
ಸಾಗರ ವಿಧಾನಸಭಾ ಕ್ಷೇತ್ರ : ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿ ಡಾ.ರಾಜನಂದಿನಿ ಬಿಜೆಪಿಯತ್ತ!
ಪುತ್ರಿಯ ನಡೆಗೆ ಗರಂ : ಕಾಂಗ್ರೆಸ್ ತೊರೆಯುವುದಿಲ್ಲ ಎಂದ ಕಾಗೋಡು…
-ಬಿ. ರೇಣುಕೇಶ್
ಸಾಗರ, ಎ. 12: ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ, ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸ್ಪರ್ಧಾಕಾಂಕ್ಷಿಯಾಗಿದ್ದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜ ನಂದಿನಿ ಅವರು ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ, ಬಿಜೆಪಿ ಪಕ್ಷದತ್ತ ಹೆಜ್ಜೆ ಹಾಕಿದ್ದಾರೆ!
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಸಾಗರ ಕ್ಷೇತ್ರದ ಬಿಜೆಪಿ ಶಾಸಕ ಹರತಾಳು ಹಾಲಪ್ಪರೊಂದಿಗೆ ಡಾ.ರಾಜನಂದಿನಿ ಅವರು ಭೇಟಿಯಾಗಿ ಚರ್ಚಿಸಿದ್ದಾರೆ. ಈ ಮೂಲಕ ಅವರ ಬಿಜೆಪಿ ಸೇರ್ಪಡೆ ಖಚಿತವಾಗಿದೆ.

ಪುತ್ರಿಯ ಈ ದಿಢೀರ್ ನಡೆಗೆ ತಂದೆ ಕಾಗೋಡು ತಿಮ್ಮಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಗರ ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ತಮ್ಮ ಪುತ್ರಿ ಬಿಜೆಪಿ ಸೇರ್ಪಡೆಯಾಗುತ್ತಾಳೆಂಬ ಸುದ್ದಿ ಕೇಳಿ ಬೇಸರವಾಗಿದೆ. ಈ ರೀತಿ ಮಾಡುತ್ತಾಳೆಂದು ಕನಸಿನಲ್ಲಿಯೂ ಆಲೋಚಿಸಿರಲಿಲ್ಲ. ಯೋಚನೆಯೂ ಮಾಡಿರಲಿಲ್ಲ.
ತಾವು ರಾಜಕಾರಣದಲ್ಲಿ ಬದ್ಧತೆ, ಸ್ಥಿರತೆಯಿಟ್ಟುಕೊಂಡು ಬೆಳೆದುಬಂದವನಾಗಿದ್ದೆನೆ. ಅದರಂತೆ ನಡೆದುಕೊಂಡು ಬಂದಿದ್ದೆನೆ. ಇಂತಹ ಸನ್ನಿವೇಶದಲ್ಲಿ ಬಿಜೆಪಿ ಪರವಾಗಿ ಮಗಳು ಹೋಗಿರುವುದು ಎದೆಗೆ ಚೂರಿ ಹಾಕಿದಂತಾಗಿದೆ. ಈ ರೀತಿ ಮಾಡಬಾರದಾಗಿತ್ತು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೆ ತಾವೆಂದು ಕಾಂಗ್ರೆಸ್ ಪಕ್ಷ ತ್ಯಜಿಸುವುದಿಲ್ಲ. ಕಾಂಗ್ರೆಸ್ ನಲ್ಲಿಯೇ ಇರುತ್ತೆನೆ. ಪಕ್ಷದ ಅಭ್ಯರ್ಥಿಯ ಪರ ಕಾರ್ಯನಿರ್ವಹಿಸುತ್ತೆನೆ ಎಂದು ತಿಳಿಸಿದ್ದಾರೆ.
ಪುತ್ರಿ ಬಿಜೆಪಿ ಸೇರ್ಪಡೆಯ ಹಿಂದೆ ಏನೋ ತಂತ್ರವಿದೆ. ಹರತಾಳು ಹಾಲಪ್ಪ ಅವರ ಕೈವಾಡವಿದ್ದರೂ ಇರಬಹುದು. ಪುತ್ರಿಯ ಜೊತೆ ಮಾತುಕತೆ ನಡೆಸಿ, ಮನವೊಲಿಕೆಯ ಕಾರ್ಯ ನಡೆಸುತ್ತೆನೆ ಎಂದು ಇದೇ ವೇಳೆ ಕಾಗೋಡು ತಿಮ್ಮಪ್ಪ ಅವರು ತಿಳಿಸಿದ್ಧಾರೆ.
ಬೇಳೂರು ಗೋಪಾಲಕೃಷ್ಣ – ಹರತಾಳು ಹಾಲಪ್ಪ ನಡುವೆ ಜಿದ್ದಾಜಿದ್ದಿನ ಪೈಪೋಟಿ!
*** ಪ್ರಸ್ತುತ ಚುನಾವಣೆಯಲ್ಲಿ ಸಾಗರ ಕ್ಷೇತ್ರದಲ್ಲಿ ಬಿಜೆಪಿ – ಕಾಂಗ್ರೆಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಹರತಾಳು ಹಾಲಪ್ಪ ಅವರಿಗೆ ಪ್ರಬಲ ಸ್ಪರ್ಧೆಯೊಡ್ಡುವುದು ನಿಶ್ಚಿತವಾಗಿದೆ. ಹಳೇ ದೋಸ್ತಿಗಳ ಜಿದ್ದಾಜಿದ್ದಿನ ಅಖಾಡಕ್ಕೆ ವೇದಿಕೆ ಸಿದ್ದವಾಗಿದೆ.

ಈ ನಡುವೆ ಕಾಂಗ್ರೆಸ್ ಟಿಕೆಟ್ ಸಿಗದೆ ಬೇಸರಗೊಂಡಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿ ಡಾ.ರಾಜನಂದಿನಿ ಅವರನ್ನು, ಬಿಜೆಪಿ ಪಕ್ಷಕ್ಕೆ ಕರೆತರುವಲ್ಲಿ ಹಾಲಪ್ಪ ಅವರು ಯಶಸ್ವಿಯಾಗಿದ್ದಾರೆ. ಈ ಮೂಲಕ ರಾಜಕೀಯ ತಂತ್ರಗಾರಿಕೆಗೆ ಮೆರೆದಿದ್ದಾರೆ. ಮುಂದಿನ ದಿನಗಳಲ್ಲಿ ಸಾಗರ ರಾಜಕಾರಣ ಯಾವೆಲ್ಲ ತಿರುವು ಪಡೆದುಕೊಳ್ಳಲಿದೆಯೋ ಇನ್ನಷ್ಟೆ ಕಾದು ನೋಡಬೇಕಾಗಿದೆ.