ಬೆಂಗಳೂರಿನ ಉದ್ಯಮಿಯಿಂದ 3000 ಹಳ್ಳಿ ಮಕ್ಕಳಿಗೆ ನೋಟ್ ಬುಕ್ ವಿತರಣೆ!

ಶಿವಮೊಗ್ಗ, ಜ. 6:  ಬೆಂಗಳೂರಿನ ಉದ್ಯಮಿ ಆರ್.ಚಂದ್ರು ಅವರು, ಶಿವಮೊಗ್ಗ ತಾಲೂಕಿನ ಕುಂಸಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ 3000 ಗ್ರಾಮೀಣ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡುವ ಕಾರ್ಯಕ್ಕೆ ಶುಕ್ರವಾರದಿಂದ ಚಾಲನೆ ನೀಡಿದ್ದಾರೆ.

ಕುಂಸಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಆರ್.ಚಂದ್ರು ಅವರ ಅನುಪಸ್ಥಿತಿಯಲ್ಲಿ ಅವರ ಕುಟುಂಬದವರು ಶಾಲಾ ಮಕ್ಕಳಿಗೆ ನೋಟ್ ಬುಕ್ ನೀಡುವ ಮೂಲಕ, ವಿತರಣಾ ಕಾರ್ಯಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಾರದಾ ರಂಗನಾಥ್ ಅವರು ಮಾತನಾಡಿ, ಆರ್. ಚಂದ್ರು ಅವರು ತಾವು ಹುಟ್ಟಿ ಬೆಳೆದ ಹಳ್ಳಿಯ ಮಕ್ಕಳಿಗೆ ಪ್ರತಿ ವರ್ಷ ನೋಟ್ ಬುಕ್ ವಿತರಣೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.

ಶಿವಮೊಗ್ಗದ ಹೋಟೆಲ್ ಉದ್ಯಮಿ ಹಾಗೂ ಆರ್. ಚಂದ್ರು ಅವರ ಸ್ನೇಹಿತ ಎನ್.ರಾಜೇಂದ್ರ ಅವರು ಮಾತನಾಡಿ, ಮೂಲತಃ ಕುಂಸಿ ಗ್ರಾಮದವರಾದ ಆರ್.ಚಂದ್ರು ಅವರು ಕಳೆದ 17 ವರ್ಷಗಳಿಂದ ಕುಂಸಿ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಿಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ವರ್ಷ ಕೂಡ ನೋಟ್ ಬುಕ್ ವಿತರಣೆ ಮಾಡುತ್ತಿರುವುದು ನಿಜಕ್ಕೂ ಅಭಿನಂದನೀಯ ಎಂದು ಹೇಳಿದರು.

ಆರ್.ಚಂದ್ರು ಸಹೋದರ ಹುಲಿಗೆಪ್ಪ ಮಾತನಾಡಿ, ಕುಂಸಿ ಸುತ್ತಮುತ್ತಲಿನ ಎಲ್ಲ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಲಾಗುವುದು. ಆಯಾ ಶಾಲೆಗಳಿಗೆ ನೋಟ್ ಬುಕ್ ತಲುಪಿಸುವ ಕಾರ್ಯ ನಡೆಸಲಾಗುವುದು ಎಂದು ತಿಳಿಸಿದರು.

ಸಮಾರಂಭದಲ್ಲಿ ಹುಲಿಗೆಪ್ಪ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕುಂಸಿ ಗ್ರಾಪಂ ಉಪಾಧ್ಯಕ್ಷೆ ರೂಪ ಪ್ರಭಾಕರ್, ಯುವ ಮುಖಂಡ ಪ್ರದೀಪ್, ಉದ್ಯಮಿ ರಾಘವೇಂದ್ರ, ಶಿಕ್ಷಕರ ಸಂಘದ ಜಯಣ್ಣ ಸೇರಿದಂತೆ ಮೊದಲಾದವರಿದ್ದರು.

Previous post ಭ್ರಷ್ಟ ಅಧಿಕಾರಿಗಳ ವಿರುದ್ಧ ತ್ವರಿತ ಕಾನೂನು ಕ್ರಮ: ಲೋಕಾಯುಕ್ತ ಬಿ.ಎಸ್.ಪಾಟೀಲ್ ಎಚ್ಚರಿಕೆ!
Next post ‘ಸಿದ್ದವಾಗುತ್ತಿದೆ ಭ್ರಷ್ಟರ ಪಟ್ಟಿ… ವಸೂಲಿ ದಂಧೆಕೋರರಿಗೆ ಎಚ್ಚರಿಕೆ…!’ : ಲೋಕಾಯುಕ್ತ ಬಿ.ಎಸ್.ಪಾಟೀಲ್