಿಲ್ಲ ಎಂಬ ಖಡಕ್ ನಿಲುವು ತಳೆದಿದೆ.

ಇದನ್ನು ಕೆಎಸ್ಈ ಯಾವುದೇ ವಿರೋಧವಿಲ್ಲದೆ ಒಪ್ಪಿಕೊಂಡಿದ್ದಾರೆ. ಈ ಕಾರಣದಿಂದಲೇ ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇವರ ಸಮ್ಮತಿ ನಿರ್ಧಾರದ ಹಿಂದೆ, ಪುತ್ರ ಕೆ.ಇ.ಕಾಂತೇಶ್ ರಾಜಕೀಯ ಭವಿಷ್ಯವೂ ಅಡಗಿದೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆ ಬಿಜೆಪಿ ಟಿಕೆಟ್ ಘೋಷಣೆಗೆ ಕೌಂಟ್ ಡೌನ್ ಶುರುವಾಗಿರುವ ಬೆನ್ನಲ್ಲೇ, ಕೆಎಸ್ಈ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬುವುದು ಕುತೂಹಲ ಮೂಡುವಂತೆ ಮಾಡಿದೆ.

7 ಭಾರಿ ಅಸೆಂಬ್ಲಿಗೆ ಸ್ಪರ್ಧೆ : 5 ಗೆಲುವು – 2 ಸೋಲು..!

*** ಕೆ.ಎಸ್.ಈಶ್ವರಪ್ಪ ಅವರು ಒಟ್ಟಾರೆ 7 ಬಾರಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. 1989 ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಧುಮುಕಿದ್ದರು. ಮೊದಲ ಪ್ರಯತ್ನದಲ್ಲಿಯೇ ಅಂದಿನ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್.ಶ್ರೀನಿವಾಸ್ ವಿರುದ್ದ ಜಯ ಸಾಧಿಸಿದ್ದರು. 1994 ರಲ್ಲಿಯೂ ಕಾಂಗ್ರೆಸ್ ಎದುರಾಳಿಯಾಗಿದ್ದ ಕೆ.ಹೆಚ್.ಶ್ರೀನಿವಾಸ್ ವಿರುದ್ದ ಜಯಗಳಿಸಿದ್ದರು. 1999 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಎಂ.ಚಂದ್ರಶೇಖರಪ್ಪ ವಿರುದ್ದ ಕೆಎಸ್ಈ ಪರಾಭವಗೊಂಡಿದ್ದರು. ಇದಕ್ಕೆ ಮಾಜಿ ಸಿಎಂ ಎಸ್.ಬಂಗಾರಪ್ಪ ಪ್ರಭಾವ ಮುಖ್ಯ ಕಾರಣವಾಗಿತ್ತು. 2004 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಎಂ.ಚಂದ್ರಶೇಖರಪ್ಪ ವಿರುದ್ದ ಜಯ ಗಳಿಸುವಲ್ಲಿ ಸಫಲರಾಗಿದ್ದರು. 2008 ರಲ್ಲಿಯೂ ಅವರು ಜಯಶೀಲರಾಗಿದ್ದರು. ಆದರೆ 2013 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಪ್ರಸನ್ನಕುಮಾರ್ ಎದುರು ಪರಾಭವಗೊಂಡಿದ್ದರು. ಬಿ.ಎಸ್.ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ ಪರಿಣಾಮದಿಂದ, ಕೆಎಸ್ಈ ಹೀನಾಯವಾಗಿ ಸೋಲನುಭವಿಸಿದ್ದರು. ತದನಂತರ 2018 ರಲ್ಲಿ ಕೆಎಸ್ಇ ಮತ್ತೊಮ್ಮೆ ಜಯ ಸಂಪಾದಿಸಿ ವಿಧಾನಸಭೆ ಪ್ರವೇಶಿಸಿದ್ದರು.

ಹೈಕಮಾಂಡ್ ಸೂಚನೆಗೂ ಮೊದಲೇ ನಿವೃತ್ತಿ ಘೋಷಿಸಿದ್ದ ಯಡಿಯೂರಪ್ಪ!

*** 75 ವರ್ಷ ಮೇಲ್ಪಟ್ಟ ನಾಯಕರಿಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆಗೆ, ಬಿಜೆಪಿ ವರಿಷ್ಠರು ಅವಕಾಶ ನೀಡುತ್ತಿಲ್ಲ. ಈ ಕಾರಣದಿಂದಲೇ ಕಳೆದ ಹಲವು ತಿಂಗಳುಗಳ ಹಿಂದೆಯೇ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಇದೀಗ ಕೆ.ಎಸ್.ಈಶ್ವರಪ್ಪ ಕೂಡ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

‘ಯಾರ ಪರವಾಗಿಯೂ ಟಿಕೆಟ್ ಲಾಬಿ ಮಾಡುವುದಿಲ್ಲ’ : ಕೆಎಸ್ಈ

*** ‘ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿರುವುದು ನಿಜ.  ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದೆನೆ. ತಾವು ಯಾರ ಪರವಾಗಿಯೂ ಟಿಕೆಟ್ ಲಾಬಿ ಮಾಡುವುದಿಲ್ಲ. ಪಕ್ಷ ಯಾವ ಜವಾಬ್ದಾರಿ ನೀಡುತ್ತದೆಯೋ ಅದನ್ನು ನಿರ್ವಹಿಸುತ್ತೆನೆ’ ಎಂದು ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ತಮ್ಮ ಪಕ್ಷದಲ್ಲಿ ಶಾಸಕರಾಗಲು ಅನೇಕರಿದ್ಧಾರೆ. ಅವರಿಗೆ ಅವಕಾಶ ನೀಡಲಾಗಿದೆ’ ಎಂದು ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ನಾಮಪತ್ರ ಸಲ್ಲಿಕೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ಶಿವಮೊಗ್ಗ ನಗರದಲ್ಲಿ, ಕೋಟಿ ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಕೋಟೆ ಠಾಣೆ ಪೊಲೀಸರು ವಶಕ್ಕೆ ಪಡೆದ ಘಟನೆ ಮಂಗಳವಾರ ನಡೆದಿದೆ. ಗಾಂಧಿ ಬಜಾರ್ ನ ಎಲೆ ರೇವಣ್ಣನಕೇರಿ ರಸ್ತೆಯಲ್ಲಿ ಘಟನೆ ನಡೆದಿದೆ. 5.83 ಕೋಟಿ ರೂ. ಮೌಲ್ಯದ 9 ಕೆ.ಜಿ. 565 ಗ್ರಾಂ ತೂಕದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. Previous post ಶಿವಮೊಗ್ಗದಲ್ಲಿ ಕೋಟಿ ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದ ಪೊಲೀಸರು!
ಕೊನೆಗೂ ವಿಧಾನಸಭೆ ಚುನಾವಣಾ ಅಖಾಡಕ್ಕೆ ಬಿಜೆಪಿ ಪಕ್ಷ ತನ್ನ ಹುರಿಯಾಳುಗಳ ಮೊದಲ ಹಂತದ ಪಟ್ಟಿ ಪ್ರಕಟಿಸಿದೆ. ಮಂಗಳವಾರ ರಾತ್ರಿ ನವದೆಹಲಿಯಲ್ಲಿ ಬಿಡುಗಡೆಯಾದ ಅಭ್ಯರ್ಥಿಗಳ ಪಟ್ಟಿಯಲ್ಲಿ, ಶಿವಮೊಗ್ಗ ಜಿಲ್ಲೆಯ 7 ಕ್ಷೇತ್ರಗಳಲ್ಲಿ 6 ಕ್ಷೇತ್ರಗಳಲ್ಲಿ ತನ್ನ ಹುರಿಯಾಳುಗಳು ಹೆಸರು ಪ್ರಕಟಿಸಿದೆ. ನಿರೀಕ್ಷಿಸಿದಂತೆ ನಾಲ್ವರು ಹಾಲಿ ಶಾಸಕರಿಗೆ ಮತ್ತೆ ಸ್ಪರ್ಧೆಗೆ ಅವಕಾಶ ನೀಡಿದೆ. ಸಾಕಷ್ಟು ಕುತೂಹಲ ಮೂಡಿಸಿರುವ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಘೋಷಿಸಿಲ್ಲ. Next post ವಿಧಾನಸಭೆ ಸಾರ್ವತ್ರಿಕ ಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ