
ವಿಧಾನಸಭೆ ಸಾರ್ವತ್ರಿಕ ಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಶಿವಮೊಗ್ಗ ಗ್ರಾಮಾಂತರ – ಕೆ.ಬಿ.ಅಶೋಕನಾಯ್ಕ್, ತೀರ್ಥಹಳ್ಳಿ – ಆರಗ ಜ್ಞಾನೇಂದ್ರ, ಶಿಕಾರಿಪುರ – ಬಿ.ವೈ.ವಿಜಯೇಂದ್ರ, ಸೊರಬ – ಕುಮಾರ್ ಬಂಗಾರಪ್ಪ, ಸಾಗರ – ಹರತಾಳು ಹಾಲಪ್ಪ, ಭದ್ರಾವತಿ – ಮಂಗೋಟೆ ರುದ್ರೇಶ್ ಅಖಾಡಕ್ಕೆ
-ಬಿ. ರೇಣುಕೇಶ್-
ಶಿವಮೊಗ್ಗ, ಎ. 9: ಕೊನೆಗೂ ವಿಧಾನಸಭೆ ಚುನಾವಣಾ ಅಖಾಡಕ್ಕೆ ಬಿಜೆಪಿ ಪಕ್ಷ ತನ್ನ ಹುರಿಯಾಳುಗಳ ಮೊದಲ ಹಂತದ ಪಟ್ಟಿ ಪ್ರಕಟಿಸಿದೆ. ಮಂಗಳವಾರ ರಾತ್ರಿ ನವದೆಹಲಿಯಲ್ಲಿ ಬಿಡುಗಡೆಯಾದ ಅಭ್ಯರ್ಥಿಗಳ ಪಟ್ಟಿಯಲ್ಲಿ, ಶಿವಮೊಗ್ಗ ಜಿಲ್ಲೆಯ 7 ಕ್ಷೇತ್ರಗಳಲ್ಲಿ 6 ಕ್ಷೇತ್ರಗಳಲ್ಲಿ ತನ್ನ ಹುರಿಯಾಳುಗಳು ಹೆಸರು ಪ್ರಕಟಿಸಿದೆ. ನಿರೀಕ್ಷಿಸಿದಂತೆ ನಾಲ್ವರು ಹಾಲಿ ಶಾಸಕರಿಗೆ ಮತ್ತೆ ಸ್ಪರ್ಧೆಗೆ ಅವಕಾಶ ನೀಡಿದೆ. ಸಾಕಷ್ಟು ಕುತೂಹಲ ಮೂಡಿಸಿರುವ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಘೋಷಿಸಿಲ್ಲ!
ಶಿವಮೊಗ್ಗ ಗ್ರಾಮಾಂತರದಿಂದ ಕೆ.ಬಿ.ಅಶೋಕನಾಯ್ಕ್, ತೀರ್ಥಹಳ್ಳಿಯಿಂದ ಆರಗ ಜ್ಞಾನೇಂದ್ರ, ಶಿಕಾರಿಪುರದಿಂದ ಬಿ.ವೈ.ವಿಜಯೇಂದ್ರ, ಸೊರಬದಿಂದ ಕುಮಾರ ಬಂಗಾರಪ್ಪ, ಸಾಗರದಿಂದ ಹರತಾಳು ಹಾಲಪ್ಪ ಹಾಗೂ ಭದ್ರಾವತಿಯಿಂದ ಮಂಗೋಟೆ ರುದ್ರೇಶ್ ಅವರಿಗೆ ಟಿಕೆಟ್ ನೀಡಲಾಗಿದೆ. 7 ಕ್ಷೇತ್ರಗಳ ಪೈಕಿ ಶಿಕಾರಿಪುರ ಹಾಗೂ ಭದ್ರಾವತಿ ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವ ಅಭ್ಯರ್ಥಿಗಳಿಗೆ ಇದೇ ಮೊದಲ ಚುನಾವಣೆಯಾಗಿದೆ.
ಶಿಕಾರಿಪುರ: ಕೊನೆಗೂ ಬಿ.ವೈ.ವಿಜಯೇಂದ್ರಗೆ ಅವರ ತಂದೆ ಪ್ರತಿನಿಧಿಸಿಕೊಂಡು ಬರುತ್ತಿದ್ದ, ಶಿಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧಿಸಲು ಬಿಜೆಪಿ ವರಿಷ್ಠರು ಅವಕಾಶ ಕಲ್ಪಿಸಿದ್ದಾರೆ. ಈ ಮೊದಲು ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಿಂದ ಬಿ.ವೈ.ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ಚಿಂತನೆ ವರಿಷ್ಠರದ್ದಾಗಿತ್ತು. ಆದರೆ ಇದಕ್ಕೆ ಬಿ.ಎಸ್.ವೈ. ಸಮ್ಮತಿಸಿರಲಿಲ್ಲ ಎಂಬ ಮಾತು ಕೇಳಿಬಂದಿತ್ತು. ಈ ಕಾರಣದಿಂದ ಶಿಕಾರಿಪುರದಿಂದಲೇ, ಬಿ.ವೈ.ವಿಜಯೇಂದ್ರಗೆ ಅಖಾಡಕ್ಕಿಳಿಯುವ ಅವಕಾಶ ಸಿಗುವಂತಾಗಿದೆ.
ಸೊರಬ: ಕೆಲ ಸ್ವಪಕ್ಷೀಯ ನಾಯಕರ ತೀವ್ರ ಆಕ್ಷೇಪ – ಭಿನ್ನಮತದ ನಡುವೆಯೂ, ಶಾಸಕ ಕುಮಾರ್ ಬಂಗಾರಪ್ಪ ಅವರು ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಅಭ್ಯರ್ಥಿಯಾದರೆ ಬಂಡಾಯ ಅಭ್ಯರ್ಥಿ ಕಣಕ್ಕಿಳಿಸುವುದಾಗಿ ಈಗಾಗಲೇ ಘೋಷಿಸಿರುವ ಭಿನ್ನಮತೀಯ ನಾಯಕರ ನಿಲುವು ಏನಾಗಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಸಾಗರ: ಶಿವಮೊಗ್ಗ, ಸೊರಬ ಕ್ಷೇತ್ರಗಳ ರೀತಿಯಲ್ಲಿ ಸಾಗರದಲ್ಲಿಯೂ ಬಿಜೆಪಿಗೆ ಭಿನ್ನಮತ ಎದುರಾಗಿದೆ. ಶಾಸಕ ಹರತಾಳು ಹಾಲಪ್ಪ ವಿರುದ್ದ ಕೆಲ ಸ್ವಪಕ್ಷೀಯ ಮುಖಂಡರು ನಾನಾ ಕಾರಣಗಳಿಂದ ಮುನಿಸಿಕೊಂಡಿದ್ದಾರೆ. ಶಾಸಕ ಹರತಾಳು ಹಾಲಪ್ಪಗೆ ಟಿಕೆಟ್ ನೀಡದಂತೆ ಆಗ್ರಹಿಸಿದ್ದರು. ಇದೆಲ್ಲದರ ನಡುವೆಯೂ ಸಾಗರ ಕ್ಷೇತ್ರದಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಹಾಲಪ್ಪ ಯಶಸ್ವಿಯಾಗಿದ್ದಾರೆ. ಭಿನ್ನರ ಸಿಟ್ಟು ಶಮನವಾಗಲಿದೆಯಾ? ಅವರ ಮುಂದಿನ ನಡೆ ಏನಾಗಲಿದೆ? ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಶಿವಮೊಗ್ಗ ಗ್ರಾಮಾಂತರ : ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ್ ಅವರು ಎರಡನೇ ಬಾರಿ ಸ್ಪರ್ಧೆಗೆ ಅವಕಾಶ ಪಡೆದುಕೊಳ್ಳುವಲ್ಲಿ ಯಶವಾಗಿದ್ದಾರೆ. ಸದರಿ ಕ್ಷೇತ್ರದಲ್ಲಿಯೂ ಎರಡಕ್ಕೂ ಹೆಚ್ಚು ಜನ ಟಿಕೆಟ್ ಆಕಾಂಕ್ಷಿಗಳಿದ್ದರು. ಆದರೆ ಇತರೆ ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಎದುರಾಗಿರುವ ಭಿನ್ನರ ಭಾರೀ ಅಡೆತಡೆ ಅಶೋಕನಾಯ್ಕ್ ಅವರಿಗಿಲ್ಲವಾಗಿದೆ.
ತೀರ್ಥಹಳ್ಳಿ: ಸದರಿ ಕ್ಷೇತ್ರದಲ್ಲಿ ನಿರೀಕ್ಷಿಸಿದಂತೆ ಹಾಲಿ ಕ್ಷೇತ್ರದ ಶಾಸಕರೂ ಆದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಸ್ಪರ್ಧೆಗೆ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದೆ. ಬಿಜೆಪಿಯಲ್ಲಿ ಆರಗ ಎದುರು ಬಿಜೆಪಿ ಟಿಕೆಟ್ ಗೆ ಯಾವುದೇ ಪೈಪೋಟಿ ಕಂಡುಬಂದಿರಲಿಲ್ಲ. ಇದರಿಂದ ಆರಗ ಅವರಿಗೆ ನಿರಾಯಾಸವಾಗಿ ಟಿಕೆಟ್ ಲಭಿಸುವಂತಾಗಿದೆ.
ಭದ್ರಾವತಿ: ಸದರಿ ಕ್ಷೇತ್ರದಲ್ಲಿ ಮಂಗೋಟೆ ರುದ್ರೇಶ್ ಅವರನ್ನು ಕಣಕ್ಕಿಳಿಸಲಾಗುತ್ತಿದೆ. ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದ ಪವಿತ್ರ ರಾಮಯ್ಯ ಅವರು ಸದರಿ ಕ್ಷೇತ್ರದ ಸ್ಪರ್ಧಾಕಾಂಕ್ಷಿಯಾಗಿದ್ದರು.
ಒಟ್ಟಾರೆ ಬಿಜೆಪಿ ಪಕ್ಷವು, ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ಯಾವುದೇ ಹೊಸ ಪ್ರಯೋಗಕ್ಕೆ ಮುಂದಾಗಿಲ್ಲ. ಅಳೆದು ತೂಗಿ ನಾಲ್ಕು ಕ್ಷೇತ್ರಗಳಲ್ಲಿ ಹಳೇ ಮುಖಗಳಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಆರು ಕಡೆ ವಿಜಯದ ಪತಾಕೆ ಹಾರಿಸಿದ್ದ ಆ ಪಕ್ಷದ ಸಾಧನೆ ಈ ಬಾರಿ ಏನಾಗಲಿದೆ ಎಂಬುವುದು ಮಾತ್ರ ಮಿಲಯನ್ ಡಾಲರ್ ಪ್ರಶ್ನೆಯಾಗಿದೆ!
ಶಿವಮೊಗ್ಗ ನಗರ ಕ್ಷೇತ್ರದತ್ತ ಕುತೂಹಲದ ಚಿತ್ತ…!
*** ಭಾರೀ ಕುತೂಹಲ ಕೆರಳಿಸಿದ್ದ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಮೊದಲ ಹಂತದಲ್ಲಿ ಟಿಕೆಟ್ ಘೋಷಣೆಯಾಗಿಲ್ಲ. ಕ್ಷೇತ್ರದ ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಕಾರಣದಿಂದ ಯಾರಿಗೆ ಟಿಕೆಟ್ ಒಲಿಯಲಿದೆ ಎಂಬ ಕುತೂಹಲ ಮನೆ ಮಾಡಿದೆ. ಬಿಜೆಪಿ ಪಕ್ಷದ ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿ ಘೋಷಣೆ ವೇಳೆ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಘೋಷಣೆಯಾಗುವುದು ಬಹುತೇಕ ನಿಶ್ಚಿತವಾಗಿದೆ.